ಬೀದರ : ಹೆಮ್ಮಾರಿ ಕೋವಿಡ್- 19 ಸೋಂಕಿನ ರುದ್ರನರ್ತನದಿಂದ ನೆರೆ ರಾಜ್ಯ ಮಹಾರಾಷ್ಟ್ರ ನಲುಗಿ ಹೋಗುತ್ತಿದ್ದರೆ, ಇತ್ತ ಗಡಿ ನಾಡು ಬೀದರನಲ್ಲೂ ತನ್ನ ಕೆನ್ನಾಲಿಗೆ ವೇಗವಾಗಿ ಚಾಚುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಸೋಮವಾರ ಒಂದೇ ದಿನ 264 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಕಳೆದ ಐದು ದಿನಗಳಲ್ಲೇ ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪಿದೆ. ಮಹಾರಾಷ್ಟ್ರದಲ್ಲಿ ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೊರೊನಾ ಗಡಿ ಜಿಲ್ಲೆಗೆ ಗಂಡಾಂತರವಾಗಿ ಕಾಡುತ್ತಿದೆ. ಒಂದೂವರೆ ತಿಂಗಳ ಹಿಂದೆ ಒಂದಂಕಿಗೆ ಇಳಿದಿದ್ದ ಕೊರೊನಾ ಸೋಂಕಿತರ ಕೇಸ್‌ಗಳು ದಿನ ಕಳೆದಂತೆ ಎರಡಂಕಿಗೆ ದಾಖಲಾಗುತ್ತ ಈಗ ದ್ವಿಶತಕ ಬಾರಿಸುತ್ತಿರುವುದು ಕೋವಿಡ್ ಅಟ್ಟಹಾಸದ ಮುನ್ಸೂಚನೆ ತೋರಿಸುತ್ತಿದೆ. ಕೇವಲ ಐದು ದಿನಗಳಲ್ಲಿ (ಮಾ. 1ರಿಂದ 5ರವರೆಗೆ) 927 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿರುವುದು ಬಿಸಿಲೂರಿನ ಜನರಲ್ಲಿ ಆಘಾತವನ್ನುಂಟು ಮಾಡಿದೆ.
ದೇಶದ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಬೆಂಗಳೂರು ನಂತರ ಬೀದರ ಸಹ ಒಂದಾಗಿತ್ತು. ಈಗ ಮತ್ತೂಮ್ಮೆ ಮಹಾರಾಷ್ಟ್ರದ ಕಂಟಕ ಜತೆಗೆ ಬಸವಕಲ್ಯಾಣ ಉಪ ಚುನಾವಣೆ ಹಿನ್ನಲೆ ಸಾರ್ವಜನಿಕ ಸಮಾವೇಶದಲ್ಲಿ ಸಾವಿರಾರು ಜನರು ಸೇರುವಿಕೆಯಿಂದಾಗಿ ಸೋಂಕಿತರ ಸಂಖ್ಯೆಯುಳ್ಳ ರಾಜ್ಯದ ಟಾಪ್ ಜಿಲ್ಲೆಗಳಲ್ಲಿ ಬೀದರ ಸಹ ಒಂದಾಗುತ್ತಿದೆ. ವ್ಯಾಪಾರ-ವಹಿವಾಟು, ಉದ್ಯೋಗ ಮತ್ತು ಕೌಟುಂಬಿಕ ಸಂಬಂಧ ಹಿನ್ನೆಲೆ ಮಹಾರಾಷ್ಟ್ರಕ್ಕೆ ಓಡಾಟ ಹೆಚ್ಚಾಗಿರುವುದು ಮತ್ತೆ ಕೋವಿಡ್ ಸಂಕಷ್ಟಕ್ಕೆ ಸಿಲುಕುವ ಸಾದ್ಯತೆ ದಟ್ಟವಾಗಿಸುತ್ತಿದೆ. ಕಠಿಣ ಕ್ರಮಕ್ಕೆ ಮುಂದಾಗದ ಆಡಳಿತ: ಕೊರೊನಾ ಸೋಂಕಿನ ಪ್ರಕರಣ ಕ್ರಮೇಣ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ನಿಯಮ ಪಾಲಿಸುವಲ್ಲಿ ಮೈಮರೆಯುತ್ತಿದ್ದಾರೆ.
ಮತ್ತೂಂದೆಡೆ ಜಿಲ್ಲಾಡಳಿತ ಸೋಂಕು ನಿಯಂತ್ರಣ ವಿಷಯದಲ್ಲಿ ಜಾರುತ್ತಿದೆ. ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಠಿಣ ನಿಯಮ ಜಾರಿಗೊಳಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲನೆ ಬಿಡಿ, ಮಾಸ್ಕ್ ಧರಿಸದವರಿಗೆ ದಂಢ ವಿ ಸಿ ಜಾಗೃತಿ ಮೂಡಿಸುವ ಕೆಲಸಗಳು ಆಗದಿರುವುದು ಸಹ ಕೋವಿಡ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮಹಾರಾಷ್ಟ್ರದ ಗಡಿಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯದಲ್ಲೂ ನಿರ್ಲಕ್ಷé ವಹಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಹಣ ಕೊಟ್ಟು ಕೋವಿಡ್ ನೆಗೆಟಿವ್ ವರದಿ ಪಡೆದು ಸಲ್ಲಿಸುತ್ತಿದ್ದಾರೆ ಎಂದೆನ್ನಲಾಗುತ್ತಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ತೀವ್ರ ಕಟ್ಟೆಚ್ಚರ ಕ್ರಮ ವಹಿಸುವ ಮೂಲಕ ಮುಂದೆ ಎದುರಾಗಬಹುದಾದ ಗಂಡಾಂತರ ತಪ್ಪಿಸಬೇಕಿದೆ.