ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ (39 ವರ್ಷದ ವ್ಯಕ್ತಿ) ಮತ್ತು ಬಾಲೇಹೊಸೂರಿನವರಾದ ಮುಳಗುಂದ ಪಶು ಆಸ್ಪತ್ರೆಯಲ್ಲಿ ಸಹಾಯಕ ನಾಗಿರುವ ಯುವಕ(26)ನಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಲಕ್ಷ್ಮೇಶ್ವರ ಸೋಮೇಶ್ವರ ದೇವಸ್ಥಾನದ ಹತ್ತಿರದ ಪ್ರದೇಶ ಮತ್ತು ಬಾಲೇಹೊಸೂರಿನ ಆಂಜನೇಯಸ್ವಾಮಿ ದೇವಸ್ಥಾನ ಹತ್ತಿರದ 100 ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಿ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಸೀಲ್‌ಡೌನ್ ಮಾಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್‌ರು ಪಟ್ಟಣದ ಓರ್ವ ಮತ್ತು ಬಾಲೇಹೊಸೂರಿನ ಒಬ್ಬನಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನೂ ಗದಗ ಜಿಮ್ಸ್‌ಗೆ ದಾಖಲಿಸಲಾಗಿದೆ. ಲಕ್ಷ್ಮೇಶ್ವರ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತ 15 ಜನರನ್ನು ಪಟ್ಟಣದ ಸರ್ಕಾರಿ ಹಾಸ್ಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬಾಲೇಹೊಸೂರಿನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ 5 ಜನರನ್ನು ಶಿಗ್ಲಿಯ ಸರ್ಕಾರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಎಲ್ಲ ಪ್ರಾಥಮಿಕ ಸಂಪರ್ಕದವರ ಆರೋಗ್ಯ ಪರೀಕ್ಷೆ ಮಾಡಿಸಿ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಸೀಲ್‌ಡೌನ್ ಮಾಡಿದ ಪ್ರದೇಶದಲ್ಲಿನ ಜನತೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶದ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್‌ಐ ಶಿವಕುಮಾರ ಲೋಹಾರ, ಕಂದಾಯ ನಿರೀಕ್ಷಕ ಎಸ್. ಎಸ್. ಪಾಟೀಲ, ಡಾ| ಗಿರೀಶ ಮರಡ್ಡಿ, ಮಂಜು ಬದಿ, ಬಿ.ಎಸ್. ಬಳಗಾನೂರ ಇದ್ದರು.