Advertisement

Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ

10:24 PM Nov 09, 2024 | Team Udayavani |

ಬೆಂಗಳೂರು: ಕೊರೋನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿವೃತ್ತ ನ್ಯಾ. ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿಯ ಸರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ  ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಕಳೆದ ಆಗಸ್ಟ್ ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸುಮಾರು 1,700ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯ ಸಂಪುಟ ಉಪಸಮಿತಿ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯ ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಕಾಲದಲ್ಲಿ ಬೆಡ್, ಪಿಪಿಇ ಕಿಟ್‌, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು. ಈ ಬಗ್ಗೆ ನಾನು ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೆ. ಆದರೆ ಸರ್ಕಾರ ಅವುಗಳನ್ನೆಲ್ಲ ನಿರಾಕರಿಸುತ್ತಲೇ ತನ್ನ ಭ್ರಷ್ಟಾಚಾರದ ದಂಧೆಯ ಮುಂದುವರಿಸಿಕೊಂಡು ಹೋಗಿತ್ತು ಎಂದು ಕಿಡಿಕಾರಿದ್ದಾರೆ.

10-15 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ
ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್ ಗಳನ್ನು 200 ರಿಂದ 300 ರೂ. ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್​ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು. ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ತನಿಖಾ ಸಮಿತಿ ನೀಡಿರುವ ವರದಿಯ ನಾನಿನ್ನೂ ಪೂರ್ತಿ ಓದಿಲ್ಲ. ನನ್ನ ಪ್ರಕಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಒಂದು ‘‘ಮಂಜುಗಡ್ಡೆಯ ಒಂದು ಸಣ್ಣ ತುದಿ’’ ಮಾತ್ರ. ಒಂದು ಅಂದಾಜಿನ ಪ್ರಕಾರ 10ರಿಂದ 15 ಸಾವಿರ ಕೋಟಿ ರೂಪಾಯಿಯಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ತನಿಖಾ ಸಮಿತಿ ಆ ಎಲ್ಲ ದಾಖಲೆಗಳ ಸಂಗ್ರಹಿಸಿರಬಹುದು ಎಂದಿದ್ದಾರೆ.

ಕೊರೋನಾ ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಪಾಲು ಇದೆ

ಯಡಿಯೂರಪ್ಪನವರ ಮಗ ವಿಜಯೇಂದ್ರ ತಾನೊಬ್ಬ ಮಹಾ ಸತ್ಯ ಹರಿಶ್ಚಂದ್ರನ ಮಗನಂತೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿಯವರ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಆದ್ದರಿಂದ ಕೊರೊನಾ ಭ್ರಷ್ಟಾಚಾರದಲ್ಲಿ ಅವರ ಪಾಲೂ ಇದೆ ಎಂದಿದ್ದಾರೆ.

Advertisement

ಶ್ರೀರಾಮುಲು ಲೂಟಿಕೋರ:
ಇನ್ನೊಬ್ಬ ಆರೋಪಿ ಶ್ರೀರಾಮುಲು ರಾಜಕೀಯ ಹುಟ್ಟು ಪಡೆದಿರುವುದೇ ಬಳ್ಳಾರಿಯ ಗಣಿ ಲೂಟಿಯ ಕೆಸರಲ್ಲಿ. ಇವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗ್ಯಾಂಗ್ ಲೀಡರ್ ಜನಾರ್ದನ ರೆಡ್ಡಿಯ ಶಿಷ್ಯಬಳಗಕ್ಕೆ ಸೇರಿದವರು. ಇವರಿಗೆ ರಾಜಕೀಯ ಎಂದರೆ ದುಡ್ಡು ನುಂಗುವುದಾಗಿದೆ. ಅದು ಕಬ್ಬಿಣದ ಅದಿರಾಗಬಹುದು ಇಲ್ಲವೇ ಕೊರೋನಾ ರೋಗಿಗಳ ಉಳಿಸುವ ಪಿಪಿಇ ಕಿಟ್ ಆಗಿರಬಹುದು. ಅವರಿಗೆ ಜನರ ಪ್ರಾಣ, ಆರೋಗ್ಯ ಮುಖ್ಯ ಅಲ್ಲ, ಹಣ ಬಂದು ಜೇಬಿಗೆ ಬಿದ್ದರೆ ಸಾಕು. ಇಂತಹವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೇಳುತ್ತಾ ಅಡ್ಡಾಡುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next