ಬೆಂಗಳೂರು: ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಸೋಂಕು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಯೂರೋಫಿನ್ಸ್ ಕ್ಲಿನಿಕಲ್ ಜೆನೆಟಿಕ್ ಇಂಡಿಯಾ ಸಂಸ್ಥೆ ವೈಟ್‌ಫೀಲ್ಡ್ ಬಳಿ ಸ್ಥಾಪಿಸಿರುವ ನೂತನ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಅಗತ್ಯಮೂಲ ಸೌಲಭ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಈಕಾರ್ಯಕ್ರಮ ರೂಪಿಸಿದ್ದು, ಮುಂದಿನ ಒಂದು ವಾರದೊಳಗೆ ಟೆಂಡರ್ ಆಹ್ವಾನಿಸಲಾಗುವುದು ಎಂದರು.
ನಿತ್ಯ 1.5ಲಕ್ಷಪರೀಕ್ಷೆ ಗುರಿ: ಪಾಸಿಟಿವ್ ಪ್ರಕರಣಗಳು ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಶೇ.1.52 ನಿಯಂತ್ರಣ ಸಾಧಿಸಿದ್ದೇವೆ. ಅಲ್ಲದೇ, 50 ಲಕ್ಷ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಮತ್ತೂಂದು ಮೈಲುಗಲ್ಲು ಸಾಧಿಸಿದ್ದೇವೆ . ಮುಂದಿನ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ನಿತ್ಯ1.5 ಲಕ್ಷಕ್ಕೆ ಹೆಚ್ಚಿಸಿಕೊಳ್ಳಲಿದ್ದೇವೆ ಎಂದರು.
ಏನಿದು ಖಾಸಗಿ ಲ್ಯಾಬ್? : ಪ್ರಯೋಗಾಲಯ ಸ್ಥಾಪನೆಗೆ ಅರ್ಹವಾಗಿರುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರದಿಂದಲೇ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯಕೀಯಕಾಲೇಜುಗಳಲ್ಲಿ ಜಾಗವನ್ನು ನೀಡಲಾಗುತ್ತದೆ. ಆ ಜಾಗದಲ್ಲಿ ಖಾಸಗಿಯವರು ತಮ್ಮ ವೆಚ್ಚದಲ್ಲಿ ಕೋವಿಡ್ ಪರೀಕ್ಷೆಗೆ ಅಗತ್ಯವಿರುವ ಆರ್‌ಟಿಪಿಸಿಆರ್ ಪರೀಕ್ಷಾ ತಂತ್ರಗಳನ್ನು ಅಳವಡಿಸಿಕೊಂಡು ಪ್ರಯೋಗಾಲಯಕಾರ್ಯಚಟುವಟಿಕೆ ನಡೆಸಬಹುದು. ಗಂಟಲು ದ್ರವ ಮಾದರಿಗಳ ಪರೀಕ್ಷೆ ಶುಲ್ಕದಲ್ಲಿ ಒಂದಿಷ್ಟು ವಿನಾಯ್ತಿ ಇರಲಿದೆ. ಪರೀಕ್ಷೆ ಶೀಘ್ರವಾಗಿ ನಡೆಯಲಿದೆ.
3 ಸಾವಿರಕ್ಕೇರಿದ ಸಾವು : ಶನಿವಾರ41 ಮಂದಿ ಸೋಂಕಿತರು ಮೃತರಾಗುವ ಮೂಲಕ ಕೋವಿಡ್ ಗೆ ಬಲಿಯಾದವರ ಸಂಖ್ಯೆ 3,024ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹಾಗೆಯೇ 4,259 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಈಗ 2,41,775ಕ್ಕೆ ಏರಿದೆ. ಜತೆಗೆ2,298 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಿಂದ ಬಿಡುಗಡೆ ಹೊಂದಿದ್ದಾರೆ. ಇದರ ಜತೆಗೆ ಪ್ರಸ್ತುತ 51,389 ಸಕ್ರಿಯ ಪ್ರಕರಣ ಗಳಿದ್ದು,285 ಮಂದಿ ತೀವ್ರ ನಿಗಾದಲ್ಲಿದ್ದಾರೆ.