Advertisement

ಕೋವಿಡ್‌ ಲಸಿಕೆ ಮತ್ತು ಹೃದಯ

03:22 PM May 02, 2021 | Team Udayavani |

ರಮೇಶ ಮತ್ತು ವಿನುತಾ (ಹೆಸರು ಬದಲಾಯಿಸಲಾಗಿದೆ) ಮಣಿಪಾಲದ ನಿವಾಸಿಗಳು. ಅವರ ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವಿನುತಾ ಅವರು ಕಳೆದ ಮೂರು ವರ್ಷಗಳಿಂದ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಎರಡು ವರ್ಷಗಳ ಹಿಂದೆ ಆಕೆಗೆ ಹೃದಯದ ಅಪಧಮನಿಯ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಮೇಶ ಅವರು ಅಧಿಕ ರಕ್ತದೊತ್ತಡ ಹೊಂದಿದ್ದು, ಐದು ವರ್ಷಗಳ ಹಿಂದೆ ಭಾರೀ ಹೃದಯಾಘಾತಕ್ಕೆ ಒಳಗಾದ ಬಳಿಕ ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಂಡಿದ್ದರು. ಈ ದಂಪತಿಯ ಮಕ್ಕಳು ಅವರು ಕೊರೊನಾ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ದಂಪತಿಗೆ ಅದೇನೋ ಹೆದರಿಕೆ. ಅವರು ತಮ್ಮ ಹೃದಯ ವೈದ್ಯ (ಕಾರ್ಡಿಯಾಲಜಿಸ್ಟ್‌) ಜತೆಗೆ ಈ ಸಂಬಂಧವಾಗಿ ನಡೆಸಿದ ಸಂವಾದದ ಸಾರಾಂಶ ಇಲ್ಲಿದೆ.

ಪ್ರಶ್ನೆ: ಹೃದಯ ಕಾಯಿಲೆ ಹೊಂದಿರುವವರಿಗೆ ಕೋವಿಡ್‌-19 ತಗಲುವ ಅಪಾಯ ಹೆಚ್ಚಿದೆಯಂತೆ, ಹೌದೇ?

ಉತ್ತರ: ಹೃದಯ ಕಾಯಿಲೆ ಹೊಂದಿರುವವರಿಗೆ ಕೊರೊನಾ ತಗಲುವ ಅಪಾಯ ಇತರರಿಗಿಂತ ಹೆಚ್ಚು ಎಂಬ ಮಾತಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ಆದರೆ ಹೃದಯ ಸಮಸ್ಯೆ ಉಳ್ಳವರಿಗೆ ಕೊರೊನಾ ತಗಲಿದರೆ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಮತ್ತು ಸಾವಿಗೀಡಾಗುವ ಸಾಧ್ಯತೆಗಳು ಇತರರಿಗಿಂತ ಹೆಚ್ಚಿರುತ್ತವೆ. ಕೊರೊನಾ ಸೋಂಕು ಉರಿಯೂತದಂತಹ ವಿವಿಧ ಸಮಸ್ಯೆಗಳ ಮೂಲಕ ಹೃದಯದ ಮೇಲೆ ಹೆಚ್ಚು ಒತ್ತಡ ಉಂಟುಮಾಡುವುದೇ ಇದಕ್ಕೆ ಕಾರಣ. ಆದ್ದರಿಂದ ಅವಕಾಶ ಸಿಕ್ಕಿದಾಗ ಹೃದ್ರೋಗಿಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ.

ಪ್ರಶ್ನೆ: ಹೃದಯ ಸಮಸ್ಯೆಯಿಂದ ನಮ್ಮ ರೋಗ ಪ್ರತಿರೋಧಕ ಶಕ್ತಿ ದುರ್ಬಲವಾಗುತ್ತದೆ ಎಂದು ಕೇಳಿದ್ದೇವೆ. ಹಾಗಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದಂತೆ. ಇದು ನಿಜವೇ?

Advertisement

ಉತ್ತರ: ಇದು ಸುಳ್ಳು. ನಿಜ ಹೇಳಬೇಕೆಂದರೆ, ಹೃದ್ರೋಗಿಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಲಸಿಕೆ ಸುರಕ್ಷಿತವಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇತರರಿಗೆ ಎಷ್ಟಿದೆಯೋ ಹೃದ್ರೋಗಿಗಳಿಗೂ ಅಷ್ಟೇ ಇರುತ್ತದೆ. ಲಸಿಕೆಯಿಂದ ಹೃದ್ರೋಗಿಗಳಿಗೆ ಹೆಚ್ಚು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.

ಪ್ರಶ್ನೆ: ಕೊರೊನಾ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯಗಳೇನು?

ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ, ಲಸಿಕೆ ಹಾಕಿಸಿಕೊಂಡ ಜಾಗ ಬಾತುಕೊಳ್ಳು ವುದು ಮತ್ತು ನೋವು, ಜ್ವರ ಬಂದಂತಾಗು ವುದು ಮತ್ತು ಅನಾರೋಗ್ಯದ ಅನುಭವ, ದೇಹದಲ್ಲಿ ನೋವುಗಳು. ಲಸಿಕೆ ಹಾಕಿಸಿಕೊಂಡ ಶೇ. 10

ಮಂದಿಯಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಜ್ವರ ಮತ್ತು ಫ‌ೂÉವಿನಂತಹ ಲಕ್ಷಣಗಳು ಉಂಟಾಗುವ ಪ್ರಮಾಣ ಕಡಿಮೆ; ಶೇ. 10ಕ್ಕಿಂತಲೂ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುತ್ತವೆ. ಪ್ಯಾರಾಸಿಟಮಾಲ್‌ ಮಾತ್ರೆ ಮತ್ತು ವಿಶ್ರಾಂತಿಯಿಂದ ಈ ಅಡ್ಡಪರಿಣಾಮಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದಾಗಿದೆ.

ಪ್ರಶ್ನೆ: ರಕ್ತ ಹೆಪ್ಪುಗಟ್ಟುವಂತಹ ಗಂಭೀರ ಅಡ್ಡಪರಿಣಾಮಗಳ ಬಗ್ಗೆ?

ಉತ್ತರ: ಇತ್ತೀಚೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ (“ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಅಡ್ಡ ಪರಿಣಾಮಗಳ ಬಗ್ಗೆ ಸಮಿತಿ ರಚಿಸಿದ ಸರಕಾರ’, ಬಿಸಿನೆಸ್‌ ಟುಡೇ.ಇನ್‌, ಎಪ್ರಿಲ್‌ 9, 2021) ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ನೀಡಲಾದ 3.4 ಆ್ಯಸ್ಟ್ರಾಜೆನೆಕಾ ಲಸಿಕೆ ಡೋಸ್‌ಗಳ ಪೈಕಿ ರಕ್ತ ಹೆಪ್ಪುಗಟ್ಟಿರುವ ಸುಮಾರು 200 ಪ್ರಕರಣಗಳು ವರದಿಯಾಗಿವೆ. ಆದರೆ ಭಾರತದಲ್ಲಿ ನೀಡಲಾಗಿರುವ 9.11 ಡೋಸ್‌ ಕೊವಿಶೀಲ್ಡ್‌ ಲಸಿಕೆಗಳ ಪೈಕಿ ರಕ್ತ ಹೆಪ್ಪುಗಟ್ಟಿರುವ 13 ಪ್ರಕರಣಗಳನ್ನು ಮಾತ್ರವೇ ಅಧ್ಯಯನ ಮಾಡಲಾಗಿದೆ. ಲಸಿಕೆ ಒದಗಿಸುವ ಪ್ರಯೋಜನ (ಕೋವಿಡ್‌ನಿಂದ ರಕ್ಷಣೆ)ಗೆ ಹೋಲಿಸಿದರೆ ಅಡ್ಡಪರಿಣಾಮಗಳಿಗೆ ತುತ್ತಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ.

ಪ್ರಶ್ನೆ: ಹೃದ್ರೋಗಕ್ಕೆ ಔಷಧ ಪಡೆಯುತ್ತಿರುವ ಹೃದಯ ರೋಗಿಗಳು ಲಸಿಕೆ ಸ್ವೀಕರಿಸಿದ ಬಳಿಕ ಅಡ್ಡಪರಿಣಾಮಗಳಿಗೆ ಒಳಗಾಗುತ್ತಾರೆ ಎಂದು ಕೇಳಿದ್ದೇವೆ. ನಿಜವೇ?

ಆ್ಯಂಜಿಯೊಪ್ಲಾಸ್ಟಿ ಅಥವಾ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧ (ಆ್ಯಸ್ಪಿರಿನ್‌ ಅಥವಾ ಇತರ) ಸೇವಿಸುತ್ತಿರುವ ರೋಗಿಗಳು ಅಥವಾ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಔಷಧ (ವಾರ್ಫಾರಿನ್‌, ಡಾಬಿಗಟ್ರಾನ್‌ ಮತ್ತು ಇತರ) ಸೇವಿಸುತ್ತಿರುವ ರೋಗಿಗಳು ಲಸಿಕೆ ಸ್ವೀಕರಿಸಿದ ಬಳಿಕ ಚುಚ್ಚುಮದ್ದು ಚುಚ್ಚಿದ ಸ್ಥಳದ ಬಗ್ಗೆ ನಿಗಾ ವಹಿಸಬೇಕು. ಇಂಜೆಕ್ಷನ್‌ ಪಡೆದ ಬಳಿಕ ಅಲ್ಲಿ ಉಜ್ಜದೆ ಸಮರ್ಪಕವಾಗಿ ಒತ್ತಿ ಹಿಡಿದುಕೊಂಡರೆ ಅಲ್ಲಿ ರಕ್ತ ಸಂಗ್ರಹವಾಗಿ ನೀಲಿಯಾಗುವುದು ಅಥವಾ ಊತವನ್ನು ತಪ್ಪಿಸಬಹುದು. ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು ಸಾಮಾನ್ಯವಾಗಿದ್ದು, ರಕ್ತ ತೆಳು ಮಾಡುವ ಆ್ಯಸ್ಪಿರಿನ್‌ ಅಥವಾ ವಾರ್ಫಾರಿನ್‌ ಮತ್ತಿತರ ಔಷಧ ತೆಗೆದುಕೊಳ್ಳದ ಎಲ್ಲರಿಗೂ ಉಂಟಾಗುತ್ತದೆ.

ಕೋವಿಡ್‌-19: ರಕ್ಷಣೆಯ  ಮಹಾಸ್ತಂಭಗಳು

ಮಾಸ್ಕ್

ಸರಿಯಾದ ಸಾಮಗ್ರಿಯದು

ಮೂಗು, ಬಾಯಿ ಸರಿಯಾಗಿ ಮುಚ್ಚಿಕೊಳ್ಳುವುದು

ಯಾವಾಗಲೂ ಸರಿಯಾಗಿ ಧರಿಸಿರುವುದು (ನಿಮ್ಮ ಸುರಕ್ಷಾ ವಲಯ ಬಿಟ್ಟು)

ಲಸಿಕೆ ಪಡೆಯುವುದು

ಲಭ್ಯವಿದ್ದಾಗಲೆಲ್ಲ ಪಡೆಯಿರಿ

2ನೇ ಡೋಸ್‌ ಬಳಿಕ 2 ವಾರಗಳ ಅನಂತರ ಉತ್ತಮ ಪರಿಣಾಮ

ಸೋಂಕು ತಡೆಯದು, ಆದರೆ ಗಂಭೀರ ಸಮಸ್ಯೆ ನಿವಾರಿಸುತ್ತದೆ

ಲಸಿಕೆ ಪಡೆಯದೆ ಇರುವುದಕ್ಕೆ ಸಕಾರಣ ಇಲ್ಲ

ಸಾಮಾಜಿಕ ಅಂತರ

ಜನರ ನಡುವೆ 6 ಅಡಿ ಅಂತರ

ಸಾಮಾಜಿಕ/ಕೌಟುಂಬಿಕ ಸಮಾರಂಭ, ಜನಸಂದಣಿಗಳಿಂದ ದೂರ ಇರುವುದು

ಕೆಲಸದ ಸ್ಥಳ, ಹೊಟೇಲುಗಳಲ್ಲಿ ಎಚ್ಚರದಿಂದ ಇರುವುದು

ಕೈತೊಳೆಯುವುದು

ಸರಿಯಾಗಿ ತೊಳೆಯುವುದು

ಕನಿಷ್ಠ 20 ಸೆಕೆಂಡ್‌ ಕಾಲ ತೊಳೆಯುವುದು

ಸಾಧ್ಯವಾದಷ್ಟು ಬಾರಿ ಪದೇಪದೆ ತೊಳೆಯುವುದು

ಡಾ| ಎಂ. ಸುಧಾಕರ ರಾವ್‌

ಅಸೊಸಿಯೇಟ್‌ ಪ್ರೊಫೆಸರ್‌, ಕಾರ್ಡಿಯಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

ಡಾ| ಸುಹೈಲ್‌ ಧಾನ್ಸೆ

 

Advertisement

Udayavani is now on Telegram. Click here to join our channel and stay updated with the latest news.

Next