Advertisement
ಒಂದೆಡೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿಯೇ ಸರ್ಕಾರಿ ಕೋಟಾದಡಿ ಹಾಸಿಗೆ ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಬಹುತೇಕ ರೋಗಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಬಳಿಸಿ ನೇರವಾಗಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸೋಂಕಿತರು ಮತ್ತು ಇತರೆ ರೋಗಿಗಳು ಈ ಎರಡೂ ವರ್ಗಗಳ ಚಿಕಿತ್ಸಾ ವೆಚ್ಚವನ್ನು ಆರ್ಥಿಕ ಸಂಕಷ್ಟದ ನಡುವೆಯೂ ಭರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಕೇವಲ ಕೋವಿಡ್ ಚಿಕಿತ್ಸೆ ನೀಡುತ್ತಾರೆ ಇತರೆ ಅನಾರೋಗ್ಯ ಸಮಸ್ಯೆಗಳು (ಹೃದ್ರೋಗ, ಮೂತ್ರಪಿಂಡ ಸಮಸ್ಯೆ) ಇದ್ದರೆ ಮತ್ತೆ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಹೆಚ್ಚುವರಿ ಹಣ ನೀಡಬೇಕಿದೆ. ಜತೆಗೆ ಆಹಾರ ಪೂರೈಕೆ, ಸಿಬ್ಬಂದಿ ನೆರವು, ಮಾನಸಿಕ ಆರೋಗ್ಯ ಕಾಪಾಡುವ ಕೌನ್ಸೆಲಿಂಗ್, ಸೋಂಕಿತರ ಆರೋಗ್ಯ ಸ್ಥಿತಿ ಕುರಿತು ಸಂಬಂಧಿಗಳಿಗೆ ಮಾಹಿತಿ ನೀಡದಿರುವುದು ಸೇರಿದಂತೆ ನಾನಾ ರೀತಿಯ ತೊಂದರೆಗಳಿವೆ ಎಂದು ಹಲವು ಸೋಂಕಿತರು ಮತ್ತವರ ಸಂಬಂಧಿಗಳು ಆರೋಪಿಸುತ್ತಾರೆ.
Related Articles
Advertisement
40 ಕೋಟಿ ರೂ. ಬಾಕಿ; ನಿರ್ವಹಣೆ ಕಷ್ಟವಾಗುತ್ತಿದೆಸರ್ಕಾರಿ ಕೋಟಾದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ ತಲುಪುವುದು ಒಂದು ತಿಂಗಳಾಗುತ್ತಿದೆ. ಸದ್ಯ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಅಸೋಸಿಯೇಷನ್ (ಫನಾ) ನೀಡುವ ಮಾಹಿತಿ ಪ್ರಕಾರ ಸರ್ಕಾರ ಇದುವರೆಗೆ 40 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ‘ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕೋವಿಡ್ ವಾರ್ಡ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದುಪ್ಪಟ್ಟು ಸಂಬಳ ನೀಡಬೇಕು. ಚಿಕಿತ್ಸೆ ಅತ್ಯಗತ್ಯವಾದ ವೈದ್ಯಕೀಯ ಉಪಕರಣಗಳ ಖರೀದಿಗೆ ಲಕ್ಷಾಾಂತರ ರೂ. ನೀಡಬೇಕು. ಆದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಬ್ಬ ಸೋಂಕಿತನ ಚಿಕಿತ್ಸಾ ವೆಚ್ಚ ಭರಿಸಲು ನಾಲ್ಕು ವಾರಗಳ ಗಡುವು ಎಂದು ಕೇಳುತ್ತಿದೆ. ಕೋವಿಡ್ ವಾರ್ಡ್ ಹಿನ್ನಲೆ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಅನೇಕ ಖಾಸಗಿ ಆಸ್ಪತ್ರೆಗಳು ಸಂಕಷ್ಟದಲ್ಲಿವೆ’ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ಹೇಳುತ್ತಾರೆ. ‘ನಿತ್ಯ ಸೋಂಕಿತರು ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಏರಿಕೆಯಾಗುತ್ತಿದೆ. ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 15 ದಿನಗಳಲ್ಲೇ ವೆಚ್ಚ ಪಾವತಿಸಲಾಗುತ್ತಿದೆ. ಒಂದು ವೇಳೆ ಸಮರ್ಪಕ ದಾಖಲೆಗಳು ಇಲ್ಲದಿದ್ದರೆ ಅಥವಾ ಸಂವಹನ ಕೊರತೆಯಿಂದ ತಡವಾಗಿರುವ ಸಾಧ್ಯತೆ ಇದೆ’ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ಖಾಸಗಿಯತ್ತ ಮುಖಮಾಡಲು ಕಾರಣ?
* ಸರ್ಕಾರಿ ಆಸ್ಪತ್ರೆಗಳ ಕುರಿತು ಹೊಂದಿರುವ ತಪ್ಪು ಕಲ್ಪನೆಗಳು
* ಹಾಸಿಗೆ ನಿಗದಿಪಡಿಸುವಲ್ಲಿ ಬಿಬಿಎಂಪಿ ವಾರ್ ರೂಂ ಅಧಿಕಾರಿಗಳ ನಿರ್ಲಕ್ಷ್ಯ
* ಸೋಂಕಿತರು ತರುತ್ತಿರುವ ‘ಶಿಫಾರಸು’!
* ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್‌ಗಳ ಕೊರತೆ ಖಾಸಗಿಯಾದ್ರೆ ಮಾತ್ರ ದಾಖಲಾಗ್ತೀವಿ!
‘ಖಾಸಗಿ ಆಸ್ಪತ್ರೆಯಾದರೆ ಮಾತ್ರ ದಾಖಲಾಗುತ್ತೇನೆ ಇಲ್ಲವಾದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ’- ಇದು ವಾರ್ ರೂಂನಿಂದ ಕರೆ ಮಾಡಿ, ಆಸ್ಪತ್ರೆ ಹಾಸಿಗೆ ನಿಗದಿಪಡಿಸುವ ಸಂದರ್ಭದಲ್ಲಿ ಬಹುತೇಕ ಸೋಂಕಿತರ ಉದ್ಗಾಾರ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಎಷ್ಟು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದರೂ ಖಾಸಗಿ ಆಸ್ಪತ್ರೆ ಹಾಸಿಗೆಯನ್ನೇ ನೀಡಬೇಕು ಎಂದು ಒತ್ತಾಯಿಸುತ್ತಾರೆ. ಅಂತಿಮವಾಗಿ ಖಾಸಗಿಯಾದರೆ ಮಾತ್ರ ದಾಖಲಾಗುತ್ತೇನೆ’ಎಂದು ಹೇಳುತ್ತಾರೆ. ಇನ್ನು ಕೆಲವರು ಸರ್ಕಾರದ ಹಿರಿಯ ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳಿಂದ ಶಿಫಾರಸು ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ನಿಗದಿಪಡಿಸುತ್ತಿದ್ದಾರೆ ಎಂದು ವಾರ್ ರೂಂ ಸಿಬ್ಬಂದಿ ಹೇಳುತ್ತಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಹಿನ್ನೆಲೆ ಬಹುತೇಕ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆೆಗಳು ನಡೆಸುತ್ತಿಲ್ಲ. ಜತೆಗೆ ಸಿಬ್ಬಂದಿ ಕೊರತೆ ನೆಪ ಹೇಳುತ್ತಿವೆ. ಇದಲ್ಲದೆ ರೋಗಿಗಳು ಕೂಡ ಸರ್ಕಾರಿ ಆಸ್ಪತ್ರೆಗೆ ತೆರಳಲು ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಈ ಮೊದಲೇ ಇರುವ ತಪ್ಪುಕಲ್ಪನೆ ಹಾಗೂ ಈಗಾಗಲೇ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಂಕು ತಗುಲುವ ಭೀತಿ ಅವರನ್ನು ಕಾಡುತ್ತಿದೆ. ಇದರಿಂದಾಗಿ ನೇರವಾಗಿ ಆರೋಗ್ಯ ಕಾರ್ಡ್ ಬಳಸಿ ಖಾಸಗಿ ಆಸ್ಪತ್ರೆ ಕಡೆ ಮುಖಮಾಡುತ್ತಿದ್ದಾರೆ. ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳು – ಖಾಲಿ ಇರುವ ಹಾಸಿಗಳು
ಬೌರಿಂಗ್ ಮತ್ತು ಲೇಡಿ ಕರ್ಜನ್ – 50
ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ – 5
ವಿಕ್ಟೋರಿಯಾ ಆಸ್ಪತ್ರೆ – 74
ಜಯನಗರದ ಜನರಲ್ ಆಸ್ಪತ್ರೆ – 60
ಕೆ.ಸಿ ಜನರ್ ಆಸ್ಪತ್ರೆ – 10
ಸಿ.ವಿ ರಾಮನ್ ಆಸ್ಪತ್ರೆ – 32
ಚರಕ – 46
ಇಎಸ್‌ಐ ಪೀಣ್ಯ – 20
ಸಾಂಕ್ರಾಮಿಕ ರೋಗಗಳ ಆಸ್ಪತ್ರೆ – 36
ಎಚ್‌ಎಸ್‌ಐಎಸ್ ಘೋಷಾ ಆಸ್ಪತ್ರೆ – 28 ಜಯಪ್ರಕಾಶ್ ಬಿರಾದಾರ್