ವರದಿ : ಬಸವರಾಜ ಹೊಂಗಲ್
ಧಾರವಾಡ: ಒಬ್ಬರನ್ನು ಸ್ಮಶಾನಕ್ಕೆ ಒಯ್ದು ಮನೆಗೆ ಬರುವಷ್ಟರಲ್ಲಿ ಮತ್ತೂಬ್ಬರ ಸಾವಿನ ಸುದ್ದಿ, ಸತ್ತವರ ನೆರಳಾಗಿ ಕಾಡುತ್ತಿರುವ ಕ್ರಿಯಾಕರ್ಮಗಳ ಗೈರು, ಪುಣ್ಯದ ಕೆಲಸ ಮಾಡಿದವರಿಗೆ ಹಿಡಿ ಮಣ್ಣು ಹಾಕಲು ಬಿಡದ ಕೊರೊನಾಕ್ಕೆ ಹಿಡಿ ಹಿಡಿ ಶಾಪ, ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಹಳ್ಳಿಗಳಲ್ಲೀಗ ಕೊರೊನಾ ಮರಣ ಮೃದಂಗ.
ಹೌದು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬೇಕಾಬಿಟ್ಟಿ ಓಡಾಡಿಕೊಂಡು, ಹಬ್ಬ, ಮದುವೆ, ಜಾತ್ರೆಗಳನ್ನು ವಿಜೃಂಭಣೆಯಿಂದ ಮಾಡಿದ್ದ ಜಿಲ್ಲೆಯ ಗ್ರಾಮೀಣರಿಗೆ ಇದೀಗ ಕೋವಿಡ್ ಮಹಾಮಾರಿ ಬರೋಬ್ಬರಿ ಜಾಡಿಸಿ ಒದೆಯುತ್ತಿದ್ದು, ಪ್ರತಿಹಳ್ಳಿಯಲ್ಲೂ ಪ್ರತಿದಿನ ಕನಿಷ್ಟ ಒಬ್ಬರು, ಗರಿಷ್ಠ ಆರೇಳು ಜನರವರೆಗೂ ಸಾವು ಸಂಭವಿಸುತ್ತಿವೆ. ಆರಂಭದಲ್ಲಿ ಇವು ಸೀಜನ್ ಜ್ವರ ಎಂದೇ ಭಾವಿಸಿದ್ದ ಹಳ್ಳಿಗರಿಗೆ ಇದೀಗ ಇದು ಮಹಾಮಾರಿ ಕೊರೊನಾ ಎಂದೇ ಪಕ್ಕಾ ಆಗಿದ್ದು, ಜನರೆಲ್ಲ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೆಲವಷ್ಟು ಜನರಿಗೆ ಗ್ರಾಮಗಳಲ್ಲಿನ ಕಂಟ್ರಿ ವೈದ್ಯರೇ ಜ್ವರದ ಮಾತ್ರೆ ಮತ್ತು ಆ್ಯಂಟಿಬಯೋಟಿಕ್ ನೀಡುತ್ತಲೇ ಇದ್ದಾರೆ. ಇದರಿಂದ ಶೇ.70 ಜನ ಚೇತರಿಕೆ ಕೂಡ ಕಾಣುತ್ತಿದ್ದಾರೆ. ಆದರೆ ವಯಸ್ಸಾದವರು, ಮೊದಲೇ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಇದ್ದವರು, ಹೃದಯ ಸಂಬಂಧಿ ಕಾಯಿಲೆ ಇದ್ದವರ ಪೈಕಿ ಹೆಚ್ಚಿನವರು ಕಣ್ಣೆದುರೇ ಸಾಯುತ್ತಿರುವುದು ಹಳ್ಳಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿರುವುದಕ್ಕೆ ಉದಾಹರಣೆಯಾಗಿದೆ.
ಹಿರಿಯರಿಲ್ಲದ ಹಳ್ಳಿ ಸುಮಾರು: ಗುರು ಇಲ್ಲದ ಮಠ ಸುಮಾರ, ಹಿರಿಯರಿಲ್ಲದ ಮನೆ ಸುಮಾರ ಎನ್ನುವ ಶಿಶುನಾಳ ಶರೀಫರ ತತ್ವಪದದಂತೆ ಆಗಿದೆ ಸದ್ಯಕ್ಕೆ ಹಳ್ಳಿಗಳ ಸ್ಥಿತಿ. ಪ್ರತಿದಿನ ಒಬ್ಬೊಬ್ಬ ತಮ್ಮೂರಿಗೆ ಉಪಕಾರ ಮಾಡಿದ ನಾಲ್ಕು ಜನರ ಬಾಯಲ್ಲಿ ಉತ್ತಮ ವ್ಯಕ್ತಿ ಎನಿಸಿಕೊಂಡಿದ್ದ ಹಿರಿಯರೆಲ್ಲರೂ ಮಹಾಮಾರಿಗೆ ಬಲಿಯಾಗುತ್ತಲೇ ಇದ್ದಾರೆ. ಕಳೆದ ಮೂರ್‍ನಾಲ್ಕು ದಶಕಗಳಿಂದ ಗ್ರಾಮದ ಎಲ್ಲಾ ಜನರಿಗೂ ಅತ್ಯುಪಕಾರ ಮಾಡಿದವರು, ಗ್ರಾಮದ ಸೇವೆಗಾಗಿ ದಾನ ಧರ್ಮ ಮಾಡಿ ಶಿಕ್ಷಣ, ಮಠಮಾನ್ಯಗಳಿಗೆ ಒತ್ತಾಸೆಯಾಗಿ ನಿಂತ ಪುಣ್ಯಾತ್ಮರಿಗೆ ಇದೀಗ ಕೋವಿಡ್ ವಕ್ಕರಿಸಿಕೊಳ್ಳುತ್ತಿದೆ. ಪ್ರತಿಹಳ್ಳಿಯಲ್ಲಿನ ಹಿರಿಯ ತಲೆಗಳೇ ದಿನಕ್ಕೊಂದರಂತೆ, ಎರಡರಂತೆ ಉರುಳಿ ಹೋಗುತ್ತಿವೆ. ಸಾವಿನ ಸರಣಿ ಸಹಿಸಿಕೊಳ್ಳಲಾರದ ಸ್ಥಿತಿ ಇದೇ ಮೊದಲ ಬಾರಿಗೆ ಹಳ್ಳಿಗರಿಗೆ ದೊಡ್ಡ ಸವಾಲಾಗಿ ನಿಂತಿದೆ.
ಅಂಕಿ-ಅಂಶಗಳೇ ಇಲ್ಲ: ಕೋವಿಡ್ ಪರೀಕ್ಷೆ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆದಿದೆ. ಪರೀಕ್ಷೆಯಿಂದ ದೃಢಪಟ್ಟವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿ ಮನೆಗೂ ಬರುತ್ತಿದ್ದಾರೆ. ಕೆಲವಷ್ಟು ಜನರು ಸಾವಿನ ಮನೆಗೂ ಹೋಗುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಲೆಕ್ಕದಲ್ಲಿ ಹೆಚ್ಚೆಂದರೆ ಬರೀ 10 ಜನರ ಸಾವು ನಮೂದಾಗುತ್ತಿದೆ. ಈವರೆಗೂ ಜಿಲ್ಲೆಯಲ್ಲಿ 787 ಜನ ಮೃತಪಟ್ಟಿದ್ದಾಗಿ ಜಿಲ್ಲಾಡಳಿತ ಲೆಕ್ಕ ಇಟ್ಟಿದೆ. 42 ಸಾವಿರ ಜನರಿಗೆ ಕೊರೊನಾ ವಕ್ಕರಿಸಿದ್ದು, ಈ ಪೈಕಿ 36 ಸಾವಿರಕ್ಕೂ ಅಧಿಕ ಜನರು ಈಗಾಗಲೇ ಗುಣಮುಖರಾಗಿದ್ದಾರೆ.
ಸದ್ಯಕ್ಕೆ 5740 ಸಕ್ರಿಯ ಪ್ರಕರಣಗಳು ಮೇ 14ರವರೆಗೆ ದಾಖಲಾಗಿವೆ. ಆದರೆ, ಧಾರವಾಡ ಜಿಲ್ಲೆಯ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಅಂದಾಜು 120 ರಿಂದ 160ಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಅಸುನೀಗುತ್ತಿದ್ದಾರೆ. ಈ ಪೈಕಿ 65ಕ್ಕಿಂತಲೂ ಹೆಚ್ಚಿನ ವಯಸ್ಸಿನವರೇ ಅಧಿಕವಾಗಿದ್ದಾರೆ. ಬರೀ ಕಫ ಒಂದೇ ಎಲ್ಲರನ್ನು ಬಲಿಪಡೆಯುತ್ತಿದೆ ಎಂಬ ಮಾತು ಹಳ್ಳಿಗರ ಬಾಯಲ್ಲಿ ಸಾಮಾನ್ಯವಾದರೂ, ನಿಜಕ್ಕೂ ಇದು ಪರೀಕ್ಷೆಗೆ ಒಳಪಡಿಸಿದರೆ ಕೋವಿಡ್-19 ಆಗಿದೆ. ಹೀಗಾಗಿ ಕೋವಿಡ್‌ನ ಲೆಕ್ಕದಲ್ಲಿ ಈ ಸಾವು ಸೇರ್ಪಡೆಯೇ ಆಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಕಷ್ಟವಾದರೂ ಮನೆಯಲ್ಲಿಯೇ ನಾನು ಸಾಯುತ್ತೇನೆ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಬೇಡಿ ಎನ್ನುವ ಮಾತುಗಳು ಸ್ವತಃ ರೋಗಿಗಳ ಬಾಯಲ್ಲೇ ಕೇಳಿ ಬರುತ್ತಿವೆ. ಕಾರಣ ಹಳ್ಳಿಗಳಲ್ಲಿ ಕೋವಿಡ್ ಎಂದಾಕ್ಷಣ ಅವರ ಅಂತಿಮ ಕ್ರಿಯಾಕರ್ಮಗಳಲ್ಲಿ ಯಾರೂ ಭಾಗಿಯಾಗದಂತಾಗಿದೆ. ಇದೊಂದು ಸಾಮಾಜಿಕ ಕಳಂಕ ಎಂಬಂತೆ ಬಿಂಬಿತವಾಗುತ್ತಿದೆ. ಕೋವಿಡ್ ನಿರ್ಲಕ್ಷ್ಯ ಮಾಡಿ ಸದ್ಯಕ್ಕೆ ಅದರ ದುಷ್ಪರಿಣಾಮ ಎದುರಿಸುತ್ತಿರುವ ಹಳ್ಳಿಯ ಮುಗ್ಧ ಜನ, ತಪ್ಪು ಮಾಡಿಕೊಂಡು ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಇನ್ನು ಆಗುತ್ತಿಲ್ಲ ಕೋವಿಡ್ ಪರೀಕ್ಷೆ: ಹಳ್ಳಿಗಳಲ್ಲಿ ಇಂದಿಗೂ ಕೋವಿಡ್ ಪರೀಕ್ಷೆ ಆಗುತ್ತಲೇ ಇಲ್ಲ. ಯಾರೂ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಲೇ ಇಲ್ಲ. ಇದೇ ದೊಡ್ಡ ಪ್ರಮಾದವಾಗಿದ್ದು, ಇದರಿಂದಲೇ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಅದೂ ಅಲ್ಲದೇ ಗ್ರಾಪಂಗಳು ಕಳೆದ ಬಾರಿಯಂತೆ ಈ ಬಾರಿ ಸ್ವಯಂ ಪ್ರೇರಣೆ ನಿರ್ಬಂಧ ಹೇರಿಕೊಳ್ಳುವುದು, ಜಾಗೃತಿ ಮೂಡಿಸಿ ಸ್ವಯಂ ಕ್ವಾರಂಟೈನ್ ಆಗುತ್ತಲೇ ಇಲ್ಲ. ಇದೇ ಹಳ್ಳಿಗಳಲ್ಲಿ ಕೊರೊನಾ ರುದ್ರನರ್ತನಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.