ದೊಡ್ಡಬಳ್ಳಾಪುರ: ಪ್ರಸಕ್ತ ಋತುವಿನಲ್ಲಿ ಹಲಸು ಉತ್ತಮ ಫಸಲು ಬಂದಿದೆ. ಆದರೆ ಕೋವಿಡ್-19 ಕಂಟಕವಾಗಿ ಪರಿಣ ಮಿಸಿದ್ದು, ಮಾರಾಟವಿಲ್ಲದೆ ಬೆಳಗಾರರು ಕಂಗಾಲಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಹಾಗೂ ಗ್ರಾಹಕರಿಲ್ಲ. ಹೀಗಾಗಿ ಹಲಸಿನ ಫಸಲನ್ನು ಮಾರಾಟ ಮಾಡುವುದೇ, ಬೆಳೆಗಾರರಿಗೆ ಚಿಂತೆಯಾಗಿದೆ. ಈ ಹೊತ್ತಿಗೆ ಹಲಸಿನ ವ್ಯಾಪಾರ ಜೋರಾಗಿರಬೇಕಿತ್ತು. ಆದರೆ ಮಾರಾಟಕ್ಕೆ ಅವಕಾಶವೇ ಇಲ್ಲದಂತಾಗಿದೆ. ಹಲಸಿನ ಹಣ್ಣು 50 ರಿಂದ 150 ರೂ.ಗಳವರೆಗೆ ಮಾರಾಟವಾಗುತ್ತಿತ್ತು. ಆದರೆ ಈಗ ಕೇಳುವವರೇ ಇಲ್ಲದಂತಾಗಿದೆ. ಹಳದಿ ಬಣ್ಣದ ತೊಳೆಯ ಹಲಸು, ಕೆಂಪು ಬಣ್ಣದ ತೊಳೆಯ ಹೆಬ್ಬಲಸು, ಬೇರು ಹಲಸು ಸೇರಿ ನಾನಾ ವಿಧದ ಹಲಸಿನ ಮಾರಾಟ ನಡೆಯುತ್ತಿದೆ. ನೆರೆಯ ಆಂಧ್ರ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸು ಖರೀದಿಗೆ ಬರುತ್ತಾರೆ. ಆದರೆ ಲಾಕ್‌ಡೌನ್ ಇರುವುದರಿಂದ ಆಂಧ್ರ ಹಾಗೂ ಹೊರ ಪ್ರದೇಶಗಳಿಂದ ಯಾರೂ ಬರುತ್ತಿಲ್ಲ ಎಂದು ಬೆಳೆಗಾರರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಗಟು ಮಾರಾಟ ಕುಸಿತ: ಹಲಸಿನ ತೋಪುಗಳಲ್ಲಿ 6 ತಿಂಗಳ ಮುಂಚೆಯೇ ವ್ಯಾಪಾರ ಮುಗಿಸಿ, ಮುಂಗಡ ಹಣ ನೀಡಲಾಗಿದೆ. ಒಂದು ಹುಂಡಿ (ಗುಡ್ಡೆ) 100ರಿಂದ 200 ಕಾಯಿಗಳನ್ನು ಗಾತ್ರದ ಮೇಲೆ 2ರಿಂದ 5 ಸಾವಿರ ದವರೆಗೆ ಮಾರಾಟವಾಗುತ್ತದೆ. ಕೊರೊನಾದಿಂದಾಗಿ ಬೆಲೆ ಕಡಿಮೆಯಾಗಿದೆ. ಕಾಯಿ ಕೀಳಲು ಕೂಲಿಕಾರರ ಸಮಸ್ಯೆ, ಸಾಗಾಣಿಕೆ ವೆಚ್ಚ ಹೆಚ್ಚು, ಆಂಧ್ರದಲ್ಲಿ ಮಾರಲು ಸಿದ್ಧರಿ ದ್ದೇವೆ. ಹೀಗಾಗಿ ಹಲಸು ಮಾರಾಟಕ್ಕೆ ಸರ್ಕಾರ ಅವಕಾಶ ನೀಡ
ಬೇಕು ಎನ್ನುತ್ತಾರೆ ತಪಸೀಹಳ್ಳಿ ರೈತ ರಾಜ ಗೋಪಾಲ್.
●ಡಿ.ಶ್ರೀಕಾಂತ