ಚಿಕ್ಕಬಳ್ಳಾಪುರ: ನಗರದ ವಾರ್ಡ್ ಸಂಖ್ಯೆ 30ರಲ್ಲಿ ಪೋಲಿಸರು ಬಂದೋಬಸ್ತ್ ನಡುವೆ ತಹಶೀಲ್ದಾರ್ ಸಮ್ಮುಖದಲ್ಲಿ ಸೋಮವಾರ 50 ಕ್ಕೂ ಅಧಿಕ ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
ಕೆಲ ವಾರ್ಡ್‌ಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ನಗರಸಭೆಯ ಅಧ್ಯಕ್ಷ ಡಿ.ಎಸ್. ಆನಂದ್‌ರೆಡ್ಡಿ(ಬಾಬು), ಪೌರಾಯುಕ್ತ ಡಿ.ಲೋಹಿತ್ ಮತ್ತು ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರಿ, ನೋಡಲ್ ಅಧಿಕಾರಿ ಶಿಲ್ಪಾ, ಪಿಎಸ್‌ಐ ಹೊನ್ನೇಗೌಡ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ವಿವಿಧೆಡೆ ದ್ರವ ಪರೀಕ್ಷೆ ನಡೆಸಲು ಮುಂದಾದರು.
ಇನ್ನು ನಗರಸಭೆಯ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಪ್ರತಿ ಮನೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡುವ ಮೂಲಕ ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಪ್ರತಿನಿತ್ಯ ವಿವಿಧ ವಾರ್ಡ್‌ಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಿಸಿ ಒಂದು ವೇಳೆಯಲ್ಲಿ ಪಾಸಿಟಿವ್ ಬಂದ ತಕ್ಷಣ ಅವರನ್ನು ಸಮೀಪದ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಿಸಲು ಸ್ಯಾನಿಟೆ„ಸ್ ಮಾಡಿ ಸ್ವತ್ಛಗೊಳಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ವಿವಿಧ ವಾರ್ಡ್‌ಗಳಿ ಕುಂದುಕೊರತೆ ಪರಿಶೀಲನೆ: ಹಂತ-ಹಂತವಾಗಿ ಲಾಕ್‌ಡೌನ್ ಯಶಸ್ವಿಗೊಳಿಸುತ್ತಾ ಅಧಿಕಾರಿಗಳು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸೋಂಕಿತರ ಕುಂದುಕೊರತೆಗಳನ್ನು ಆಲಿಸಿ ಮನೆಯಲ್ಲಿ ಸೂಕ್ತ ರೀತಿಯ ಸೌಲಭ್ಯ ಇಲ್ಲದಿದ್ದಲ್ಲಿ ಕೋವಿಡ್ ಸೆಂಟರ್‌ಗೆ ಸೇರಲು ಸೂಚಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ ಸೋಂಕು ತಡೆಗೆ ವಾರ್ಡ್‌ಗಳಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ವಾಡ್‌ಗಳನ್ನು ಸ್ಯಾನಿಟೆ„ಸ್ ಮಾಡಿ ಶುಚಿಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸೋಂಕಿತರು ಕಂಡುಬಂದರೆ ಆರೈಕೆ ಕೇಂದ್ರಕ್ಕೆ ರವಾನಿಸಲಾಗುತ್ತಿದೆ.
– ಡಿ.ಎಸ್.ಆನಂದ್‌ರೆಡ್ಡಿ(ಬಾಬು) ನಗರಸಭೆ ಅಧ್ಯಕ್ಷ
ನಗರಸಭೆ ವ್ಯಾಪ್ತಿಯ ಯಾವ ವಾರ್ಡ್ ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡು ಬಂದರೇ ಆಯಾ ವಾರ್ಡ್ ಮತ್ತು ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ನಾಗರಿಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ ಪ್ರತಿನಿತ್ಯ ಸುಮಾರು 500 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ.
-ಡಿ.ಲೋಹಿತ್, ನಗರಸಭೆ ಪೌರಾಯುಕ್ತ