ಟೋಕಿಯೊ: ಗುರುವಾರ ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಎರಡು ಮಹತ್ವದ ಬೆಳವಣಿಗೆಗಳು ಸಂಭವಿಸಿದವು. ಜಪಾನ್‌ಗೆ ಒಂದಿಳಿದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿ ತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಅವರನ್ನು “ಕೊರೊನಾ ತುರ್ತು ಸ್ಥಿತಿ’ ಸ್ವಾಗತಿಸಿದರೆ, ಇವರ ಆಗಮನದ ಸ್ವಲ್ಪವೇ ಹೊತ್ತಿನಲ್ಲಿ ಒಲಿಂಪಿಕ್ಸ್ ಸ್ಪರ್ಧೆಗಳಿಗೆ ವೀಕ್ಷಕರನ್ನು ಸಂಪೂರ್ಣವಾಗಿ ನಿಷೇಧಿ ಸಲು ನಿರ್ಧರಿಸಲಾಯಿತು. ಒಲಿಂಪಿಕ್ ಸಚಿವ ಟಮಾಯೊ ಮರುಕಾವ ಇದನ್ನು ಪ್ರಕಟಿಸಿದರು. ಇದರೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಸಲ ಪ್ರೇಕ್ಷಕರಿಗೆ ಬಾಗಿಲು ಹಾಕಲಾಯಿತು.
ಅಪರಾಹ್ನ ಜೋರು ಮಳೆ ಸುರಿಯುತ್ತಿದ್ದ ವೇಳೆ ಟೋಕಿಯೊದ “ಹನೆಡ ವಿಮಾನ ನಿಲ್ದಾಣ’ಕ್ಕೆ ಆಗಮಿಸಿದ ಥಾಮಸ್ ಬಾಕ್ ಮಾಧ್ಯಮ ದವರ ಕಣ್ಣು ತಪ್ಪಿಸಿ ಸಾಗಿದರು. ನೇರವಾಗಿ ಟೋಕಿಯೊದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ “ಗೇಮ್ಸ್ ಪ್ರಧಾನ ಕಚೇರಿ’ ತಲುಪಿದರು. ಇದು ನಗರದ ಪಂಚತಾರಾ ಹೊಟೇಲ್ ಒಂದರಲ್ಲಿದ್ದು, ಇಲ್ಲಿ ಬಾಕ್ 3 ದಿನ ಸೆಲ್ಫ್ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
ಪ್ರೇಕ್ಷಕರಿಗೆ ಸಂಪೂರ್ಣ ನಿಷೇಧ!:
ಮತ್ತೂಮ್ಮೆ ದೇಶದಲ್ಲಿ ಕೊರೊನಾ ತುರ್ತು ಸ್ಥಿತಿಯನ್ನು ಮುಂದುವರಿಸಿದ ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಅವರ ನಿರ್ಧಾರ ಎನ್ನುವುದು ಒಲಿಂಪಿಕ್ಸ್ ಆಯೋಜನೆಯನ್ನು ಇನ್ನಷ್ಟು ಕಠಿನಗೊಳಿಸಿತು. ಕ್ರೀಡೆಗಳಿಗೆ ಯಾವುದೇ ಅಡ್ಡಿಯಿಲ್ಲವಾದರೂ ಪ್ರೇಕ್ಷಕರ ನಿರ್ಬಂಧ ಎನ್ನುವುದು ಕ್ರೀಡಾಭಿಮಾನಿಗಳ ಹತಾಶೆಗೆ ಕಾರಣವಾಯಿತು. ಸ್ಟೇಡಿಯಂ ಗಳಲ್ಲಿ 10 ಸಾವಿರ ಮೀರದಂತೆ, ಶೇ. 50ರಷ್ಟು ತವರಿನ ವೀಕ್ಷಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೀಗ ಈ ಅವಕಾಶವೂ ಇಲ್ಲವಾಗಿದೆ.
ಮತ್ತೂಂದು ಹಂತದ ಕೊರೊನಾ ತುರ್ತು ಸ್ಥಿತಿ ಸೋಮವಾರದಿಂದ ಮೊದಲ್ಗೊಂಡು ಆ. 22ರ ತನಕ ಮುಂದುವರಿಯಲಿದೆ. ಅರ್ಥಾತ್, ಒಲಿಂಪಿಕ್ಸ್ ಪಂದ್ಯಾವಳಿಯುದ್ದಕ್ಕೂ (ಜು. 23-ಆ. 8) ಇದೇ ಸ್ಥಿತಿ ಇರಲಿದೆ.
ಈ ನಡುವೆ ಒಲಿಂಪಿಕ್ಸ್ ಬಹಿಷ್ಕಾರದ ಕೂಗು ಕೂಡ ತೀವ್ರಗೊಂಡಿದೆ. ಇನ್ನೊಂದೆಡೆ ಜಪಾನ್‌ನಲ್ಲಿ ಕೊರೊನಾ ಹಾಗೂ ಡೆಲ್ಟಾ ಕೇಸ್ ಹೆಚ್ಚುತ್ತಲೇ ಇದೆ.