Advertisement

ನಿಯಮ ಮೀರಿದರೆ ಅಪಾಯ : ಮಾಸ್ಕ್ ಇಲ್ಲದೆ ಪ್ರವಾಸಿಗರ ಓಡಾಟ; ಪ್ರಧಾನಿ ಮೋದಿ ಆತಂಕ

07:25 AM Jul 14, 2021 | Team Udayavani |

ಹೊಸದಿಲ್ಲಿ/ಬೆಂಗಳೂರು : ಜಗತ್ತಿನ ಕೆಲವು ದೇಶಗಳಲ್ಲಿ ಈಗಾಗಲೇ ಕೊರೊನಾ 3ನೇ ಅಲೆಯ ಪರಿಣಾಮಗಳು ಆರಂಭವಾಗಿದ್ದು, ದೇಶದಲ್ಲೂ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾ ಬಗ್ಗೆ ನಾವು ನೀಡುವ ಎಚ್ಚರಿಕೆಗಳನ್ನು ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅವಗಣಿಸಲಾಗುತ್ತಿದೆ. ಯಾವುದೇ
ಕಾರಣಕ್ಕೂ ಹೀಗೆ ನಿರ್ಲಕ್ಷಿಸಬೇಡಿ ಎಂದೂ ಆರೋಗ್ಯ ಇಲಾಖೆ ಹೇಳಿದೆ.

Advertisement

ಪ್ರಧಾನಿ ಮೋದಿ ಅವರು ಮಂಗಳವಾರ ಬೆಳಗ್ಗೆ ಈಶಾನ್ಯ ರಾಜ್ಯಗಳ ಸಿಎಂಗಳ ಜತೆ ಮಾತುಕತೆ ನಡೆಸಿದ್ದು, ಅಲ್ಲಿನ ಪ್ರವಾಸಿ ತಾಣಗಳಲ್ಲಿ ಜನರು ಅತ್ಯಧಿಕ ಸಂಖ್ಯೆಯಲ್ಲಿ ಸೇರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಿರಿಧಾಮಗಳಲ್ಲಿ ಜನರು ಮಾಸ್ಕ್ ಇಲ್ಲದೆ, ಕೊರೊನಾ ನಿಯಮಾವಳಿ  ಅನುಸರಿಸದೆ ಓಡಾಡುತ್ತಿದ್ದಾರೆ. ಇದು ಸಲ್ಲದು. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೇರೆ ಬೇರೆ ರೀತಿಯ ರೂಪಾಂತರಿಗಳು ಕೂಡ ಕಾಣಿಸಿಕೊಳ್ಳುತ್ತಿವೆ. ಯಾವುದೇ ಕಾರಣಕ್ಕೂ ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

3 ಸಾವಿರ ದಾಟಿದರೆ 3ನೇ ಅಲೆ
ರಾಜ್ಯದಲ್ಲಿ ದೈನಿಕ ಕೊರೊನಾ ಹೊಸ ಪ್ರಕರಣಗಳು 3 ಸಾವಿರ ಗಡಿ ದಾಟಿದರೆ 3ನೇ ಅಲೆಯ ಮುನ್ಸೂಚನೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ತಿಳಿಸಿದ್ದಾರೆ. ರಾಜ್ಯಕ್ಕೆ 3ನೇ ಅಲೆ ಬಂದಿಲ್ಲ. 2ನೇ ಅಲೆ ಇನ್ನಷ್ಟು ತಗ್ಗಲಿದೆ. ಕೇಂದ್ರದ ಮಾಹಿತಿಯಂತೆ, ಒಂದು ಪ್ರದೇಶದಲ್ಲಿ ಪ್ರತೀ 10 ಲಕ್ಷ ಜನರಿಗೆ 50 ಪ್ರಕರಣಗಳು ವರದಿಯಾದರೆ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ. ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ನಿತ್ಯ 3 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಬೇಕು. ಒಂದು ವೇಳೆ 3 ಸಾವಿರಕ್ಕಿಂತ ಹೆಚ್ಚಾದರೆ ಅದು 3ನೇ ಅಲೆಯ ಎಚ್ಚರಿಕೆ ಗಂಟೆ ಎಂದರು.

ಕೊರೊನಾ ಸೋಂಕಿನ ಎಷ್ಟು ಅಲೆಗಳು ಬಂದರೂ ಜನರ ನಿರ್ಲಕ್ಷ್ಯವೇ ಕಾರಣ. ಜನರು ನಿಯಮಗಳನ್ನು ಮರೆತಿದ್ದಾರೆ. ಜನರ ನಡುವಳಿಕೆ ಭಯ ಹುಟ್ಟಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿ ದರು. ಒಟ್ಟು ಜನಸಂಖ್ಯೆಯ ಶೇ. 70ರಷ್ಟು ಮಂದಿ ಲಸಿಕೆಯ ಎರಡೂ ಡೋಸ್‌ ಪಡೆ ಯುವವರೆಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ನಿಮಯ ಪಾಲಿಸದಿದ್ದರೆ ಕಠಿನ ಕ್ರಮ ಕಡ್ಡಾಯ ಎಂದರು.

ಜು. 16ಕ್ಕೆ ಬಿಎಸ್‌ವೈ ಜತೆ ಪ್ರಧಾನಿ ಮೋದಿ ಸಭೆ
ಕೊರೊನಾ ಹೆಚ್ಚುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಜು. 16ರಂದು ಸಭೆ ನಡೆಸಲಿದ್ದಾರೆ. ಮಂಗಳವಾರ ಈಶಾನ್ಯ ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿರುವ ಅವರು, ಶುಕ್ರವಾರ ಕರ್ನಾಟಕದ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಒಡಿಶಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆ ಕೊರೊನಾ ಪರಿಶೀಲನೆ ಸಭೆ ನಡೆಸಲಿದ್ದಾರೆ.

Advertisement

10 ರಾಜ್ಯಗಳಿಗೆ ಕೇಂದ್ರ ತಂಡ
ಕೊರೊನಾ 3ನೇ ಅಲೆ ಆತಂಕ ಮತ್ತು ಕೊರೊನಾ ನಿಯಮಾವಳಿಗಳ ಉಲ್ಲಂಘನೆಯ ಕಳವಳಗಳ ನಡುವೆ ಕೇಂದ್ರ ಸರಕಾರ ಕೊರೊನಾ ಹೆಚ್ಚಿರುವ 10 ರಾಜ್ಯ ಗಳಿಗೆ ತಜ್ಞರ ತಂಡಗಳನ್ನು ಕಳುಹಿಸಿದೆ. ಸದ್ಯ ದೇಶದ ಶೇ. 70ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಒಡಿಶಾ ಮತ್ತು ಆಂಧ್ರಗಳಿಂದಲೇ ವರದಿಯಾಗುತ್ತಿವೆ. 55 ಜಿಲ್ಲೆಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದೆ. ಹೀಗಾಗಿ ಮಹಾರಾಷ್ಟ್ರ, ಛತ್ತೀಸ್‌ಗಢ, ಅಸ್ಸಾಂ, ಮೇಘಾಲಯ, ಒಡಿಶಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌, ತ್ರಿಪುರಾಗಳಿಗೆ ತಂಡಗಳು ತೆರಳಿವೆ. ಅಲ್ಲಿ ಕೊರೊನಾ ನಿಯಂತ್ರಣದಲ್ಲಿ ಸಹಾಯ ಮಾಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next