Advertisement

ಕೋವಿಡ್: ಬಸ್‌ಗಳಿಗೆ ಬೇಡಿಕೆ ಕಡಿಮೆ; ಹಬ್ಬಕ್ಕೆ ಊರಿಗೆ ಬರುವವರ ಸಂಖ್ಯೆ ಶೇ. 80ರಷ್ಟು ಇಳಿಮುಖ

11:15 PM Aug 21, 2020 | mahesh |

ಮಹಾನಗರ: ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದೂರದ ಪ್ರದೇಶಗಳಿಂದ ಗಣೇಶ ಹಬ್ಬಕ್ಕೆಂದು ತಮ್ಮ ಊರುಗಳಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಶೇ.80ರಷ್ಟು ಇಳಿಮುಖವಾಗಿದೆ.
ಹಬ್ಬಗಳ ಸಮಯದಲ್ಲಿ ಸಾಮಾನ್ಯವಾಗಿ ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌ ಕಾರ್ಯಾಚರಿಸುತ್ತದೆ. ಆದರೆ ಈ ಬಾರಿ ಯಾವುದೇ ಹೆಚ್ಚಿನ ಬಸ್‌ಗಳ ಕಾರ್ಯಾಚರಣೆ ಇಲ್ಲ. ಕೊರೊನಾ ಪೂರ್ವದಲ್ಲಿ ರಾಜ್ಯದಲ್ಲಿ 8,500ಕ್ಕೂ ಮಿಕ್ಕಿ ಬಸ್‌ಗಳಲ್ಲಿ ಸುಮಾರು 30 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಇದೀಗ ಬಸ್‌ಗಳ ಸಂಖ್ಯೆ 3,500ಕ್ಕೆ ಇಳಿಕೆ ಕಂಡಿದ್ದು, 4.5 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಮಂಗಳೂರಿನಲ್ಲಿಯೂ 550 ಬಸ್‌ಗಳ ಪೈಕಿ ಕೇವಲ 250 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

Advertisement

ಬೇಡಿಕೆ
ಹಬ್ಬಗಳ ಸಮಯ ರಾಜ್ಯದಲ್ಲಿ ಸುಮಾರು 1.5 ಲಕ್ಷದಷ್ಟು ಹೆಚ್ಚಿನ ಮಂದಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ರಯಾಣಿ ಸುತ್ತಿದ್ದರು. ಆದರೆ ಈ ಬಾರಿ ಯಾವುದೇ ಬೇಡಿಕೆ ಕಂಡುಬರುತ್ತಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತಾವಿದ್ದ ಪ್ರದೇಶದಲ್ಲಿಯೇ ಸರಳ ವಾಗಿ ಹಬ್ಬದ ಆಚರಣೆಗೆ ಅನೇಕರು ಮುಂದಾಗಿದ್ದಾರೆ. ಇನ್ನೂ ಕೆಲವು ಮಂದಿ ದೂರದ ಊರಿನಲ್ಲಿರುವ ತಮ್ಮ ಕುಟುಂಬದವರ ಜತೆ ಆನ್‌ಲೈನ್‌ ಮುಖೇನ ಹಬ್ಬ ಆಚರಿಸಲು ಯೋಚಿಸುತ್ತಿದ್ದಾರೆ.

ರೈಲು ಸಂಪರ್ಕವೂ ಬಂದ್‌ ಸಾಮಾನ್ಯ ದಿನಗಳಲ್ಲಿ ಓಡಾಡುವಂತೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ರೈಲುಗಳು ಸಂಚರಿಸುತ್ತಿಲ್ಲ. ಲಾಕ್‌ಡೌನ್‌ ಪೂರ್ವದಲ್ಲಿ ಮಂಗಳೂರು ಸೆಂಟ್ರಲ್‌ನಿಂದ ಪ್ರತೀ ದಿನ 27 ರೈಲುಗಳು ವಿವಿಧ ಕಡೆಗಳಿಗೆ ಸಂಚರಿಸುತ್ತಿದ್ದವು. ಮಾ. 21ರಂದು ಲಾಕ್‌ಡೌನ್‌ ಘೋಷಣೆ ಬಳಿಕ ಇವೆಲ್ಲವೂ ಸ್ಥಗಿತಗೊಂಡಿದೆ. ಅದೇ ರೀತಿ ಲಾಕ್‌ಡೌನ್‌ ಪೂರ್ವದಲ್ಲಿ ಮಂಗಳೂರು – ಬೆಂಗಳೂರು ನಡುವೆ 4 ರೈಲುಗಳು ಸಂಚರಿಸತ್ತಿದ್ದವು. ಕೊರೊನಾ ಕಾರಣದಿಂದ ಈ ಸೇವೆಯೂ ಇದೀಗ ಬಂದ್‌ ಆಗಿದೆ. ಇದು ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕಾರಣ.

ಕೋವಿಡ್ ಸಮಯಲ್ಲೂ ದರ ಏರಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಾಮಾ ನ್ಯವಾಗಿ ಹಬ್ಬಗಳ ಸೀಸನ್‌ ವೇಳೆ ಶೇ. 10ರಷ್ಟು ಬಸ್‌ ದರ ಏರಿಕೆ ಮಾಡಲು ಅವಕಾಶವಿದೆ. ಇದೇ ಕಾರಣಕ್ಕೆ ಪ್ರೀಮಿಯಂ ಸೇವಗಳಾದ ಅಂಬಾರಿ ಡ್ರೀಮ್‌ ಕ್ಲಾಸ್‌, ಐರಾವತ ಕ್ಲಬ್‌ ಕ್ಲಾಸ್‌, ಎ.ಸಿ. ಬಸ್‌ಗಳು, ನಾನ್‌ ಎ.ಸಿ. ಸ್ಲಿàಪರ್‌ ಸಹಿತ ರಾಜಹಂಸ ಬಸ್‌ಗಳ ದರವನ್ನು ಶೇ.10ರಷ್ಟು ಏರಿಕೆ ಮಾಡಿದೆ. ಕೊರೊನಾ ಸಮಯದಲ್ಲಿ ಸಾರ್ವಜನಿಕರು ಸಂಕಷ್ಟದಲ್ಲಿರುವ ವೇಳೆ ದರ ಏರಿಕೆ ಮಾಡಿದ್ದು, ಸರಿಯಲ್ಲ ಎನ್ನುತ್ತಾರೆ ಪ್ರಯಾಣಿಕರು. ಖಾಸಗಿ ಬಸ್‌ಗಳ ದರವೂ ಏರಿಕೆಯಾಗಿದ್ದು, ಆ. 23ರಂದು ಮಂಗಳೂರಿನಿಂದ ಬೆಂಗಳೂರಿಗೆ ಗರಿಷ್ಠ ದರ 1,350 ರೂ. ಇದೆ. ಆದರೆ ಮಾಮೂಲಿ ವೀಕೆಂಡ್‌ ದಿನದಲ್ಲಿ 1,200 ರೂ. ಇದೆ. ಮಂಗಳೂರಿನಿಂದ ಮೈಸೂರು, ಹುಬ್ಬಳ್ಳಿ ಸ್ಲಿàಪರ್‌ ಬಸ್‌ಗಳಲ್ಲಿ ಮಾಮೂಲಿ ದಿನಕ್ಕಿಂತ 100 ರೂ. ಏರಿಕೆ ಮಾಡಲಾಗಿದೆ.

ಪ್ರಯಾಣಿಕರ ಸಂಖ್ಯೆ ಇಳಿಮುಖ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕೊರೊನಾದಿಂದಾಗಿ ಗಣೇಶ ಹಬ್ಬದ ಸಮಯ ಊರಿಗೆ ತೆರಳುವ ಪ್ರಯಾಣಿಕರಲ್ಲಿ ಶೇ. 80ರಷ್ಟು ಇಳಿಕೆ ಕಂಡಿದೆ. ಇನ್ನು ಒಂದು ಬಸ್‌ನಲ್ಲಿ 30 ಮಂದಿ ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ. ಹಬ್ಬಗಳ ಸಮಯದಲ್ಲಿ ಶೇ.10ರಷ್ಟು ಹಣ ಏರಿಕೆ ಮಾಡಲು ಅವಕಾಶವಿದೆ. ಅದನ್ನು ಬಳಸಿಕೊಂಡಿದ್ದೇವೆ. ನಿಗಮ ಈಗಾಗಲೇ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ.
 - ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Advertisement

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next