ರಾಣೆಬೆನ್ನೂರು: ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರಿಗೆ ಕೋವಿಡ್ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಸಂತೆ ಮೈದಾನ, ಬಲಮುರಿ ಗಣಪತಿ ದೇವಸ್ಥಾನ ಸೇರಿದಂತೆ ಮಸೀದಿ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ, 100 ಮೀಟರ್ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಹಾಗೂ ಸುತ್ತಲೂ 200 ಮೀಟರ್ ಅಂತರದಲ್ಲಿ ಬಫರ್ ಝೋನ್ ಎಂದು ಗುರುತಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಆಡಳಿತ ಅಧಿಕಾರಿ ಲಿಂಗರಾಜ ಸುತ್ತಕೋಟಿ ಹೇಳಿದರು.
ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ನಡೆದ ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ಪೋರ್ಸ್ ಸಭೆಯಲ್ಲಿ ಮಾತನಾಡಿದರು. ಕಂಟೇನ್ಮೆಂಟ್ ವಲಯದಲ್ಲಿರುವವರ ಅನಗತ್ಯ ಸಂಚಾರಕ್ಕೆ ಅವಕಾಶ ನೀಡಬಾರದು. ಅಗತ್ಯ ವಸ್ತುಗಳನ್ನು ತಲುಪಿಸುವ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಲ್ಲದೆ ಜನರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವಂತೆ ಸಂಯಮದಿಂದ ನಡೆದುಕೊಳ್ಳಬೇಕು. ಸಿಬ್ಬಂದಿಗೆ ಬೇಕಾದ ಸುರಕ್ಷತಾ ಸಾಮಗ್ರಿಗಳನ್ನು ಗ್ರಾಮ ಪಂಚಾಯ್ತಿ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ವಲಸೆ ಬಂದವರ ಮೇಲೆ ನಿಗಾ ವಹಿಸುವುದು. ಈಗಾಗಲೇ ಜನಸಂದಣಿ ತಡೆಯುವ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ, ಮಾಸ್ಕ್ ಧರಿಸದವರಿಗೆ ದಂಡ ಹಾಗೂ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಸಂಜೆ 6 ರಿಂದ ಬೆಳಿಗ್ಗೆ 6 ರ ವರೆಗೆ ಮುಚ್ಚುವಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಕುಮಾರಪಟ್ಟಣ ಠಾಣೆ ಪಿಎಸ್‌ಐ ಆರ್. ವೈ. ಅಂಬಿಗೇರ ಮಾತನಾಡಿ, ಹರಿಹರ ನಗರದ ಸೀಲ್‌ಡೌನ್ ವಲಯದಿಂದ ಬರುವ ಬೀದಿ ಬದಿಯ ವ್ಯಾಪಾರಿಗಳಿಗೆ ನಿಷೇಧ ಹೇರಬೇಕು. ಕಂಟೇನ್ಮೆಂಟ್‌ಗೆ ಹೊಂದಿಕೊಂಡಿರುವ ಗ್ಯಾರೇಜ್ ಗಳಿಗೆ ಜನರು ಬರುತ್ತಿದ್ದು, ಇಲ್ಲಿ ಸೀಲ್‌ಡೌನ್ ವಿಸ್ತರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಾ| ವಿಶ್ವನಾಥ ಅರ್ಕಾಚಾರಿ ಮಾತನಾಡಿ, ಸೋಂಕಿತನ ಕುಟುಂಬದವರು ಸೇರಿದಂತೆ ಆತನ ಪ್ರಾಥಮಿಕ ಸಂಪರ್ಕದಲ್ಲಿರುವ 12 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಕಂಟೇನ್ಮೆಂಟ್ ಝೋನ್‌ನಲ್ಲಿ ದಿನಕ್ಕೊಮ್ಮೆ, ಬಫರ್ ಝೋನ್‌ನಲ್ಲಿ ಮೂರು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ವೇಳೆ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಅಂತಹವರನ್ನು ಪ್ರತ್ಯೇಕ ಸ್ಥಳದಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಪಿಡಿಒ ಪೂರ್ಣಿಮಾ.ವಿ., ಸಿಆರ್‌ಪಿ ಅಶೋಕ್.ಬಿ.ಕೆ, ಕಿರಿಯ ಆರೋಗ್ಯ ಸಹಾಯಕ ರಮೇಶ್ ಟಿ.ಜಿ., ರೇಖಾ ಕರೇಗೌಡ್ರ, ಚಂದ್ರಕಲಾ ಆರ್.ಪಿ, ಪೊಲೀಸ್ ಕಾನ್ಸ್‌ಟೇಬಲ್ ಕೆ.ಎಸ್. ರವಿಯಪ್ಪ, ಸಂತೋಷ ಗಡ್ಡಿ, ನೂರ್ ಜಹಾನ್ ಎಂ.ಆರ್, ಲಿಂಗರಾಜ್ ಅಸುಂಡಿ, ಪೌರ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರು ಭಾಗವಹಿಸಿದ್ದರು.