ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ “ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ರೂಪಿಸಿದ್ದು ಶುಕ್ರವಾರ ತಾಲೂಕಿನ ಕೆ.ಆರ್. ಪೇಟೆ ಗ್ರಾಮದಲ್ಲಿ ಕೋವಿಡ್- ಕಾರ್ಯಪಡೆಯವರು ಮನೆ-ಮನೆಗೆ ತೆರಳಿ ಕೋವಿಡ್ ತಪಾಸಣೆ ನಡೆಸಿದರು.
ತಹಶೀಲ್ದಾರ್ ಡಾ| ಕೆ.ಜೆ.ಕಾಂತರಾಜ್ ಚಾಲನೆ ನೀಡಿ ಮಾತನಾಡಿ, ಕೊರೊನಾ ಸೋಂಕು 2ನೇ ಅಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿದ್ದು ಇದರ ತಡೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಸೋಂಕು ಕಂಡುಬಂದಲ್ಲಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಇರಬೇಕು. ವೈದ್ಯಕೀಯ ಹಾಗೂ ಔಷಧೋಪಚಾರಗಳು ಇರಲಿದ್ದು ಬೇಗ ಗುಣಮುಖ ಹೊಂದಲು ಸಾಧ್ಯವಾಗಲಿದೆ ಎಂದರು.
ಗ್ರಾಮೀಣ ಜನರು ಕೋವಿಡ್ ತಪಾಸಣೆಗೆ ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ “ವೈದ್ಯರ ನಡೆ ಹಳ್ಳಿಯ ಕಡೆ’ ಎಂಬ ಕಾರ್ಯಕ್ರಮದ ಮೂಲಕ ಹಳ್ಳಿಯ ಪ್ರತಿ ಮನೆಗೆ ವೈದ್ಯರೇ ತೆರಳಿ ಆರೋಗ್ಯ ತಪಾಸಣೆ ಮಾಡಲಿದ್ದು ಪ್ರತಿಯೊಬ್ಬರು ಸಹಕರಿಸುವಂತೆ ಹೇಳಿದರು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ| ಸೀಮಾ ಮಾತನಾಡಿ, ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಂದ ತಪಾಸಣೆಗೆ ಒಳಪಡಬೇಕು. ಕಡ್ಡಾಯವಾಗಿಮಾಸ್ಕ್, ಪರಸ್ಪರ ಸಾಮಾಜಿಕ ಅಂತರ ಪಾಲಿಸಬೇಕು. ಪಾಸಿಟಿವ್ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿದ್ಯಾ ಸಾಗರ್, ಗ್ರಾಪಂ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷೆ ಮೈತ್ರಿ ಇತರರು ಇದ್ದರು.