ಯಾದಗಿರಿ: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣದಂದು ಪ್ರತಿ ವರ್ಷ ನಡೆಯುತ್ತಿದ್ದ ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಈ ಬಾರಿ ಕೊವಿಡ್ ದಿಂದ ವಿಘ್ನ ಬಂದೊದಗಿದೆ. ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಭಂದಾರಡೊಡೆಯನ ಜಾತ್ರೆಗೆ ಪತ್ರಿ ವರ್ಷ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರಗಳಿಂದ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಂಕ್ರಮಣದ ಪುಣ್ಯದಿನದಂತೆ ಹೊನ್ನಕೆರೆಯಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದರು. ಭವ್ಯ ಜಾತ್ರೆಗೆ ಜಿಲ್ಲಾಡಳಿತ ಪ್ರತಿ ವರ್ಷವೂ ಅಗತ್ಯ ಸಿದ್ಧತೆ ಮಾಡಿಕೊಂಡು ವ್ಯವಸ್ಥಿತ ಜಾತ್ರೆಗೆ ಅನುಕೂಲ ಕಲ್ಪಿಸುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜಾತ್ರೆ ರದ್ದುಗೊಳಿಸಿದ್ದು, ಈಗಾಗಲೇ ದೇವಸ್ಥಾನ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು ಹೆಚ್ಚಿನ ಜನರು ಸೇರದಂತೆ ಕ್ರಮವಹಿಸಲಾಗಿದೆ.
ಇದನ್ನೂ ಓದಿ:ತಮಿಳುನಾಡಿನ ಅವನಿಯಪುರಂನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ರೈತಾಪಿ ಜನರು ತಾವು ಬೆಳೆದ ಬೆಳೆ ಪಲ್ಲಕ್ಕಿಗೆ ಎಸೆದು ಭಕ್ತಿಯಿಂದ ಹರಕೆ ತೀರಿಸಿಕೊಂಡರೆ, ನಿಷೇಧದ ಮಧ್ಯೆಯೂ ಕುರಿ ಎಸೆಯುವುದನ್ನು ತಡೆಗಟ್ಟಿ ಜಿಲ್ಲಾಡಳಿತ ಸಾವಿರಾರು ಕುರಿ ಮರಿಗಳನ್ನು ವಶಕ್ಕೆ ಪಡೆಯುತ್ತಿತ್ತು. ಈ ಬಾರಿಯೂ ಹಲವು ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ರಾಮದ ಪ್ರವೇಶದ 1 ಕಿ.ಮೀ ದೂರದಲ್ಲಿಯೇ ರಸ್ತೆಗಳನ್ನು ಬಂದ್ ಮಾಡಿದ್ದು ಪ್ರವೇಶಿಸಿದಂತೆ ಜಿಲ್ಲಾಡಳಿತ ಕ್ರಮವಹಿಸಿದ್ದು, ಮನೆಯಲ್ಲಿಯೇ ಇದ್ದು ದೇವರನ್ನು ಆರಾ ಧಿಸುವಂತೆ ಕರಪತ್ರ ಮುದ್ರಿಸಿದೆ. ಇನ್ನು ದೇವಸ್ಥಾನಕ್ಕೆ ಕಾಣಿಕೆ ನೀಡುವವರು ನಗದು ರೂಪದಲ್ಲಿ ನೀಡಲು ಬ್ಯಾಂಕ್ ಖಾತೆ ಸಂಖ್ಯೆ ನೀಡಲಾಗಿದೆ. ಜಾತ್ರೆ ತಯಾರಿಯಲ್ಲಿ ಮಿಠಾಯಿ ಅಂಗಡಿ, ಭಂಡಾರ, ಇತರ ವ್ಯಾಪಾರ-ವಹಿವಾಟುಗಳ ತಾತ್ಕಾಲಿಕ ಅಂಗಡಿಗಳು ಹಾಗೂ ಕಿಕ್ಕಿರಿದ ಜನರಿಂದ ತುಂಬಿರಬೇಕಿದ್ದ ಮೈಲಾಪುರ ಗ್ರಾಮ ಇದೀಗ ಬಿಕೋ ಎನ್ನುತ್ತಿದೆ.