Advertisement

ಸರ್ಕಾರದಿಂದಲೇ ಕೋವಿಡ್‌ ಚಿಕಿತ್ಸಾ ವೆಚ್ಚ ಭರಣ

02:34 PM Aug 15, 2020 | Suhan S |

ಹುಬ್ಬಳ್ಳಿ: ಬಡವರು, ಶ್ರೀಮಂತರು ಎನ್ನದೆ ಕೋವಿಡ್‌ -19 ಸೋಂಕಿತರೆಲ್ಲರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಯಾರಾದರು ಖಾಸಗಿಯಾಗಿ ಚಿಕಿತ್ಸೆ ಪಡೆಯಲು ಮುಂದಾದರೆ ಮಾತ್ರ ಆಸ್ಪತ್ರೆಗಳು ಅಂಥವರಿಗೆ ಸರಕಾರ ನಿಗದಿ ಪಡಿಸಿದ ದರ ಆಕರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ಸ್ಥಳೀಯ ಮಜೇಥಿಯಾ ಫೌಂಡೇಶನ್‌ ವತಿಯಿಂದ ನವನಗರದ ದಿ ಕೆಸಿಟಿಆರ್‌ಐ ಆವರಣದಲ್ಲಿ ಹಾಸ್ಪೈಸ್‌ ಪ್ರಾಜೆಕ್ಟ್‌ನಡಿ ನಿರ್ಮಿಸಲಾದ 60 ಹಾಸಿಗೆಯ “ರಮೀಲಾ ಪ್ರಶಾಂತಿ ಮಂದಿರ’ವನ್ನು ಕೋವಿಡ್‌ ಆರೋಗ್ಯ ಕೇಂದ್ರದ ಉದ್ದೇಶಕ್ಕಾಗಿ ಹಸ್ತಾಂತರಿಸುವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಖಾಸಗಿಯ 300 ಆಸ್ಪತ್ರೆಗಳ ಸಹಯೋಗದೊಂದಿಗೆ ಸದ್ಯ 750 ಬೆಡ್‌ ಗಳಿವೆ. ಕಿಮ್ಸ್‌ ಒಳಗೊಂಡು ಒಂದು ಸಾವಿರಕ್ಕೂ ಅಧಿಕ ಬೆಡ್‌ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿ ಈಗ ಕೋವಿಡ್‌ -19 ಹಾಸಿಗೆಗಳಿಗೆ ಕೊರತೆಯಿಲ್ಲ. ಮಜೇಥಿಯಾ ಫೌಂಡೇಶನ್‌ದವರು 60 ಹಾಸಿಗೆಗಳ ಆರೋಗ್ಯ ಕೇಂದ್ರ ಸ್ಥಾಪಿಸಿರುವುದು ಮತ್ತಷ್ಟು ಅನುಕೂಲವಾಗಿದೆ ಎಂದರು.

ಮಜೇಥಿಯಾ ಫೌಂಡೇಶನ್‌ದವರು ರೆಸಾರ್ಟ್‌ ರೀತಿ ದೇಶದಲ್ಲೇ ಮಾದರಿಯಾದ ಹಾಸ್ಪೆ çಸ್‌ ನಿರ್ಮಿಸುವ ಕನಸಿನ ಯೋಜನೆ ಹೊಂದಿದ್ದಾರೆ. ಅದು ಬೇಗನೆ ಫಲಪ್ರದವಾಗಲಿ ಎಂದರು. ಕೆಸಿಟಿಆರ್‌ಐದ ಡಾ| ಬಿ.ಆರ್‌. ಪಾಟೀಲ ಮಾತನಾಡಿ, ಕೆಸಿಟಿಆರ್‌ಐನ ಕ್ಯಾನ್ಸರ್‌ ಆಸ್ಪತ್ರೆ ಕಳೆದ 43 ವರ್ಷಗಳಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ.ಕೋವಿಡ್‌-19 ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ, ಮನೆಯಲ್ಲಿ ಇರಲಾಗದವರಿಗೆ ಮೈಲ್ಡ್‌ ಮಾಲ್ಡರೇಟ್‌ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಮಜೇಥಿಯಾ ಫೌಂಡೇಶನ್‌ದವರು ರೋಗಿಗಳಿಗೆ, ಸಿಬ್ಬಂದಿಗೆ ಉಚಿತವಾಗಿ ಉಪಹಾರ, ಊಟ ನೀಡುತ್ತಾರೆ. ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಕೋವಿಡ್‌-19ರಿಂದ ಗುಣಮುಖರಾದ 19 ಜನರು ಪ್ಲಾಸ್ಮಾ ದಾನ ಮಾಡಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.

ಮಜೇಥಿಯಾ ಫೌಂಡೇಶನ್‌ ಚೇರ¾ನ್‌ ಜಿತೇಂದ್ರ ಮಜೇಥಿಯಾ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರಕಾರದ ನಿಧಿಯನ್ನು ಅವಳಿ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಂದು ಮೆಟ್ರೋ ಸಿಟಿಗಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಆ ನಿಟ್ಟಿನಲ್ಲಿ ಅವಳಿನಗರದಲ್ಲಿನ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬೇಕು ಎಂದರು.

ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷೆ ನಂದಿನಿ ಕೆ. ಮಜೇಥಿಯಾ, ಕಶ್ಯಪ್‌ ಮಜೇಥಿಯಾ, ಹಾಸ್ಪೆ ಸ್‌ ಆಡಳಿತ ನಿರ್ದೇಶಕರಾದ ಡಾ| ಕೆ. ರಮೇಶಬಾಬು, ಎಚ್‌.ಆರ್‌. ಪ್ರಹ್ಲಾದರಾವ್‌, ಸಂಜೀವ ಜೋಶಿ, ಡಾ| ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಕೆಸಿಟಿಆರ್‌ಐ ಆಡಳಿತಾಧಿಕಾರಿ ಮಂಜುಳಾ ರೂಗಿ, ಸುಭಾಸ ಸಿಂಗ್‌ ಜಮಾದಾರ, ಮಹೇಂದ್ರ ಸಿಂಘಿ ಮೊದಲಾದವರಿದ್ದರು.

Advertisement

ರೋಗಿಗಳಿಗೆ ಏನೆಲ್ಲಾ ಸೌಲಭ್ಯ? : ರಮೀಲಾ ಪ್ರಶಾಂತಿ ಮಂದಿರದಲ್ಲಿ ಕೋವಿಡ್‌-19 ಲಕ್ಷಣ ಹೊಂದಿದ ಮೈಲ್ಡ್‌ ಮಾಲ್ಡರೇಟ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟ, ಕ್ಯಾನ್ಸರ್‌, ರಕ್ತದೊತ್ತಡ, ಮಧುಮೇಹದಂತಹ ತೊಂದರೆ ಹೊಂದಿದವರಿಗೆ, ಉಸಿರಾಟ ತೊಂದರೆ ಇದ್ದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಕ್ಸಿಜನ್‌ ನೀಡಿದ ಮೇಲೂ ನಿರ್ವಹಣೆ ಆಗದವರಿಗೆ ಹಾಗೂ ರಕ್ತ ತಪಾಸಣೆ ಮಾಡಿದಾಗ ಗಂಭೀರ ಸ್ಥಿತಿ ಹೊಂದಿದವರಿಗೆ ಡಿಸಿಎಚ್‌ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಎಬಿಆರ್‌ಕೆಗೆ ಒಳಗಾದವರಿಗೆ ಸರಕಾರದ ಯೋಜನೆಯಂತೆ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿಯಾಗಿ ಚಿಕಿತ್ಸೆ ಪಡೆಯುವವರಿಗೆ ಸರಕಾರ ನಿಗದಿಪಡಿಸಿದ ದರದಂತೆ ಜನರಲ್‌ ವಾರ್ಡ್‌, ಸ್ಪೆಷಲ್‌ ವಾರ್ಡ್‌, ಆಕ್ಸಿಜನ್‌ ವಾರ್ಡ್ ದಂತೆ ಮೂರು ವಿಧಗಳಲ್ಲಿ ಖರ್ಚು ಆಕರಿಸಲಾಗುತ್ತದೆ. 60 ಹಾಸಿಗೆ ಸೌಲಭ್ಯ ಇದ್ದು, 40 ಹಾಸಿಗೆಗೆ ಆಕ್ಸಿಜನ್‌ ಸೌಲಭ್ಯವಿದೆ. ರಿಕ್ರಿಯೇಶನ್‌ ಸೌಲಭ್ಯ, ಅಡುಗೆಗೆ ಪ್ರತ್ಯೇಕ ಕೋಣೆ, ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಹೊಂದಿದೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹಾಸ್ಪೈಸ್‌ಗಳಿಲ್ಲ. 4ನೇ ಹಂತ ತಲುಪಿದ ಕ್ಯಾನ್ಸರ್‌ ರೋಗಿಗಳಿಗಾಗಿ ಹಾಸ್ಪೈಸ್‌ ನಿರ್ಮಿಸಲಾಗಿದೆ. ಇದನ್ನು ದೇಶದಲ್ಲೇ ಮಾದರಿಯಾದ ರೆಸಾರ್ಟ್‌ ರೀತಿ ಸ್ಥಾಪಿಸಲು ಯೋಜಿಸಲಾಗಿದೆ. ಈಗ ಇದನ್ನು ಕೋವಿಡ್ ದಂತಹ ವಿಷಮ ಸ್ಥಿತಿಯಲ್ಲಿ ಕೋವಿಡ್‌-19 ಆಸ್ಪತ್ರೆಗೆ ಮೀಸಲಿಡಲಾಗಿದೆ. – ಜಿತೇಂದ್ರ ಮಜೇಥಿಯಾ, ಚೇರ್ಮೇನ್, ಮಜೇಥಿಯಾ ಫೌಂಡೇಶನ್‌

ಕಿಮ್ಸ್‌ನಲ್ಲಿ 250, ಜಿಲ್ಲಾಸ್ಪತ್ರೆಯಲ್ಲಿ 125, ತಾಲೂಕಾಸ್ಪತ್ರೆಗಳಲ್ಲಿ 150 ಆಕ್ಸಿಜನ್‌ ಹಾಸಿಗೆಗಳನ್ನು ಒಂದು ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಆದರೆ ಮಜೇಥಿಯಾ ಫೌಂಡೇಶನ್‌ದವರು ಅದಕ್ಕೂ ಕಡಿಮೆ ಅವಧಿಯಲ್ಲಿ 40 ಆಕ್ಸಿಜನ್‌ ಹಾಸಿಗೆ ಸೇರಿ ಒಟ್ಟು 60 ಹಾಸಿಗೆಗಳ ಕೋವಿಡ್‌-19 ಆರೋಗ್ಯ ಕಾಳಜಿ ಕೇಂದ್ರ ನಿರ್ಮಿಸಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಇನ್ನು ಅವಶ್ಯವೆನಿಸಿದರೆ ಹಾಸಿಗೆಗಳನ್ನು ಹೆಚ್ಚಿಸುವುದಾಗಿಯೂ ತಿಳಿಸಿದ್ದಾರೆ. – ನಿತೇಶ ಪಾಟೀಲ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next