Advertisement
ಪ್ರತೀ ಆಟೋ, ಟ್ಯಾಕ್ಸಿ ಚಾಲಕರಿಗೆ 5,000 ರೂ. ಪರಿಹಾರದ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದರು. ಇದು ಘೋಷಣೆ ಯಾಗಿ ಮೂರು ತಿಂಗಳು ಕಳೆದರೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶೇ. 80ರಷ್ಟು ಚಾಲಕರಿಗೆ ಈ ಮೊತ್ತ ಲಭ್ಯವಾಗಿಲ್ಲ. ವಿಶೇಷ ಎಂದರೆ ದಿನದ ಬಾಡಿಗೆಯನ್ನೇ ನಂಬಿರುವ ಈ ವರ್ಗಕ್ಕೆ ಯಾವುದೇ ಅಧಿಕಾರಿ ವರ್ಗ ಕನಿಷ್ಠ ಮಾರ್ಗದರ್ಶನ ನೀಡುವ ಸಹಾಯವನ್ನೂ ಮಾಡಲಿಲ್ಲ. ಪ್ಯಾಕೇಜ್ ಘೋಷಿ ಸಿರುವ ಸರಕಾರವೇ ಚಾಲಕರಿಗೆ ಒದ ಗಿಸಲಿ ಎಂಬ ಅಧಿಕಾರಿಗಳ ಅಸಡ್ಡೆಯೇ ದೊಡ್ಡ ಸಂಖ್ಯೆಯ ಚಾಲಕರಿಗೆ ಪ್ಯಾಕೇಜ್ ಸೌಲಭ್ಯ ತಲುಪದಿರಲು ಕಾರಣ ಎನ್ನಬಹುದು. ಉಭಯ ಜಿಲ್ಲೆಗಳಲ್ಲಿ ಸುಮಾರು 51 ಸಾವಿರ ಟ್ಯಾಕ್ಸಿ / ರಿಕ್ಷಾ ಚಾಲಕರಿದ್ದು, 25,500 ಮಂದಿ ಸೇವಾಸಿಂಧು ಮುಖೇನ ಅರ್ಜಿ ಸಲ್ಲಿಸಿದ್ದಾರೆ. 6 ಸಾವಿರ ಮಂದಿಗಷ್ಟೇ ಇದುವರೆಗೆ ಹಣ ಬಂದಿದೆ.
ಬ್ಯಾಡ್ಜ್ ಹೊಂದಿದ ಚಾಲಕರು ಮಾತ್ರ ಸಹಾಯಧನಕ್ಕೆ ಅರ್ಹರು ಎಂಬುದು ರಾಜ್ಯ ಸರಕಾರ ಮೊದಲು ಹೊರಡಿಸಿದ ಸೂಚನೆ. ಇದಕ್ಕೆ ಚಾಲಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಪರಾಮರ್ಶಿಸಿ ಬ್ಯಾಡ್ಜ್ ಇಲ್ಲದಿರುವ ಆಟೋ ಚಾಲಕರಿಗೂ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಹಾಗೆಂದು ಅದಿನ್ನೂ ಕಾರ್ಯಗತವಾಗಿಲ್ಲ. ಸೇವಾ ಸಿಂಧುವಿನಡಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ತಾಂತ್ರಿಕ ಸಮಸ್ಯೆಗಳ ಜತೆಗೆ ಗ್ರಾಮೀಣ ಭಾಗಗಳಲ್ಲಿ ಮಾಹಿತಿ ಕೊರತೆಯಿಂದಾಗಿ ಅನೇಕ ಆಟೋ/ ಕ್ಯಾಬ್ ಚಾಲಕರಿಗೆ ಅರ್ಜಿ ಸಲ್ಲಿಕೆಯೇ ಸಾಧ್ಯವಾಗಿರಲಿಲ್ಲ. ಸಮಸ್ಯೆ ಕೇಳುವವರೇ ಇಲ್ಲ
ಅರ್ಜಿ ಹಾಕಿ ಎರಡು ತಿಂಗಳಾದರೂ ಹಣ ಬಂದಿಲ್ಲ. ದಾಖಲೆಗಳನ್ನೆಲ್ಲ ನೀಡಲಾಗಿದೆ. ಸಹಾಯವಾಣಿಗೆ ಕರೆ ಮಾಡಿದರೆ ಉತ್ತರಿಸುವವರೇ ಇಲ್ಲ. ರಾಜ್ಯ ಸರಕಾರದಿಂದ ಕೆಲವು ದಿನಗಳ ಹಿಂದೆ ವೀಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗಿತ್ತು. ಅಲ್ಲೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಉಡುಪಿಯ ಚಾಲಕ ಸುರೇಶ್ ಅಮೀನ್ ತಿಳಿಸಿದ್ದಾರೆ. ನಾನು ಆರಂಭದಲ್ಲಿಯೇ ಅರ್ಜಿ ಹಾಕಿದ್ದೆ. ನನಗೆ ಹಣ ಬಂದಿತ್ತು. ಆದರೆ ಅನಂತರದವರಿಗೆ ಬಂದಿಲ್ಲ ಎನ್ನುತ್ತಾರೆ ಮಂಗಳೂರಿನ ಚಾಲಕ ಆನಂದ್ ಕೆ.
Related Articles
ಆಟೋ ಚಾಲಕರಿಗೆ ಸರಕಾರ ಘೋಷಿಸಿರುವ ಪರಿಹಾರ ಧನ ಬಿಡುಗಡೆಗೆ ಸಂಬಂಧಿಸಿದಂತೆ ಇಲಾಖೆಗಳ ನಡುವೆ ಗೊಂದಲ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಕುರಿತು ಮಾಹಿತಿ ಪಡೆಯಲು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ; ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತಿದ್ದು ಅವರನ್ನೇ ಕೇಳಿ ಎನ್ನುತ್ತಿದ್ದಾರೆ. ಜಿಲ್ಲಾಡಳಿತದವರನ್ನು ಕೇಳಿದರೆ, ಅದು ಆರ್‌ಟಿಒ ವ್ಯಾಪ್ತಿಗೆ ಸೇರಿದ್ದು, ಅವರನ್ನೇ ಕೇಳಿ ಎನ್ನುತ್ತಿದ್ದಾರೆ. ಹೀಗಿರುವಾಗ ಚಾಲಕರು ಸಂದೇಹ ಪರಿಹಾರ ಅಥವಾ ಹೆಚ್ಚಿನ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯದೆ ಅಸಹಾಯಕರಾಗಿದ್ದಾರೆ. ಈಗಲಾದರೂ ಈ ಚಾಲಕ ಸಮುದಾಯಕ್ಕೆ ಬರಬೇಕಾದ ಸರಕಾರದ ಪ್ಯಾಕೇಜ್ ತಲುಪಿಸುವಲ್ಲಿ ಸ್ಪಂದಿಸುವ ಹೊಣೆಗಾರಿಕೆ ಯಾವ ಇಲಾಖೆಯದ್ದು ಮತ್ತು ಸಂಬಂಧಪಟ್ಟವರು ತಮ್ಮ ಉತ್ತರದಾಯಿತ್ವ ಪ್ರದರ್ಶಿಸುವರೇ ಎಂಬುದನ್ನು ಕಾದು ನೋಡಬೇಕು.
Advertisement
ಯಾವ ಪರಿಶೀಲನೆಯೋ..ನಾನು ಕಳೆದ 20 ವರ್ಷ ಗಳಿಂದ ಉಡುಪಿಯಲ್ಲಿ ಆಟೋ ಓಡಿಸುತ್ತಿದ್ದೇನೆ. ಅರ್ಜಿ ಸಲ್ಲಿಸಿ 2 ತಿಂಗಳಾಯಿತು. ಹಣ ಬಂದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಬ್ಯಾಡ್ಜ್ ಸಮಸ್ಯೆ ಉಂಟಾಗಿತ್ತು. ಸಾರಿಗೆ ಇಲಾಖೆಗೆ ತೆರಳಿ ಅದನ್ನು ಸರಿಪಡಿಸಿದ ಬಳಿಕ ಅರ್ಜಿ ಸ್ವೀಕೃತಗೊಂಡಿದೆ. ಆದರೆ ಈಗಲೂ ವೆಬ್‌ಸೈಟ್‌ನಲ್ಲಿ ಅರ್ಜಿ ಪರಿಶೀಲನೆಯಲ್ಲಿದೆ ಎಂದೇ ಹೇಳುತ್ತಿದೆ. ನನ್ನದು 70,000 ಮೇಲಿನ ನಂಬರ್. 16,000ಕ್ಕಿಂತ ಹೆಚ್ಚಿನ ನಂಬರ್ ದೊರಕಿದ ಹೆಚ್ಚಿನ ಚಾಲಕರಿಗೆ ಇನ್ನೂ ಹಣ ಬಂದಿಲ್ಲ.
– ವಿಕ್ರಂ ರಾವ್, ಟ್ಯಾಕ್ಸಿ ಚಾಲಕರು, ಉಡುಪಿ ಸರಕಾರದ ಗಮನಕ್ಕೆ ತರುತ್ತೇನೆ
ಆಟೋ – ಟ್ಯಾಕ್ಸಿ ಚಾಲಕರ ಪರಿಹಾರ ಧನ ವಿಳಂಬದ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು. ವಿಳಂಬಕ್ಕೆ ಕಾರಣ ಏನೆಂಬ ಬಗ್ಗೆ ವರದಿ ತರಿಸಲಾಗುವುದು. ಬ್ಯಾಡ್ಜ್ ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ತಾಂತ್ರಿಕ ಕಾರಣದಿಂದ ಸಾಧ್ಯವಾಗದೆ ಇದ್ದಿರಬಹುದು. ಈ ಬಗ್ಗೆ ಸರಕಾರ ಮಟ್ಟದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಉಸ್ತುವಾರಿ ಸಚಿವ ಸಹಾಯಕ್ಕಿಲ್ಲದ ಸಹಾಯವಾಣಿ!
ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲನೆ ಅಥವಾ ಯಾವುದೇ ಮಾಹಿತಿಗಾಗಿ ಪೋರ್ಟಲ್‌ನಲ್ಲಿರುವ ಸಹಾಯವಾಣಿಗೆ ಕರೆ ಮಾಡಿದರೆ ಸದಾ ಕಾಲ ಬ್ಯುಸಿ ಬರುತ್ತಿದೆ. ಇಡಿಸಿಎಸ್ ಸಹಾಯವಾಣಿಗೆ ಕರೆ ಮಾಡಿದರೆ ಸಂಪರ್ಕವೇ ಸಾಧ್ಯವಾಗುತ್ತಿಲ್ಲ. ಪರಿಹಾರ ಧನ ಸಿಗದಿರಲು ಕಾರಣವೇನು?
ಮಾಹಿತಿ ಕೊರತೆಯ ನಡುವೆ ಅಂತಿಮ ದಿನಾಂಕ ಮುಗಿದಿರುವುದು
ಬ್ಯಾಡ್ಜ್ ಇದ್ದವರಿಗೆ ಮಾತ್ರ ಎಂಬ ಆರಂಭಿಕ ಸೂಚನೆ; ಬ್ಯಾಡ್ಜ್ ಇಲ್ಲದವರಿಗೂ ಒದಗಿಸುವ ಭರವಸೆ ಈಡೇರಿಲ್ಲ
ಸಂದೇಹ ಬಗೆಹರಿಸಲು ಸಹಾಯವಾಣಿ ವಿಫಲ