Advertisement

ರೈಲು ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಇಲ್ಲವೇ? ಹಿಂದೆ ಲಾಕ್‌ಡೌನ್‌ ವೇಳೆ ಇದ್ದ ನಿಯಮ ಈಗಿಲ್ಲ

12:46 AM Apr 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾಡುತ್ತಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲವೇ?
ಬೆಂಗಳೂರು ನಗರ ರೈಲ್ವೇ ನಿಲ್ದಾಣದ ಸ್ಥಿತಿ ನೋಡಿದರೆ ಹಾಗೆ ಅನ್ನಿಸದೇ ಇರದು. ಮಹಾರಾಷ್ಟ್ರ, ಕೇರಳ, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಿಂದ ರೈಲಿನಲ್ಲಿ ಬರುತ್ತಿರುವವರು ಕೊರೊನಾ ಪರೀಕ್ಷೆ, ಕೊರೊನಾ ನೆಗೆಟಿವ್‌ ಪ್ರಮಾಣಪತ್ರದ ಪರಿಶೀಲನೆ ಇಲ್ಲದೆ ರೈಲ್ವೇ ನಿಲ್ದಾಣದಿಂದ ಹೊರಬರುತ್ತಿದ್ದಾರೆ!

Advertisement

ನೆರೆ ರಾಜ್ಯಗಳು, ದಿಲ್ಲಿ, ತ. ನಾಡು ಸೇರಿದಂತೆ 35-40 ರೈಲುಗಳು ಸಂಚರಿಸುತ್ತವೆ. ರಾಜ್ಯದ ನಾನಾ ಭಾಗಗಳಿಗೂ ಹತ್ತಾರು ರೈಲುಗಳು ಚಲಿಸುತ್ತವೆ. ಆದರೆ ಬರುವ ಪ್ರಯಾಣಿಕರ ತಪಾಸಣೆ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿಲ್ಲ. ಕೊರೊನಾ ಹೆಚ್ಚಲು ಇದೂ ಒಂದು ಕಾರಣವೇ ಎಂಬ ಗುಮಾನಿ ಕಾಡುತ್ತಿದೆ.

ಹಿಂದೆ ಹೇಗಿತ್ತು ವ್ಯವಸ್ಥೆ?
2020ರ ಲಾಕ್‌ಡೌನ್‌ ತೆರವಾದ ಬಳಿಕ ನಿರ್ದಿಷ್ಟ ಪ್ಲಾಟ್‌ಫಾರಂನಲ್ಲೇ ರೈಲು ನಿಲುಗಡೆಗೆ ಸೂಚನೆ ನೀಡಲಾಗುತ್ತಿತ್ತು. ನಿಲ್ದಾಣದಲ್ಲಿ 20-25 ಕೊರೊನಾ ತಪಾಸಣೆ ಡೆಸ್ಕ್ ಇರುತ್ತಿತ್ತು. ಪ್ರತೀ ಪ್ರಯಾಣಿಕನ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಮಾಹಿತಿ ದಾಖಲಿಸಲಾಗುತ್ತಿತ್ತು. ಯಾವುದೇ ಪ್ರಯಾಣಿಕನಿಗೆ ಸೋಂಕು ದೃಢಪಟ್ಟರೆ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಈಗ ಇಂಥ ಕ್ರಮಗಳಿಲ್ಲ.

ಕರಾವಳಿಯಲ್ಲಿ ಪರೀಕ್ಷೆ , ತಪಾಸಣೆ
ಉಡುಪಿ, ಬೈಂದೂರು, ಸುರತ್ಕಲ್‌ ರೈಲು ನಿಲ್ದಾಣಗಳಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ಥರ್ಮಲ್‌ ಪರೀಕ್ಷೆ ನಡೆಸಲಾಗುತ್ತದೆ. ರೈಲಿನೊಳಗೆ ಟಿಟಿಇ ಅವರು ಪ್ರಯಾಣಿಕರ ನೆಗೆಟಿವ್‌ ಪ್ರಮಾಣಪತ್ರ ಕೇಳುತ್ತಾರೆ. ಆರೋಗ್ಯದ ಸಮಸ್ಯೆ ಇದ್ದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಗಮನಕ್ಕೆ ತರುತ್ತಾರೆ. ಇದುವರೆಗೆ ನಮ್ಮಲ್ಲಿ ಪಾಸಿಟಿವ್‌ ಪ್ರಕರಣದ ಪ್ರಯಾಣಿಕರು ಕಂಡುಬಂದಿಲ್ಲ. ರಾಜ್ಯ ಆರೋಗ್ಯ ಇಲಾಖೆ ಸಿಬಂದಿ ಬಂದರೆ ಮಾತ್ರ ಗಂಟಲುದ್ರವ ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಂಕಣ ರೈಲ್ವೇ ಪಿಆರ್‌ಒ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ. ಮಂಗಳೂರಿನಲ್ಲಿಯೂ ಇದೇ ರೀತಿಯ ಕ್ರಮ ಅನುಸರಿಸಲಾಗುತ್ತಿದೆ.

ನಾನು ಮಹಾರಾಷ್ಟ್ರದಿಂದ ಬಂದಿದ್ದೇನೆ. ನನ್ನ ಬಳಿ ಕೊರೊನಾ ನೆಗೆಟಿವ್‌ ವರದಿ ಇದೆ. ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಲಿಲ್ಲ.
-ಮನೋಜ್‌, ಮಹಾರಾಷ್ಟ್ರ ನಿವಾಸಿ

Advertisement

ಶೇ. 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ. ಈಗ ನೂರಾರು ರೈಲುಗಳು ಸಂಚರಿಸುತ್ತಿರುವುದರಿಂದ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಕಷ್ಟ.
-ಎ.ಕೆ. ವರ್ಮಾ, ವಿಭಾಗೀಯ ರೈಲ್ವೇ ವ್ಯವಸ್ಥಾಪಕರು, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next