Advertisement

ಯುಕೆಪಿ ಕಾಮಗಾರಿಗೆ ಕೋವಿಡ್‌ ಅಡ್ಡಿ

03:46 PM Aug 16, 2020 | Suhan S |

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಹಂತದ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ಉತ್ಸುಕರಾಗಿದ್ದೇವೆ. ಆದರೆ, ಕೋವಿಡ್ ಸಂಕಷ್ಟದಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಕಳೆದ ವರ್ಷ ಪ್ರವಾಹ, ವಿವಿಧೆಡೆ ಭೂಕುಸಿತ, ಈಗ ಕೋವಿಡ್ ಸಂಕಷ್ಟದಿಂದ ಅಗತ್ಯ ಅನುದಾನ ಲಭ್ಯವಾಗಿಲ್ಲ. ಯುಕೆಪಿಗೆ 10 ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದರೂ ಈ ಎಲ್ಲ ಸಂಕಷ್ಟಗಳಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣ ಬರುತ್ತಿಲ್ಲ. ಇದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ವ್ಯಾಪಾರ, ಉದ್ಯಮ, ಜನಜೀವನ ಸಹಜ ಸ್ಥಿತಿಗೆ ಬರಬೇಕು. ಸರ್ಕಾರಕ್ಕೆ ವಾರ್ಷಿಕ ಬರುತ್ತಿದ್ದ ಆದಾಯವೂ ಬರಬೇಕು. ಇದಕ್ಕಾಗಿ ಇನ್ನೂ ಸ್ವಲ್ಪ ದಿನ ಕಾಯಬೇಕು ಎಂದರು.

ಅಂದುಕೊಂಡಂತೆ ಆಗ್ತಾ ಇಲ್ಲ: ರಾಜ್ಯದ ಸಮಗ್ರ ಅಭಿವೃದ್ಧಿಯ ಆಶಯದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಆದರೆ, ಪ್ರವಾಹ, ಕೋವಿಡ್ ದಿಂದ ಅದೆಲ್ಲ ಸಾಧ್ಯವಾಗುತ್ತಿಲ್ಲ. ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಹೀಗಾಗಿ ಅಂದುಕೊಂಡಂತೆ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ. ಇದೆಲ್ಲದರ ಮಧ್ಯೆಯೂ ಪ್ರಧಾನಿ, ಮುಖ್ಯಮಂತ್ರಿಗಳು ಎಲ್ಲ ಕೆಲಸ ಮುಂದುವರಿಸಿಕೊಂಡು ಹೊರಟಿದ್ದಾರೆ. ಸರ್ಕಾರಿ ನೌಕರರಿಗೆ ಒಂದು ರೂಪಾಯಿ ವೇತನ ಕಡಿತ ಮಾಡಿಲ್ಲ ಎಂದರು.

ಕೃತಕ ಅಭಾವ ಸೃಷ್ಟಿ: ಜಿಲ್ಲೆಯಲ್ಲಿ ಕೆಲವು ರಸಗೊಬ್ಬರ ಮಾರಾಟಗಾರರು, ಯೂರಿಯಾ ಕೃತಕ ಅಭಾವ ಸೃಷ್ಟಿಸಿದ್ದಾರೆ. ಈಗಾಗಲೇ ಜಿಲ್ಲೆಗೆ ಯೂರಿಯಾ ಬಂದಿದೆ. ಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರೊಂದಿಗೆ ಮಾತನಾಡಿದ್ದು, ಆ.18, 19ರಂದು ಇನ್ನಷ್ಟು ಯೂರಿಯಾ ಬರಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಕೆಲವು ಅಂಗಡಿಗಾರರು 280 ರೂ.ಗೆ ಒಂದು ಪ್ಯಾಕೆಟ್‌ ಇರುವ ಯೂರಿಯಾವನ್ನು 400 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಈ ರೀತಿ ಕಂಡುಬಂದಲ್ಲಿ ಕೂಡಲೇ ಎಸಿ, ಕೃಷಿ ಅಧಿಕಾರಿಗಳು ದಾಳಿ ನಡೆಸಿ ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಲು ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next