ಕೊರೊನಾದಿಂದ ನಾವು ಪಾಠ ಕಲಿತಿದ್ದೇವೊ ಇಲ್ಲವೊ ಗೊತ್ತಿಲ್ಲ. ಆದರೆ ಕೊರೊನಾ ಪಾಠವ ನ್ನಂತೂ ನೀಡಿದೆ. ದೇಸೀಯತೆಯನ್ನು ಉಳಿಸು ವುದಕ್ಕಾಗಿ ಸ್ಥಳೀಯತೆಯನ್ನು ಪೋಷಿಸಿ ಬೆಳೆಸ ಬೇಕು. ರಾಷ್ಟ್ರ ಪ್ರೇಮವನ್ನು ರೂಢಿಸಿಕೊಳ್ಳಲು ಸ್ಥಳೀ ಯತೆಯ ಅಭಿಮಾನ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೊರೊನಾ ಪಾಠ ಕಲಿಸಿದೆ.
ಯಾವಾಗ ನಿಸರ್ಗ ಅವಗಣಿಸಲ್ಪಟ್ಟು ಆರ್ಥಿಕ ತೆಯನ್ನೇ ಕೇಂದ್ರೀಕರಿಸಿದ ಅಭಿವೃದ್ಧಿ ಮುನ್ನೆಲೆ ಯಾಯಿತೋ ಆವಾಗ ಅಭಿವೃದ್ಧಿಯ ನೈಜ ಮುಖ ಮರೆಯಾಯಿತು. ವೇಗದ ಅಭಿವೃದ್ಧಿಯತ್ತ ಮುಖ ಮಾಡಿದ ನಮ್ಮ ಧಾವಂತಕ್ಕೆ ತಡೆಯಾಗಿ ಕೊರೊನಾ ಇಂದು ನಮ್ಮ ಮುಂದೆ ಬಂದು ಅಂತ ರಾವಲೋಕನವನ್ನು ಮಾಡಿ ಎಂದು ಎಚ್ಚರಿಸಿ ದಂತಾಗಿದೆ. ದೇಶೀಯತೆಯನ್ನು ಮರೆತು ಸ್ಥಳೀ ಯತೆಗೆ ಪ್ರಾಶಸ್ತ್ಯ ನೀಡದ ಯಾವುದೇ ಅಭಿ ವೃದ್ಧಿ ಶಾಶ್ವತವಲ್ಲ. ಇದು ನಿಸರ್ಗಕ್ಕೆ ವಿರುದ್ಧವಾ ಗಿಯೇ ಇರುತ್ತದೆ. ಇದರಿಂದಾಗಿ ಎಲ್ಲವೂ ಕೃತಕ ವಾಗಿ, ಬದುಕನ್ನೂ ಕೃತಕವಾಗಿಯೇ (ಪರಾವ ಲಂಬಿತನ) ಕಟ್ಟಿಕೊಳ್ಳಬೇಕಾದ ಸ್ಥಿತಿಗೆ ತಳ್ಳಲ್ಪಟ್ಟು ಕೃತಾರ್ಥರಾದೆವು.
ಅನಾದಿಕಾಲದಿಂದಲೂ ಭಾರತೀಯ ಜೀವನ ಪರಂಪರೆ, ಪರಿಸರವನ್ನೂ ನಮ್ಮನ್ನೂ ಸುಪುಷ್ಟವಾಗಿ ಮತ್ತು ಸಂತುಲಿತವಾಗಿ ಬೆಳೆಸಿದೆ. ನಾವೂ ಅದನ್ನು ಕಾಪಿಟ್ಟುಕೊಂಡು ಬಂದಿದ್ದೇವೆ. ಯಾವಾಗ ಅಭಿವೃದ್ಧಿಯ ಬೆಳವಣಿಗೆಯನ್ನು ಆರ್ಥಿಕ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲಾಯಿತೋ ಅಲ್ಲಿಂದ ನಾವು ಅಡಿ ತಪ್ಪಿದೆವು. ಶಿಕ್ಷಣವೂ ಆರ್ಥಿಕ ಲಾಭ- ನಷ್ಟದ ಲೆಕ್ಕಾಚಾರಕ್ಕೆ ತಾಳ ಹಾಕಲಾ ರಂಭಿಸಿತು. ಶಿಕ್ಷಣದ ಮೂಲಕ ಪ್ರತಿಯೊಬ್ಬರ ಮಿದುಳೂ ವಾಣಿಜ್ಯ ಉದ್ಯಮಗಳಿಗೆ ಎರವಲು ನೀಡಲ್ಪಟ್ಟಿತು. ಎಲ್ಲ ಕಡೆ ಅತೀ ಬೇಗ -ಅತೀ ಹೆಚ್ಚು ಎಂಬ ಹುಚ್ಚು ಅಭಿವೃದ್ಧಿ ಆಯಿತು. ಸ್ಥಳೀ ಯತೆ ಅರ್ಥಾತ್ ದೇಶೀಯತೆ ಎನ್ನುವುದು ಬೊಗಳೆಯಾಯಿತು.
ನಗರೀಕರಣವು ಅಭಿವೃ ದ್ಧಿಯ ನೀತಿಯಾಯಿತು. ಆಡಳಿತಗಾರರು ಹೆಚ್ಚು ಹೆಚ್ಚು ಸಂಗ್ರಹ ಮತ್ತು ಖರ್ಚುಗಳ ಲೆಕ್ಕಾಚಾರದಲ್ಲೇ ಮುಳುಗೇಳಲಾರಂಭಿಸಿದರು. ಇದುವೇ ಅಭಿವೃದ್ಧಿಯ ಸೂಚ್ಯಂಕವಾಯಿತು. ಪರಿಸರ ಸಮತೋಲನ, ನೆಮ್ಮದಿ, ಮಾನವತೆ, ಸಾಮಾಜಿಕ ಸ್ವಾಸ್ಥ್ಯ, ಸ್ವಾವಲಂಬನೆ ಇತ್ಯಾದಿ ಕೇವಲ ಘೋಷಣೆಯಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲರೂ ಪರಾವಲಂಬಿಗಳಾಗಿ ಪ್ರತೀ ವ್ಯಕ್ತಿಯೂ ಒಂದೋ ಶೋಷಿತನಾಗುತ್ತಾನೆ ಅಥವಾ ಶೋಷಿ ಸುವವನಾಗುತ್ತಾನೆ. ಪರೋಕ್ಷವಾಗಿ ಹೆಚ್ಚು ಹೆಚ್ಚು ಲೂಟಿ ಮಾಡುವವ, ಶೋಷಣೆ ಮಾಡುವವ ಸಾಮಾಜಿಕವಾಗಿ ತಾಕತ್ತಿದ್ದವನೆಂದು(ಸಮರ್ಥ) ಗುರುತಿಸಿಕೊಳ್ಳುತ್ತಾನೆ. ಈ ಕಾರಣದಿಂದಲೇ ನಮ್ಮ ವ್ಯವಸ್ಥೆ, ಸ್ವಸ್ಥ ಸಮಾಜದ ಬದಲು ಅಸಮ ತೋಲನದ ರೂಪು ಪಡೆಯಿತು. ಹೊಸ ಹೊಸ ಕಾಯಿಲೆಗಳು, ಸಾಮುದಾಯಿಕ ಅಸಾಮರಸ್ಯ, ವ್ಯಕ್ತಿವಾದದ ಹಿನ್ನೆಲೆಯಲ್ಲಿ ಒಡೆದುಹೋಗುತ್ತಿರುವ ಕೌಟುಂಬಿಕ ರಚನಾ ವ್ಯವಸ್ಥೆ, ಮಾಯವಾದ ಪಾರಂಪರಿಕ ನೆಮ್ಮದಿಯ ಸೂತ್ರಗಳು, ಅತೃಪ್ತಿ ಅಸಹಿಷ್ಣುತೆಯನ್ನು ಬೆಳೆಸುವ ಮಾಧ್ಯಮಗಳು, ಅಭದ್ರತೆ ಮತ್ತು ದುರ್ಬಲ ಬೌದ್ಧಿಕತೆಯನ್ನು ಪೋಷಿಸುವ ಶಿಕ್ಷಣ, ಸಾಂಸ್ಕೃತಿಕ ಬರಡುತನಕ್ಕೆ ನೀರೆರೆಯುವ ಮನೋಭಾವ, ಹಳ್ಳಿಗಳನ್ನು ಗುಳೇ ಎಬ್ಬಿಸುವ ಅಭಿವೃದ್ಧಿ ಯೋಜನೆಗಳು, ಸ್ಥಳೀಯ ತೆಯ(ಸಮೀಪ ದೃಷ್ಟಿ) ಚಿಂತನೆಗಳಿಲ್ಲದ ದೂರದೃಷ್ಟಿ ಮುಂತಾದ ಅವಾಂತರಗಳೇ ಮೇಳೈಸಲಾರಂಭಿಸಿದೆ. ಕೊರೊನಾ ಅವೆಲ್ಲಕ್ಕೂ ಪರಿಹಾರ ರೂಪದಲ್ಲಿ ಚಿಂತನೆ ನಡೆಸುವಂತೆ ನಮ್ಮನ್ನು ತಡೆದು ನಿಲ್ಲಿಸಿದೆ. ಸ್ಥಳೀಯತೆಯನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಸ್ಥಳೀಯತೆ ಎಂದರೆ ನಮ್ಮ ನೆಲ, ಜಲ, ಭಾಷೆ, ಜನ, ಸಂಸ್ಕೃತಿ ಎಂಬ ಅಭಿಮಾನವನ್ನು ಪೋಷಿಸಿ ಗಟ್ಟಿಗೊಳಿಸುವುದು. ಅದಕ್ಕಾಗಿ ಮತ್ತು ಇಂದಿನ ಪರಿಸ್ಥಿತಿಯ ನಿರ್ವಹಣೆಗಾಗಿ ನಾವೇನು ಮಾಡಬೇಕು?
1. ಗರಿಷ್ಠ ಸಾಧ್ಯತೆಯ ನೆಲೆಯಲ್ಲಿ ನಾವು ಎಲ್ಲಿದ್ದೇವೋ ಅಲ್ಲಲ್ಲಿಯೇ ಬದುಕನ್ನು ಕಟ್ಟಿಕೊಳ್ಳು ವಂತಾಗಬೇಕು.
2. ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಮೊದಲ ಆದ್ಯತೆ ಸಿಗಬೇಕು.
3. ಶಿಕ್ಷಣದಲ್ಲಿ ಆರಂಭಿಕ ಹಂತದಿಂದಲೇ ಜೀವನ ಮೌಲ್ಯ ಮತ್ತು ಕೌಶಲಗಳನ್ನು ಕಲಿಸುವುದು.
4. ನನ್ನ ಊರು, ನನ್ನ ಊರಿನ ಶಾಲೆ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಪ್ರತಿ ಯೊಬ್ಬರೂ ಗರಿಷ್ಠ ತರಗತಿಯವರೆಗೆ(ಅವಕಾಶ ಇರುವಷ್ಟು) ಗ್ರಾಮದೊಳಗಿನ ಸ್ಥಳೀಯ ಶಾಲೆಗೇ ಹೋಗಬೇಕು.
5. ಗ್ರಾಮಗಳಲ್ಲಿ ಆಡಳಿತಾತ್ಮಕ ಮತ್ತು ಸಾಮಾಜಿಕ ವ್ಯವಸ್ಥೆಯ ಸುಧಾರಣೆ, ಬದಲಾವಣೆ ಆಗಬೇಕು.
6. ಸರಳತೆಯ ಬದುಕಿನ ಉಪಕ್ರಮಗಳ ಅನುಸರಣೆ.
ಸಾಮಾನ್ಯವಾಗಿ ಜನ ಓಡಾಟವನ್ನೇ ಬದುಕಾ ಗಿಸಿಕೊಂಡಿದ್ದಾರೆ. ಕೊರೊನಾ ಹೇಳುತ್ತದೆ ಮನೆಯಲ್ಲೇ ಇರಿ ಆರೋಗ್ಯವಂತರಾಗಿ ಎಂದು. ಹಾಗಾದರೆ ಭವಿಷ್ಯದ ಭದ್ರತೆ ಓಡಾಟದಲ್ಲಿಲ್ಲ ಎಂದಾಯಿತು. ಖಾಸಗಿ ಕಾರ್ಯಕ್ರಮಕ್ಕೆ ಜನ ಸೇರಿಸಬೇಡಿ ಮತ್ತು ಸಾರ್ವಜನಿಕ ಸಮಾರಂಭ ಮಾಡಬೇಡಿ ಎಂದು ನಿಯಮ ಹೇರುತ್ತಾರೆ. ಆದರೆ ನಮ್ಮ ದಿನಚರಿ ಮಾತ್ರ ಅದಕ್ಕೆ ತದ್ವಿರುದ್ಧ ವಾಗಿದೆ. ಯಾರಿಗೂ ಗ್ರಾಮದೊಳಗಿನದು ಅಥವಾ ಸ್ಥಳೀಯವಾಗಿರುವುದು ಶ್ರೇಷ್ಠ ಅಂತನ್ನಿಸುವುದೇ ಇಲ್ಲ. ಸ್ಥಳೀಯ ಸ್ಥಿತಿಯನ್ನು ಸುಧಾರಣೆ ಮಾಡುವ ಧೋರಣೆಯೂ ಇಲ್ಲ. ದೂರದ ಬೆಟ್ಟದ ನುಣುಪನ್ನೇ ಅಪ್ಪಿಕೊಳ್ಳುವ ವಿದೇಶೀಯತೆಯ ರೋಗ ನಮ್ಮನ್ನು ಬಾಧಿಸುತ್ತಿದೆ. ಈ ರೀತಿಯ ಓಟದ ಮತ್ತು ಓಡಾಟದ ಬದುಕು ಇವತ್ತು ಕೊರೊನಾದಿಂದ ಅಭದ್ರವಾಗಿದೆ.
ಅನಂತರ… ಛಿದ್ರವಾಗಲೂಬಹುದು. ಭವಿಷ್ಯದಲ್ಲೂ ಈ ಪ್ರಶ್ನೆಕಾಡದೆ ಇರದು. ಸ್ಥಳೀಯವಾಗಿರಿ ಮತ್ತು ಸರಳವಾಗಿರಿ ಎಂಬ ಪಾಠವನ್ನೂ ಕೊರೊನಾ ಕಲಿಸಿದೆ.
– ರಾಮಕೃಷ್ಣ ಭಟ್ ಚೊಕ್ಕಾಡಿ ಬೆಳಾಲು