ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ -19ಗೆ ಬಲಿಯಾದವರ ಶವ ಸಾಗಾಟಕ್ಕೆ ಆ್ಯಂಬುಲೆನ್ಸ್ ಕೊರತೆ ಉಂಟಾಗಿದೆ. ಶುಕ್ರವಾರ ವ್ಯಕ್ತಿ ಯೊಬ್ಬರು ಮೃತಪಟ್ಟಿದ್ದು ಕೊನೆ ಗಳಿಗೆಯಲ್ಲಿ ಆ್ಯಂಬುಲೆನ್ಸ್ ಹುಡುಕು ವುದೇ ಕುಟುಂಬ ವರ್ಗಕ್ಕೆ ಸವಾಲಾಗಿತ್ತು.
ಕೋವಿಡ್‌ನಿಂದ ಮೃತಪಟ್ಟರೆ ಸರಕಾರಿ ನಿಯಮದ ಪ್ರಕಾರವೇ ಅಂತ್ಯಕ್ರಿಯೆ ನಡೆಯಬೇಕು. ಆಸ್ಪತ್ರೆ ಪ್ರಕ್ರಿಯೆ ಮುಗಿದ ಮೇಲೆ ಶ್ಮಶಾನಕ್ಕೆ ಶವ ಕೊಂಡು ಹೋಗುವುದು ಕೂಡ ಕಠಿನವಾಗಿದೆ. ಇಡೀ ಜಿಲ್ಲೆಗೆ ಒಂದು ಆ್ಯಂಬುಲೆನ್ಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂಬ ಮಾಹಿತಿ ಮನೆಯವರಿಗೆ ದೊರಕಿದ್ದು, ಅದು ಕೂಡ ಕರೆ ಮಾಡಿದಾಗ ಕಾರ್ಕಳದಲ್ಲಿ ಸೇವೆಯಲ್ಲಿದೆ ಎಂದು ತಿಳಿದು ಬಂತು.
ಸ್ಥಳೀಯ ಸಂಸ್ಥೆಯ ಪುರಸಭೆ ಮುಖ್ಯಾಧಿಕಾರಿಯನ್ನು ಸಂಪರ್ಕಿಸಿದಾಗ, ಕೂಡಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಹಾಗೂ ಶವ ಸಂಸ್ಕಾರದ ವೆಚ್ಚವನ್ನು ಭರಿಸುವ ಕೆಲಸ ಮಾಡಿದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿತನಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾದ 52ರ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. ಅಂತ್ಯಕ್ರಿಯೆಯು ಸರಕಾರಿ ನಿಯಮದಂತೆ ಸಮಾಜ ಸೇವಕ ರಾಘವೇಂದ್ರ ಖಾರ್ವಿ ಅವರ ನೇತೃತ್ವದಲ್ಲಿ ನಡೆಯಿತು. ವಿನೋದ್ ಖಾರ್ವಿಯವರ ಸಹಾಯದೊಂದಿಗೆ ವಿಧಿ ವಿಧಾನ ನಡೆಯಿತು.
ಕುಂದಾಪುರದ ಸುತ್ತಮುತ್ತಲಿನ ಗ್ರಾಮದ ಕೋವಿಡ್ ಸೋಂಕಿತರು ದಾಖ ಲಾಗುವುದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ. ಆದ್ದರಿಂದ ಒಂದು ಆ್ಯಂಬುಲೆನ್ಸ್ ಆದರೂ ಕುಂದಾಪುರಕ್ಕೆ ಅಗತ್ಯ, ಪುರಸಭೆ ವ್ಯಾಪ್ತಿಯಲ್ಲಿ ಶ್ಮಶಾನದಲ್ಲಿ ದಿನಕ್ಕೆ 4ರಿಂದ 5 ಶವ ದಹನ ಮಾಡಬಹುದಾಗಿದ್ದು ಆಯಾಯ ಗ್ರಾ.ಪಂ.ನಲ್ಲಿ ಶ್ಮಶಾನವನ್ನು ಮುಂಜಾಗ್ರತೆಗಾಗಿ ಸಜ್ಜುಗೊಳಿಸುವುದು ಅಗತ್ಯ. ಅದಕ್ಕಾಗಿ ಆಯಾಯ ಗ್ರಾ.ಪಂ. ಕಾರ್ಯದರ್ಶಿ, ಪಿಡಿಒ ಗಳಿಗೆ ನಿರ್ದೇಶನ ನೀಡಬೇಕು ಎಂದು ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.