Advertisement

ಎಚ್ಚರ ತಪ್ಪದೆ ಸೋಂಕು ತಡೆಗೆ ಸನ್ನದ್ದರಾಗಿ

06:07 PM May 30, 2021 | Team Udayavani |

ರಾಮನಗರ: ಕ್ಷೇತ್ರದಲ್ಲಿ ಕೋವಿಡ್ ಸೋಂಕಿತರ ಅಂಕಿ-ಸಂಖ್ಯೆ ಕಲೆ ಹಾಕಿ, ಕೋವಿಡ್ ಕೇರ್ ಸೆಂಟರ್ ಗಳು, ಚಿಕಿತ್ಸೆ-ವ್ಯವಸ್ಥೆ, ವೈಯಕಿಕವಾಗಿ ಆ್ಯಂಬುಲೆನ್ಸ್ ಸೇರಿದಂತೆ ಸೋಂಕು ತಡೆಗೆ ಶ್ರಮಿಸುತ್ತಿರುವ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಉದಯವಾಣಿಗೆ ನೀಡಿರುವ ಕಿರು ಸಂದರ್ಶನದ ಮೂಲಕ ಕ್ಷೇತ್ರದ ಜನತೆ ಮುಂದೆ ತೆರೆದುಕೊಂಡಿದ್ದಾರೆ.

Advertisement

ಕ್ಷೇತ್ರ ವ್ಯಾಪ್ತಿ ಕೋವಿಡ್ ನಿರ್ವಹಣೆಯಲ್ಲಿ ನಿಮ್ಮ ಪಾತ್ರವೇನು?

ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಿಸಲು ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಉಸ್ತುವಾರಿ ಸಚಿವರು ನಡೆಸಿರುವ ವಿಡಿಯೋ ಕಾನ್ಪರೆನ್ಸ್ನಲ್ಲೂ ಭಾಗಿಯಾಗಿದ್ದೇನೆ. ತೀರಾ ಇತ್ತೀಚೆಗೆ ಚನ್ನಪಟ್ಟಣ ಶಾಸಕರು ಆಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ನಾಲ್ಕೂ ತಹಶೀಲ್ದಾರರ ಜತೆ ನಡೆಸಿದ ವರ್ಚುಯಲ್ ಸಭೆಯಲ್ಲೂ ಭಾಗವಹಿಸಿದ್ದು, ಅಗತ್ಯ ಮಾಹಿತಿ, ಸಲಹೆಗಳನ್ನು ಕೊಟ್ಟಿದ್ದೇನೆ. ಕ್ಷೇತ್ರ ವ್ಯಾಪ್ತಿಯ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ವ್ಯವಸ್ಥೆ, ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಪಡೆಯುತ್ತಿರುವೆ. ರಾಮನಗರ ಸೇರಿದಂತೆ ಜಿಲ್ಲಾದ್ಯಂತ ಎರಡನೆ ಅಲೆಯನ್ನು ಸೂಕ್ತವಾಗಿ ಎದುರಿಸಲು ಅನುಕೂಲವಾಗುವಂತೆ ತಾವು ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಜಿಲ್ಲಾಸ್ಪತ್ರೆಯ ನೂತನ ಕಟ್ಟಡದಲ್ಲಿ 130 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಸಿದ್ಧವಾಗಿದೆ.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಧ್ಯ ಕೋವಿಡ್ ಪರಿಸ್ಥಿತಿ ಹೇಗಿದೆ?

ಸೋಂಕು ಕಡಿಮೆಯಾಗುತ್ತಿದೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತಿವೆ. ಪರಿಸ್ಥಿತಿ ಸುಧಾರಿಸುತ್ತಿದೆ. ಸೋಂಕಿನಿಂದ ಗುಣಮುಖರಾಗು ತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮರಣ ಪ್ರಮಾಣ ಕಡಿಮೆಯಾಗುತ್ತಿರುವುದು ಸಮಾಧಾನದ ವಿಚಾರ. ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸಧ್ಯ 745 ಸಕ್ರಿಯ ಪ್ರಕರಣಗಳಿವೆ. 7 ಕೋವಿಡ್ ಕೇರ್ ಸೆಂಟರ್ಗಳಿವೆ. ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಸೋಂಕು ಹಿಡಿತದಲ್ಲಿದೆ. ಹಾಗಂತ ಎಚ್ಚರ ತಪ್ಪುವುದು ಸರಿಯಲ್ಲ. ಜನತೆ ಮಾರ್ಗಸೂಚಿ ಪಾಲಿಸಬೇಕು. ಅನಗತ್ಯ ಓಡಾಟ ನಡೆಸಬಾರದು.

Advertisement

ಜಿಲ್ಲೆಯಲ್ಲಿ ಸೋಂಕು ಹತೋಟಿಯಲ್ಲಿದೆ ಎಂದಾದರೆ ಕರ್ಫ್ಯೂ ಅಗತ್ಯವಿದೆಯೇ?

ಸರ್ಕಾರ ಜೂನ್ 7ರವರೆಗೆ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಇದಕ್ಕೆ ರಾಮನಗರ ಜಿಲ್ಲೆ ಹೊರತಾಗಿರಬೇಕಾಗಿಲ್ಲ. ಸೋಂಕು ಕಡಿಮೆಯಾಗುತ್ತಿದೆ ಎಂದು ಎಚ್ಚರ ತಪ್ಪಿದರೆ, ಮೂರನೆ ಅಲೆಗೆ ಬೇಗ ಆಹ್ವಾನ ನೀಡಿದಂತೆ. ಹೀಗಾಗಿ ಇನ್ನೊಂದು ವಾರ ಕರ್ಫ್ಯೂ ಅವಶ್ಯಕತೆ ಇದೆ ಎಂಬುದು ನನ್ನ ಅಭಿಪ್ರಾಯ.

ಕ್ಷೇತ್ರದಲ್ಲಿ ವ್ಯಾಕ್ಸಿನ್ ಕೊರತೆ ನೀಗಿಲ್ಲ ಎಂಬ ದೂರು ಸಾರ್ವಜನಿಕರದ್ದು, ನಿಮ್ಮ ಅಭಿಪ್ರಾಯವೇನು?

ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು ಎಂಬುದು ಸರ್ಕಾರದ ಉದ್ದೇಶ. ಉದ್ದೇಶಕ್ಕೆ ತಕ್ಕಂತೆ ಸರ್ಕಾರ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿಕ ಜನಸಂಖ್ಯೆಯಿರುವ ದೇಶದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದರಲ್ಲಿ ಸರ್ಕಾರ ಎಡವಿದೆ. ಮೇಲಾಗಿ ಆರಂಭದಲ್ಲಿ ಜನರು ಸಹ ಲಸಿಕೆ ಪಡೆಯಲು ಆಸಕ್ತಿ ತೋರಲಿಲ್ಲ. ಸೋಂಕು ಕಾರಣ ಸಾವು-ನೋವಿನ ಸಂಖ್ಯೆ ಹೆಚ್ಚಾದ ನಂತರ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಸರ್ಕಾರ ತಕ್ಷಣ ಎಲ್ಲಾ ಪ್ರಯತ್ನಗಳನ್ನು ನಡೆಸಿ ವ್ಯಾಕ್ಸಿನ್ ಉಚಿತವಾಗಿ ಪೂರೈಸಬೇಕಾಗಿದೆ.

ಸದ್ಯ ಲಸಿಕೆಯೊಂದೇ ಪರಿಹಾರ ಸೋಂಕು ವಿಚಾರದಲ್ಲಿ ಶಾಸಕರಾಗಿ, ಒಬ್ಬ ವ್ಯಕ್ತಿಯಾಗಿ ನಿಮ್ಮ ಕೊಡುಗೆ?

ಅಧಿಕಾರಿಗಳೊಂದಿಗೆ ವಚ್ಯುìಯಲ್ ಸಭೆಯಲ್ಲಿ ತಹಶೀಲ್ದಾರರು ಆ್ಯಂಬುಲೆನ್ಸ್ ಕೇಳಿದ್ದರು. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಬಳಕೆಗೆಂದು ತಲಾ ಒಂದು ಆ್ಯಂಬುಲೆನ್ಸ್ ವೈಯಕ್ತಿಕವಾಗಿ ನೀಡಲಾಗಿದೆ. ಶಾಸಕಿಯಾಗಿ ನನಗೆ ಕ್ಷೇತ್ರದ ಜನರಿಂದ ಆಕ್ಸಿಜನ್ ಬೆಡ್, ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಹೀಗೆ ಸಹಾಯ ಕೋರಿ ದೂರವಾಣಿ ಕರೆಗಳು ಬಂದಿವೆ. ಎಲ್ಲರಿಗೂ ಸ್ಪಂದಿಸಿದ್ದೇನೆ. ಕರ್ಫ್ಯೂ ಸಂದರ್ಭದಲ್ಲಿ ಸರ್ಕಾರ ಉಚಿತ ಪಡಿತರ, ಇಂದಿರಾ ಕ್ಯಾಂಟಿನ್ ಮೂಲಕ ಆಹಾರ ವಿತರಣೆ ನಡೆಸುತ್ತಿದೆ. ಹಸಿವಿನಿಂದ ನರಳುತ್ತಿರುವವ ಬಗ್ಗೆ ತಮಗೆ ದೂರುಗಳು ಕೇಳಿ ಬಂದಿಲ್ಲ. ಹಾಗೊಮ್ಮೆ ದೂರುಗಳು ಬಂದರೆ ತಕ್ಷಣ ಸ್ಪಂದಿಸುವೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರಿಗೆ ಹಣ್ಣು-ಹಂಪಲು ಕೊಡಲು ಸಲಹೆ ಬಂದಿದೆ. ಇದಕ್ಕೆ ಶೀಘ್ರದಲ್ಲೇ ಸ್ಪಂದಿಸಲಿದ್ದೇವೆ. ಪಕ್ಷದಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ.

ರಾಜೀವ್ ಗಾಂಧಿ ಆರೋಗ್ಯ ವಿವಿ ಇಂದಿನ ಅಗತ್ಯ

ಎಚ್.ಡಿ.ಕುಮಾರಸ್ವಾಮಿಯವರು ದೂರದೃಷ್ಟಿ ಇಟ್ಟುಕೊಂಡೇ ರಾಮನಗರ ದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಮತ್ತು ಆರೋಗ್ಯ ನಗರ ನಿರ್ಮಾಣಕ್ಕೆ ಮುಂದಾಗಿದ್ದರು. ಇಂದು ಈ ಯೋಜನೆ ಸಾಫಲ್ಯವಾಗಿದ್ದರೆ, ರಾಮನಗರ ಜಿಲ್ಲೆ ಮಾತ್ರವಲ್ಲದೆ, ಹಳೆ ಮೈಸೂರು ಭಾಗದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಗಾರಿಯಾಗಿ ನಿಭಾಯಿಸಬಹುದಿತ್ತು. ಆದರೆ ನಂತರ ಬಂದ ಸರ್ಕಾರಗಳು ಈ ವಿಚಾರದಲ್ಲಿ ಆಸಕ್ತಿ ತೋರಿಸಲಿಲ್ಲ. ಸರ್ಕಾರ ಈಗಲಾದರು ತಕ್ಷಣ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು.

ಬಿ.ವಿ.ಸೂರ್ಯ ಪ್ರಕಾಶ್

Advertisement

Udayavani is now on Telegram. Click here to join our channel and stay updated with the latest news.

Next