ನವದೆಹಲಿ: ದಿಗ್ಬಂಧನ ಸಡಿಲಿಕೆ ಆಗಿ ಭಾರತ ಹಾಕಿ ತಂಡದ ಆಟಗಾರರಿಗೆ ಹೊರಾಂಗಣ ಕ್ರೀಡಾಂಗಣದಲ್ಲಿ ಎಂದಿನಂತೆ ಅಭ್ಯಾಸ ಮತ್ತೆ ಶುರುವಾದ ನಂತರ ಆಟಗಾರರು ಕೆಲವೊಂದು ಕಡ್ಡಾಯ ನಿಯಮಗಳನ್ನು ಪಾಲಿಸಲೇ ಬೇಕಿದೆ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ತರಬೇತಿ ಪಡೆಯುವ ವೇಳೆ 40/20 ಮೀ. ಜಾಗದಲ್ಲಿ 4ರಿಂದ 6 ಆಟಗಾರರು ಮಾತ್ರ ಪಾಲ್ಗೊಳ್ಳಬಹುದು, ಈ ವೇಳೆ 1 ಮೀ. ಅಂತರ ಕಾಯ್ದುಕೊಳ್ಳಬೇಕು. ಆಟ ಗಾರರು ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಅಭ್ಯಾಸ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಪ್ರತ್ಯೇಕ ತಂಡಗಳಾಗಿ ಮಾಡಿ ಆಟಗಾರರನ್ನು ತರಬೇತಿಗೆ ಒಳಪಡಿಸುವುದು, ತಂಡವೊಂದರಲ್ಲಿ 3ರಿಂದ4 ಆಟಗಾರರು ಇರಬೇಕು, ಒಂದು ವೇಳೆ ಸೋಂಕು ಹಬ್ಬಿದರೆ ಒಂದು ಗುಂಪಿನೊಳಗೆ ಮಾತ್ರ ಸೋಂಕು ಹರಡಿರುತ್ತದೆ.ಇದರಿಂದ ಇತರೆ ಗುಂಪಿನಲ್ಲಿರುವ ಆಟಗಾರರಿಗೆ ಸೋಂಕು ಹರಡದಂತೆ ನೋಡಿಕೊಳ್ಳಬಹುದು. ನೀರು, ಟವಲ್ ಇತ್ಯಾದಿಗಳನ್ನು ಆಟಗಾರರೇ ಪ್ರತ್ಯೇಕ ವಾಗಿ ತರಬೇಕು ಎನ್ನುವ ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.