Advertisement

ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್‌ ನೀಡಲು ಚಾಲನೆ ಕೊಟ್ಟ: ಡಿಸಿಎಂ

06:13 PM Jun 01, 2021 | Team Udayavani |

ಬೆಂಗಳೂರು: ವಿದೇಶದಲ್ಲಿ ಉದ್ಯೋಗ, ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಚಾಲನೆ ನೀಡಿದರು.

Advertisement

ಬೆಂಗಳೂರು ನಗರ ವಿಶ್ವವಿದ್ಯಾಲಯದ ‌ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ಹಾಕಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 6 ವಾರಗಳ ಅಂತರದಲ್ಲಿ ಇವರಿಗೆ ಎರಡನೇ ಡೋಸ್‌ ನೀಡಿ, ವ್ಯಾಕ್ಸಿನ್‌ ಪಡೆದಿರುವ ಬಗ್ಗೆ ಪಾಸ್ ಪೋರ್ಟ್ ನಂಬರ್ ಸಹಿತ ಸರ್ಟಿಫಿಕೇಟ್‌ ನೀಡಲಾಗುವುದು ಎಂದರು.

ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ʼಕೋವಿಶೀಲ್ಡ್‌ʼ ಲಸಿಕೆಯನ್ನೇ ನೀಡಲಾಗುತ್ತಿದೆ  ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು. ಲಸಿಕೆ ಪಡೆಯುವವರು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಜತೆಗೆ, ವಿದೇಶದಲ್ಲಿನ ತಮ್ಮ ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಹಾಜರುಪಡಿಸುವುದು ಕಡ್ಡಾಯ. ಅದೇ ಮಾರ್ಗಸೂಚಿಯಂತೆ ಇವರಿಗೆ ವ್ಯಾಕ್ಸಿನ್‌ ಕೊಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಇದನ್ನೂ ಓದಿ : ಸದ್ಯಕ್ಕೆ ಯಡಿಯೂರಪ್ಪನರೆ ಮುಖ್ಯಮಂತ್ರಿ : ಶಾಸಕ ಸಿ.ಟಿ ರವಿ

ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ:

Advertisement

ಬ್ಲ್ಯಾಕ್‌ ಫಂಗಸ್‌ಗೆ ʼಲೈಸೋಜೋಮಲ್‌ ಆಂಫೋಟೆರಿಸಿನ್- ಬಿʼ ಔಷಧಿಯ ಕೊರತೆ ಮಾತ್ರ ಇದೆ. ಅದಕ್ಕೆ ಪರ್ಯಾಯವಾಗಿ ಇನ್ನೂ ಪರಿಣಾಮಕಾರಿಯಾದ ಸಾಕಷ್ಟು ಔಷಧಿಗಳಿವೆ. ಆದರೆ, ಸೈಡ್‌ ಏಫೆಕ್ಟ್‌ಗಳಾಗುತ್ತಿವೆ ಎನ್ನುವ ಕಾರಣವೊಡ್ಡಿ ಜನರು ಇವುಗಳನ್ನು ಬಳಕೆ ಮಾಡುತ್ತಿಲ್ಲ. ಆದರೂ ಸರಕಾರಿ-ಖಾಸಗಿ ಆಸ್ಪತ್ರೆಗಳಿಗೆ ಈ ಪರ್ಯಾಯ ಔಷಧಿಗಳನ್ನೇ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ʼಲೈಸೋಜೋಮಲ್‌ ಆಂಫೋಟೆರಿಸಿನ್- ಬಿʼʼ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈಗ ಒಂದು ಲಕ್ಷ ವಯಲ್ಸ್‌ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ಮೂರು ಲಕ್ಷ ವಯಲ್ಸ್‌ ಖರೀದಿಗೆ  ಆದೇಶ ನೀಡಲಾಗಿದೆ. ʼಕಾಸೋಕೊನೋಜಲ್‌ʼ ಔಷಧಿಯ 15,000  ವಯಲ್ಸ್‌ ಖರೀದಿಗೆ ಆದೇಶ ಕೊಡಲಾಗಿದೆ. ʼಇಸ್ವಕೋನೋಜಲ್‌ʼ ಎಂಬ ಔಷಧಿಯ 7,000 ವಯಲ್ಸ್‌, ʼಪೊಸಕೊನೊಜಲ್‌ʼ ಟ್ಯಾಬ್ಲೆಟ್‌ ಖರೀದಿಗೂ ಆದೇಶ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

ಇನ್ನು ಲಾಕ್‌ಡೌನ್‌ ಮುಂದುವರಿಸುವ ಅಥವಾ ಸೆಮಿಲಾಕ್‌ ಮಾಡುವ ಬಗ್ಗೆ ತಜ್ಞರ ವರದಿ ಬಂದ ಮೇಲೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ನೀಡುವ ಕೆಲಸ ಮುಂದುವರಿಯಲಿದೆ. ಶಾಸಕ ಪುಟ್ಟಣ್ಣ, ಸಿಟಿ ವಿವಿ ಕುಲಪತಿ ಡಾ.ಲಿಂಗರಾಜ ಗಾಂಧಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ವಿವಿ ಕುಲಸಚಿವ ರಮೇಶ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next