ಕೊರೊನಾ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರಿಗಿಂತ ಹೋಂ ಐಸೊಲೇಶನ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ಒಳಗಾಗುತ್ತಿರು ವವರಿಗೆ ಪ್ರಾಣಾಪಾಯ ಇಲ್ಲದಿರುವುದು ಹಾಗೂ ಈ ಹಿಂದಿನ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಆರೋಗ್ಯ ಸೇವೆಗಾಗಿ ಪಟ್ಟ ಕಷ್ಟ ಈಗಿಲ್ಲ ಎಂಬುದು ಸಮಾಧಾನಕರ.
ರಾಜ್ಯ ಸರಕಾರವು ಮೂರನೇ ಅಲೆಗೆ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್, ಐಸಿಯು ಹೀಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಇದೀಗ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ. ಆದರೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚು. ಇವರಿಗೆ ಔಷಧ ಕಿಟ್ ಹಾಗೂ ಆರೋಗ್ಯ ಸೇವೆಯ ಸಹಾಯವಾಣಿ ನೆರವು, ವೈದ್ಯರ ಸಲಹೆ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಹ ಎಲ್ಲ ಜಿಲ್ಲಾಡಳಿತಗಳಿಗೆ ಈ ಕುರಿತು ಸೂಚನೆ ನೀಡಿರುವುದು ಉತ್ತಮ ಕೆಲಸ. ಆದರೆ ಇದು ಪರಿಣಾಮಕಾರಿ ಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳ ಬೇಕಾಗಿದೆ. ಏಕೆಂದರೆ ಪ್ರತೀ ಮನೆಯಲ್ಲಿಯೂ ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು ಹೀಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಸಾಮಾನ್ಯವಾಗಿದೆ.
ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಹಳ್ಳಿಗಳತ್ತ ವೈದ್ಯರ ನಡೆ ಕಾರ್ಯಕ್ರಮ ಆರಂಭಿಸಿ ಗ್ರಾಮೀಣ ಭಾಗದ ಪ್ರತೀ ಮನೆಗೂ ವೈದ್ಯರ ತಂಡ ಭೇಟಿ ನೀಡಿ ತಪಾಸಣೆ ನಡೆಸಿ ಹೋಂ ಐಸೊಲೇಶನ್‌ನಲ್ಲಿರು ವವರು ಹಾಗೂ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಔಷಧ ಕಿಟ್ ವಿತರಿಸುವ ಅಭಿಯಾನ ರಾಜ್ಯವ್ಯಾಪಿ ನಡೆಸಲಾಗಿತ್ತು. ಅದು ಫಲ ನೀಡಿದ್ದರಿಂದ ಇದೀಗ ಮತ್ತೆ ಆರಂಭಿಸಲಾಗಿದೆ.
ನಗರ ಹಾಗೂ ಗ್ರಾಮೀಣ ಎರಡೂ ಭಾಗದಲ್ಲಿ ಕೊರೊನಾ ಸೋಂಕು ದೃಢಪಟ್ಟು ಹೋಂ ಐಸೊಲೇಶನ್‌ನಲ್ಲಿ ಇರುವವರಿಗೆ ಮಾತ್ರ ಔಷಧ ಕಿಟ್ ಹಾಗೂ ಇತರ ಸೇವೆ ನೀಡಿ ಸುಮ್ಮನಾಗುವಂತಿಲ್ಲ. ಎಷ್ಟೋ ಮಂದಿ ಪರೀಕ್ಷೆ ಮಾಡಿಸಿದರೆ ಪಾಸಿಟಿವ್ ಬರಬಹುದು. ಇದರಿಂದ ದೈನಂದಿನ ದುಡಿಮೆ ಹಾಗೂ ಇತರ ಕೆಲಸಕ್ಕೆ ತೊಂದರೆಯಾಗಬಹುದು. ಕುಟುಂಬ ಸದಸ್ಯರಿಗೂ ಸಮಸ್ಯೆಯಾಗಬಹುದು ಎಂದು ಪರೀಕ್ಷೆಗೆ ಹಿಂಜರಿದು ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬಗ್ಗೆಯೂ ಸರಕಾರ ಗಮನಹರಿಸಬೆಕು.
ಸ್ಥಳೀಯ ಆಡಳಿತಗಳ ಮೂಲಕ ಆರೋಗ್ಯ ಸಮಸ್ಯೆ ಎದುರಿಸುತ್ತಿ ರುವ ನಾಗರಿಕರಿಗೆ ಅಗತ್ಯ ಔಷಧ ಹಾಗೂ ಸಲಹೆ ದೊರಕುವಂತೆ ಮಾಡ ಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷಾ ತೀತವಾಗಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮುಂದಾಗ ಬೇಕು. ಇದಕ್ಕೆ ಸ್ವಯಂ ಸೇವಾ ಸಂಘಟನೆಗಳೂ ಕೈ ಜೋಡಿಸ ಬೇಕಾಗಿದೆ. ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಎದುರಾಗಿದ್ದ ಆರೋಗ್ಯ ಮೂಲಸೌಕರ್ಯ ಸವಾಲಿಗೂ ಮೂರನೇ ಅಲೆಯ ಆರೋಗ್ಯ ಮೂಲಸೌಕರ್ಯ ಸವಾಲಿನ ಸ್ವರೂಪವೇ ಬದಲಾಗಿದೆ. ಹೀಗಾಗಿ ಇಂದಿನ ಅಗತ್ಯತೆಗೆ ತಕ್ಕಂತೆ ಸರಕಾರವು ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಸೂಚನೆ ನೀಡಿದ್ದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕಾಗಿದೆ.
ಸರಕಾರಕ್ಕೆ ಈಗ ಔಷಧದ ಕಿಟ್‌ಗಳನ್ನು ಮನೆ ಮನೆಗೆ ತಲುಪಿಸು ವುದು ಹೊಸ ಸವಾಲು. ಸರಕಾರವೇ ಸೋಂಕು ಕಾಣಿಸಿಕೊಂಡವರು ಗಂಭೀರ ಪರಿಸ್ಥಿತಿ ಇದ್ದರೆ ಹೊರತುಪಡಿಸಿ ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲೇ ಚಿಕಿತ್ಸೆ ಪಡೆಯಿರಿ ಎಂದು ಹೇಳಿದೆ. ಹೀಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಔಷಧ ಕಿಟ್ ತಲುಪಿಸುವುದು ಇಂದಿನ ಅಗತ್ಯ ಹಾಗೂ ಆನಿವಾರ್ಯತೆ. ಹೀಗಾಗಿ ಆಡಳಿತ ಹಾಗೂ ವಿಪಕ್ಷ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ.