Advertisement

ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ

04:20 PM Oct 25, 2020 | Suhan S |

ಹೊನ್ನಾವರ: ಕೋವಿಡ್‌ ಪಾರ್ಶ್ವ ಪರಿಣಾಮ ದೇಹದ ಕಣ್ಣು, ಹೃದಯ, ಪುಪ್ಪುಸ, ನರಮಂಡಲ ಮೊದಲಾದ ಸೂಕ್ಷ್ಮಅಂಗಗಳ ಮೇಲೆ ಆಗುತ್ತದೆ. ಮೊದಲೇ ಈ ಅಂಗಗಳಲ್ಲಿ ಕಾಯಿಲೆ ಇದ್ದವರು ಬದುಕಿಬರುವುದು ಪುಣ್ಯ ಎಂಬುದನ್ನು ವೈದ್ಯರೂ, ವಿಜ್ಞಾನಿಗಳು ಹೇಳುತ್ತಿದ್ದಾರೆ.

Advertisement

ಸ್ಪಂಜಿನಂತೆ ಮಿದುವಾಗಿ ಇರುತ್ತಿದ್ದ ಪುಪ್ಪುಸ ಗಟ್ಟಿಕಟ್ಟಿಗೆ ಯಾಗುತ್ತದೆ ಎನ್ನುತ್ತಾರೆ ಕೋವಿಡ್‌ ರೋಗಿಯ ಮರಣೋತ್ತರ ಶವಪರೀಕ್ಷೆ ಮಾಡಿದ ವೈದ್ಯರು. ಹೃದಯದ ಏರಿಳಿತದಲ್ಲಿ ಬದಲಾವಣೆ, ಅನಿಯಂತ್ರಿತ ಮಧು ಮೇಹ, ದೃಷ್ಟಿದುರ್ಬಲತೆ ಇದು ಸಾಮಾನ್ಯ ಎಂಬುದು ಕೋವಿಡ್‌ ಗುಹೆ ಹೊಕ್ಕಿ ಕನಿಷ್ಠ5 ದಿನ ರೆಮಿಡಿಸಿವಿರ್‌ ಚುಚ್ಚುಮದ್ದು ಪಡೆದವರ ಅನುಭವ, ಸುಧಾರಿಸುತ್ತಾರೆ ಅನ್ನುತ್ತಾರೆ ವೈದ್ಯರು. ಆದ್ದರಿಂದ ಕೋವಿಡ್‌ ಗೆದ್ದೆ ಎಂದು ಬೀಗುವುದಕ್ಕಿಂತ ಆರೋಗ್ಯ ಕಾಳಜಿ ಮುಖ್ಯ ಎಂಬುದನ್ನು ಜನ ಮರೆಯಬಾರದು. ಪಾರ್ಶ್ವ  ಪರಿಣಾಮಗಳೇ ಗಂಭೀರತೆಗೆ ಒಯ್ಯಬಹುದು. ತುಂಬಾ ಜನ ಕೋವಿಡ್‌ ಬಂದು ಹೋದರೆ ನಮಗೆ ಮತ್ತೆ ಬರುವುದಿಲ್ಲ, ಬೇರೆಯವರಿಂದಲೂ ತಗಲುವುದಿಲ್ಲ ಎಂದು ಕೈಬೀಸಿಕೊಂಡು ನಡೆಯುತ್ತ ನಿತ್ಯದ ವ್ಯವಹಾರದಲ್ಲಿ ತೊಡಗುವವರಿಗೆ ಇದು ವೈದ್ಯರು ಹೇಳುವ ಎಚ್ಚರಿಕೆಯ ಮಾತು.

ಜಿಲ್ಲೆಯಲ್ಲಿ 12,374 ಜನರಿಗೆ ಸೋಂಕು ತಗಲಿದೆ. 11,144 ಜನ ಗುಣಮುಖರಾಗಿದ್ದಾರೆ. ನಿತ್ಯ 250 ಜನ ಸೋಂಕಿತರು ಕಂಡುಬರುತ್ತಿದ್ದ ದಿನ ಕಳೆದು60ಕ್ಕೆ ಇಳಿಕೆಯಾಗಿದೆ. ಮೂರು ವಾರಗಳಿಂದ ಕೋವಿಡ್ ಇಳಿಮುಖವಾಗಿದೆ. ಆದರೂ ಪೂರ್ತಿ ನಿವಾರಣೆಯಾಗಿಲ್ಲ. ಹೋದವರು ಹೋದರು, ಅವರ ಕುಟುಂಬಕ್ಕೆ ದೇವರೇ ದಿಕ್ಕು. ಹಬ್ಬದ ದಿನಗಳಲ್ಲಿ ಸೋಂಕಿನಿಂದ ದೂರವಿರುವ ಮಾತ್ರವಲ್ಲ, ಸೋಂಕಿನಿಂದ ಹೊರಬಂದವರಲ್ಲಿಯೂ ಕೂಡ ಹೆಚ್ಚುಕಾಳಜಿ ಅಗತ್ಯ. ಇಲ್ಲವಾದರೆ ಕಾಯಂ ಆಸ್ಪತ್ರೆಗೆ ಅಲೆಯಬೇಕಾದೀತು. ಪ್ರಧಾನಿ ಮೋದಿ 7ನೇ ಬಾರಿ ಕೋವಿಡ್‌ ದಾಳಿಯ ಕುರಿತು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ ಮುಗಿದ ಮೇಲೆ ಯಥಾಸ್ಥಿತಿಯತ್ತ ಮರಳುವ ಹಂತದಲ್ಲಿದ್ದಾಗ ಕೆಲವರು ಅತಿಬುದ್ಧಿವಂತಿಕೆಯಿಂದ ಅರ್ಧದಿನ ಲಾಕ್‌ಡೌನ್ಘೋಷಿಸಿ ವ್ಯವಹಾರವನ್ನ  ಮಣ್ಣುಪಾಲು ಮಾಡಿದರು. ಹಳ್ಳಿಯ ನಾಲ್ಕಾರು ಜನ ರಿಕ್ಷಾ ಬಾಡಿಗೆಗೆ ಪಡೆದು ಪೇಟೆಗೆ ಬಂದು ಬೇಗ ಕೆಲಸ ಮುಗಿಸಿಕೊಂಡು ಹೋಗಲು ಕಲಿತರು. ಎಲ್ಲ ಮನೆಗಳಲ್ಲಿ ಬೈಕ್‌ ಮೇಲೆ ಬಂದು ಹೊರಟು ಹೋಗುತ್ತಾರೆ. ಮಧ್ಯಾಹ್ನ ಪೇಟೆ ಬಣಬಣ. ಹೊಟೆಲ್‌ಗ‌ಳಲ್ಲಿ ವ್ಯಾಪಾರವಿಲ್ಲ, ಐಸ್‌ಕ್ರೀಂ ತಿನ್ನುವವರಿಲ್ಲ. ಬಹುಪಾಲು ಟೆಂಪೋ ಚಾಲಕ, ಮಾಲಕರು ಸಾರಿಗೆಯ ಆಸೆ ಬಿಟ್ಟಿದ್ದು ಬೇರೆ ವ್ಯಾಪಾರದಲ್ಲಿ ತೊಡಗಿದ್ದಾರೆ,ಕೆಲವರು ಅಂಗಡಿ ಇಟ್ಟಿದ್ದಾರೆ.

ಹಬ್ಬದ ದಿನಗಳಲ್ಲಿ 1500-2000 ರೂ. ಪಡೆಯುತ್ತಿದ್ದ ಬೆಂಗಳೂರಿಗೆ ಹೋಗಿಬರುವ ಖಾಸಗಿ ಬಸ್‌ಗಳು ಕೇವಲ 500 ರೂ.ಗೆಇಳಿಸಿದರೂ ಹೋಗಿಬರುಪ್ರಯಾಣಿಕರಿಲ್ಲ. ಅದ್ದೂರಿಯ ಮದುವೆ,  ಗೃಹಪ್ರವೇಶ ಮಾಡುವವರು ಇನ್ನೂ ಕಾಯಲಾರದೆ ಅದರ ಆಸೆಬಿಟ್ಟು ಮನೆಯ ಅಂಗಳದಲ್ಲಿ 100 ಜನರನ್ನು ಕರೆದು ಮದುವೆ ಮಾಡಿಸುತ್ತಿದ್ದಾರೆ. ಹಣವೂ ಉಳಿತಾಯ. ಮಂಗಲ ಕಾರ್ಯಗಳನ್ನೇ ನಂಬಿದ ಅಡುಗೆಯವರು, ಡೆಕೊರೇಟರ್‌ ಗಳು, ವಾದ್ಯದವರು ಕೆಲಸ ಇಲ್ಲದೆ ಕುಳಿತು 7ತಿಂಗಳಾಯಿತು. ನವೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಇಲ್ಲ. ಫೆಬ್ರವರಿಯಲ್ಲಿ ಕೋವಿಡ್‌ ಹೆಚ್ಚುವ ಸಂಭವ ಇದೆ ಎಂಬ ವರದಿ ಎಲ್ಲರನ್ನೂ ಕಂಗೆಡಿಸಿದೆ.

Advertisement

ಜಿಲ್ಲೆಯಲ್ಲಿ ದೊಡ್ಡ, ಮಧ್ಯಮ ಕೈಗಾರಿಕೆಗಳಿಲ್ಲ, ಗುಡಿಕೈಗಾರಿಕೆ ಉತ್ಪನ್ನಗಳಿಗೆ ಗ್ರಾಹಕರಿಲ್ಲ. ಕೃಷಿಕೂಲಿಕಾರರು ಕೋವಿಡ್‌ ಭಯದಿಂದ ಕೆಲಸಕ್ಕೆ ಹೋಗುತ್ತಿಲ್ಲ. ಹೋದರೂ ಅರ್ಧ ಕೂಲಿ ದೊರೆಯುತ್ತದೆ. ಜನಸಂಖ್ಯೆ ಪ್ರಮಾಣದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೋವಿಡ್‌ ತಗಲಿದವರ, ಮೃತಪಟ್ಟವರ ಸಂಖ್ಯೆ ಕಡಿಮೆಯಾದರೂ ಮೊದಲೇ ಆರ್ಥಿಕ ಚಲಾವಣೆಯಿಲ್ಲದ ಜಿಲ್ಲೆಯಲ್ಲಿ ಬಹುಪಾಲು ವ್ಯವಹಾರಗಳುಸ್ಥಗಿತವಾಗಿವೆ. ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದು ಎಲ್ಲರ ಚಿಂತೆ. ಕೆಲವರಲ್ಲಿ ಮಾನಸಿಕ ತೊಂದರೆಯನ್ನುಂಟು ಮಾಡಿದೆ.

ಕೋವಿಡ್‌ ಬಂದ ಮೇಲೆ ಮಾನಸಿಕ ವೈದ್ಯರನ್ನು ಕಾಣುವವರ ಸಂಖ್ಯೆ ಹೆಚ್ಚಿದೆ. ಮಾನಸಿಕವಾಗಿ ಗಟ್ಟಿಯಾದರೆ ವ್ಯವಹಾರದ ವರ್ಧನೆಗೂ ದಾರಿಕಾಣಬಹುದು. ಅಲ್ಲಿಯವರೆಗೆ ಬದುಕು ಖಾಲಿ ಸರ್ಕಾರಿ ಬಸ್ಸುಗಳ ಓಡಾಟದಂತೆ. ಜನ ಓಡಾಟ ಆರಂಭಿಸಿದ್ದಾರೆ ಆದರೆ ಎಲ್ಲವೂ ಖಾಲಿಖಾಲಿ. ಇದು ಎಲ್ಲರ ಸಮಸ್ಯೆಯೂ ಹೌದು. ಲಸಿಕೆ, ಔಷಧ ಬರಬೇಕು, ಅದನ್ನು ಪಡೆದು ಜನ ಸುಧಾರಿಸಿಕೊಂಡ ಮೇಲೆ ಜಿಲ್ಲೆ ಮಾಮೂಲು ಸ್ಥಿತಿಗೆ ಬಂದೀತೇ?

Advertisement

Udayavani is now on Telegram. Click here to join our channel and stay updated with the latest news.

Next