Advertisement

ಕೋವಿಡ್‌ ಎರಡನೇ ಅಲೆಯ ಅಪಾಯದ ಹಿನ್ನೆಲೆ : ಆತಿಥ್ಯ ತಾಣಗಳಿಗೆ ಮುನ್ನೆಚ್ಚರಿಕೆ ಸುತ್ತೋಲೆ

11:42 AM Feb 21, 2021 | Team Udayavani |

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ರಾಜ್ಯದ ಆತಿಥ್ಯ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಂಟೈನ್ಮೆಂಟ್‌ ವಲಯಗಳಲ್ಲಿ ಆಹಾರ ನಿರ್ವಹಣೆ ಹಾಗೂ ಅಡುಗೆ ಸೇವೆಗಳನ್ನು ಮುಚ್ಚ ಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ವಿವಾಹ, ರಾಜಕೀಯ ಸಮಾವೇಶ ಸೇರಿ ವಿವಿಧ ಸಮಾರಂಭಗಳಿಗೆ ಅಡುಗೆ ಸೇವೆ ನೀಡುವವರು ಹಾಗೂ ಹೋಟೆಲ್‌, ರೆಸ್ಟೋರೆಂಟ್‌, ಡಾಬಾಗಳಲ್ಲಿ ಕಾರ್ಯ ನಿರ್ವಹಿ ಸುವವರು ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಡುಗೆ ಸೇವೆಯಲ್ಲಿ ಕೆಲಸ ಮಾಡುವವರು ಹಾಗೂ ಆಹಾರ ನಿರ್ವಹಿಸುವವರು ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸಬೇಕು. ಕಡ್ಡಾಯವಾಗಿ ಮುಖಗವಸನ್ನು ಧರಿಸಿರಬೇಕು. ಕೈಗಳನ್ನು ಆಗಿಂದಾಗೇ ಸಾಬೂನಿನಿಂದ ತೊಳೆದುಕೊಳ್ಳಬೇಕು. ಸೋಂಕು ನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ಆರೋಗ್ಯ ಇಲಾಖೆ ನಿರ್ದೇಶನ: ಕೆಮ್ಮುವಾಗ ಮತ್ತು ಸೀನುವಾಗ ಮೂಗು ಬಾಯಿಯನ್ನು ಕರವಸ್ತ್ರ, ಮೊಣಕೈ ಅಥವಾ ಟಿಶ್ಯೂ ಪೇಪರ್‌ಗಳಿಂದ ಮುಚ್ಚಿಕೊಳ್ಳಬೇಕು. ದಿಢೀರ್‌ ಅನಾರೋಗ್ಯ ಕಾಣಿಸಿಕೊಂಡಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಳ್ಳಬೇಕು. ಆಹಾರವನ್ನು ತಯಾರಿಸುವಾಗ ಹಾಗೂ ಆಹಾರ ಪದಾರ್ಥವನ್ನು ಬಡಿಸುವಾಗ ಕೈಗವಸುಗಳನ್ನು ಧರಿಸಬೇಕು. ಲಕ್ಷಣ ರಹಿತ ಸಿಬ್ಬಂದಿಗೆ ಮಾತ್ರ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಬೇಕು ಮತ್ತು ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ದೇಹದಲ್ಲಿನ ಉಷ್ಣಾಂಶವನ್ನು ಪ್ರತಿನಿತ್ಯ ತಪಾಸಣೆ ಮಾಡಬೇಕು. ಸೋಂಕು ನಿವಾರಕ ದ್ರಾವಣವನ್ನು ಇಡಬೇಕು. ಗ್ರಾಹಕರು ಸರಿಯಾಗಿ ಅಂತರವನ್ನು ಕಾಯ್ದುಕೊಳ್ಳುವಂತೆ ಆತಿಥ್ಯ ಕೇಂದ್ರಗಳ ಮುಖ್ಯಸ್ಥರು ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ತಿಂಡಿ , ಊಟಗಳಿಗೆ ಬಳಸಿ ಬಿಸಾಡಬಹುದಾದ ತಟ್ಟೆಗಳು, ಚಮಚಗಳನ್ನು ಹೆಚ್ಚಾಗಿ ಬಳಸಬೇಕು. ನೈಸರ್ಗಿಕ ಗಾಳಿ, ಬೆಳಕಿನ ವ್ಯವಸ್ಥೆ ಸೂಕ್ತವಾಗಿ ಇರುವಂತೆ ನೋಡಿಕೊಳ್ಳಬೇಕು. ಕೈತೊಳೆಯುವ ಸ್ಥಳ, ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಕುರ್ಚಿ, ಟೇಬಲ್‌ಗ‌ಳು, ಬಾಗಿಲುಗಳು, ನೆಲವನ್ನು ಸೋಂಕು ನಿವಾರಕದಿಂದ ಪ್ರತಿನಿತ್ಯ ಸ್ವಚ್ಛಮಾಡಬೇಕು ಎಂದು ಸೂಚನೆ ನೀಡಿದೆ.

ವಿದೇಶ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯ :

Advertisement

ರೂಪಾಂತರ ವೈರಾಣು ಕಾಣಿಸಿಕೊಂಡ ಕಾರಣ ಬ್ರಿಟನ್‌, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ದೇಶಗಳಿಂದ ವಿಮಾನದ ಮೂಲಕ ಕರ್ನಾಟಕಕ್ಕೆ ಬರುವವರು ಪ್ರಯಾಣಕ್ಕೂ 72 ಗಂಟೆಗೂ ಮೊದಲು ಕೋವಿಡ್‌ ಆರ್‌ಟಿ ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ತರಬೇಕು. ಅವರಿಗೆ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಕೂಡ ಆರ್‌ಟಿ ಪಿಸಿಆರ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯ ವರದಿ ಬಂದ ಬಳಿಕವೇ ವಿಮಾನ ನಿಲ್ದಾಣದಿಂದ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕಿತರಾದಲ್ಲಿ ಅವರನ್ನು 14 ದಿನಗಳು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಸೋಂಕಿತರಾಗಿರದವರು 14 ದಿನಗಳು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡಬೇಕು. 7ನೇ ದಿನಕ್ಕೆ ಮತ್ತೂಮ್ಮೆ ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next