ಮೂಡುಬಿದಿರೆ: ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿ ಇಂದು ಮೃತಪಟ್ಟಿದ್ದಾರೆ.
ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿಗೆ ಸೆ. 29ರಂದು ಕೋವಿಡ್-19 ದೃಢಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶಿಕ್ಷಕಿಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದಿತ್ತು. ತಾಯಿಯ ಚಿಕಿತ್ಸೆಗೆ ಸಹಕರಿಸುವಂತೆ ಕೋರಿ ಪುತ್ರಿ ಐಶ್ವರ್ಯಾ ಫೇಸ್ ಬುಕ್ ನಲ್ಲಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕಿ ಇಂದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಶಿಕ್ಷಕಿ ಆರೋಗ್ಯ ಸ್ಥಿತಿ ಗಂಭೀರ ; ಬೆಂಗಳೂರಿಗೆ ಏರ್ ಲಿಫ್ಟ್?
ಕೋವಿಡ್ ನೆಗೆಟಿವ್ ಎಂದು ಕಂಡುಬಂದಿದ್ದರೂ ಪದ್ಮಾಕ್ಷಿ ಅವರ ಆರೋಗ್ಯಸ್ಥಿತಿ ಗುರುವಾರ ಅಪರಾಹ್ಣ ವಿಷಮಿಸತೊಡಗಿದ ಕಾರಣ ಪತಿ ಶಶಿಕಾಂತ್ , ಪುತ್ರಿ ಐಶ್ವರ್ಯ ಅವರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಎಕ್ಮೋ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರು ಗೆ ಒಯ್ಯಲು ಸಿದ್ಧತೆ ನಡೆಸಿದ್ದರು. ಮಾಜಿ ಸಚಿವ ಅಭಯಚಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜತೆ ಮಾತನಾಡಿ, ವಿನಂತಿಸಿದಂತೆ ಸಚಿವರು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಪತ್ರಗಳನ್ನು ಸಿದ್ಧಪಡಿಸುತ್ತಿದ್ದಂತೆ ಪದ್ಮಾಕ್ಷಿ ಕೊನೆಯುಸಿರೆಳೆದರು ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಮಾಹಿತಿ ನೀಡಿದರು.