Advertisement

ಕೋವಿಡ್ : ಪ್ರವಾಸೋದ್ಯಮಕ್ಕೆ ಶೇ. 80ರಷ್ಟು ಹೊಡೆತ

02:56 PM May 08, 2020 | mahesh |

ಮ್ಯಾಡ್ರಿಡ್‌: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. 60ರಿಂದ 80ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ.  ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ 1950ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. 22ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಮಾರ್ಚ್‌ ಒಂದರಲ್ಲೇ ಶೇ. 57ರಷ್ಟು ಕುಸಿಯಿತು. ಈ ಪೈಕಿ ಏಷ್ಯಾ ಹಾಗೂ ಯುರೋಪ್‌ ಖಂಡಗಳಿಗೆ ಅತ್ಯಂತ ಹೆಚ್ಚು ನಷ್ಟವಾಗಿದೆ ಎಂದು ತಿಳಿಸಲಾಗಿದೆ.

Advertisement

ಇಡೀ ಜಗತ್ತು ಎಂದೂ ಕಾಣದಂಥ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಸಂಸ್ಥೆಯ ಸೆಕ್ರೆಟರಿ ಜನರಲ್‌ ಜೂರಬ್‌ ಪೊಲೊಲಿಕಶ್ವಿ‌ಲಿ ಹೇಳಿದ್ದಾರೆ. ನಾಗರಿಕ ವಿಮಾನ ಯಾನ ಸಂಸ್ಥೆಗಳು, ವೈಭವೋಪೇತ ಹಡಗುಗಳ ಆಯೋಜಕರು, ಹೋಟೆಲ್‌ ಸಮೂಹಗಳು ಹಾಗೂ ಪ್ರವಾಸ ಆಯೋಜಕರು ಬಹಳ ನಷ್ಟವನ್ನು ಅನುಭವಿಸುವಂತಾಗಿದೆ. ಅಂತಾರಾಷ್ಟ್ರೀಯ ಪ್ರವಾಸೋ ದ್ಯಮ ಕ್ಷೇತ್ರ ಶೇ. 3-4ರಷ್ಟು ಅಭಿವೃದ್ಧಿ ಕಾಣಬಹುದು ಎಂದು ಈ ಮೊದಲು ಅಂದಾಜಿ ಸಲಾಗಿತ್ತಾದರೂ ಪ್ರಸ್ತುತ ಶೇ. 20-30ರಷ್ಟು ಕುಸಿತದ ಭೀತಿ ಎದುರಾಗಿದೆ. ಒಂದುವೇಳೆ ಜುಲೈ ವೇಳೆಗೆ ಪರಿಸ್ಥಿತಿ ಸರಿಯಾದರೆ ಶೇ. 58ರಷ್ಟು ಕುಸಿತಕ್ಕೆ ಒಳಗಾಗಬಹುದು ಎನ್ನಲಾಗಿದೆ.

ಕೋವಿಡ್ ವೈರಸ್‌ಗೆ ಪ್ರೊಟೀನ್‌ ಕಾರಣ?
ವಾಷಿಂಗ್ಟನ್‌: ಜಗತ್ತಿನಾದ್ಯಂತ ಕೋವಿಡ್ ವೈರಸ್‌ ಇಷ್ಟೊಂದು ವೇಗವಾಗಿ ಹರಡಲು ಅದರ ಸಂರಚನೆಯೇ ಕಾರಣ ಎಂದು ಅಮೆರಿಕದ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇಲ್ಲಿನ ಕಾರ್ನೆಲ್‌ ಯೂನಿವರ್ಸಿಟಿಯ ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದ್ದು, ಕೋವಿಡ್ ವೈರಸ್‌ನ ಹರಡುವಿಕೆಗೆ ಕಡಿವಾಣ ಹಾಕುವ ಸಾಧ್ಯತೆ ಇದೆ. ವೈರಸ್‌ ಹರಡುವ ಕಾರಣ ಮತ್ತು ಮಾರ್ಗದ ಕುರಿತು ವಿಜ್ಞಾನಿಗಳು ಅಧ್ಯಯನಶೀಲರಾಗಿದ್ದು , ಸೋಂಕಿನ  ಮೂಲೋತ್ಪಾಟನೆಗೆ ಪರಿಣಾಮಕಾರಿ ಔಷಧವನ್ನು ಸಿದ್ಧಪಡಿಸಲು ಈ ಅಧ್ಯಯನ ನೆರವಾಗಲಿದೆ.

ಕೋವಿಡ್ ಕುರಿತಾದ ಈ ಅಧ್ಯಯನ ವರದಿಯನ್ನು ಜರ್ನಲ್‌ ಆಫ್ ಮಾಲಿಕ್ಯುಲಾರ್‌ ಬಯಾಲಜಿ’ಯಲ್ಲಿ ಪ್ರಕಟಿಸಲಾಗಿದೆ. ಒಂದು ವಿಧದ ಪ್ರೊಟೀನ್‌ನಿಂದ ರೂಪುಗೊಂಡಿರುವ ಈ ವೈರಸ್‌ನಲ್ಲಿ ಕುಣಿಕೆಯಾಕಾರದ ರಚನೆಗಳಿವೆ. ಇವುಗಳ ನೆರವಿನಿಂದಲೇ ಈ ವೈರಸ್‌ ಮನುಷ್ಯನ ಜೀವಕೋಶ ಪ್ರವೇಶಿಸುತ್ತದೆ ಎಂದು ಅಧ್ಯಯನ ಹೇಳಿದೆ. ಇಂತಹ ಭಿನ್ನ ಸಂರಚನೆಯಿಂದಾಗಿಯೇ ಈ ವೈರಸ್‌ ಹೆಚ್ಚು ವೇಗವಾಗಿ ಪ್ರಸರಣವಾಗುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ಸೊಂಕಿಗೆ ಇದುವರೆಗೆ 38,49,332 ಮಂದಿಗೆ ಸೋಂಕಿದೆ. ಅವರಲ್ಲಿ 2,65,937 ಮಂದಿ ಸಾವನ್ನಪ್ಪಿದ್ದು, 13,17,109 ಮಂದಿ ಚೇತರಿಸಿಕೊಂಡಿದ್ದಾರೆ.

ಬ್ರಿಟಿಷ್‌ ಪ್ರಜೆಗಳನ್ನು ಕರೆತರಲು ಮತ್ತಷ್ಟು ವಿಮಾನ
ಬ್ರಿಟನ್‌ : ಭಾರತದಲ್ಲಿ ಲಾಕ್‌ಡೌನ್‌ನಿಂದ ಸಿಲುಕಿರುವ ಬ್ರಿಟಿಷ್‌ ಪ್ರಜೆಗಳನ್ನು ದೇಶಕ್ಕೆ ವಾಪಸು ಕರೆಸಿಕೊಳ್ಳಲು ಐದು ಹೆಚ್ಚುವರಿ ವಿಮಾನಗಳನ್ನು ಒದಗಿಸುವ ಕುರಿತು ಬ್ರಿಟನ್‌ ಸರಕಾರ ಪ್ರಕಟಿಸಿದೆ. ಮುಂದಿನ ವಾರ ಅಮೃತಸರ ಹಾಗೂ ಅಹಮದಾಬಾದ್‌ ನಿಂದ ಹೊರಡುವ ವಿಮಾನಗಳೂ ಸೇರಿದಂತೆ ಒಟ್ಟು 64 ವಿಮಾನಗಳು ಈ ಕಾರ್ಯದಲ್ಲಿ ತೊಡಗಿದಂತಾಗಲಿದ್ದು, ಒಟ್ಟು 16, 500 ಮಂದಿಯನ್ನು ಕರೆದೊಯ್ದಂತಾಗಲಿದೆ ಎಂದು ಪ್ರಕಟನೆೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next