ಕೊಪ್ಪಳ: ಎರಡು ತಿಂಗಳಿಂದ ಜಿಲ್ಲಾದ್ಯಂತ ಜನರ ಜೀವವನ್ನೇ ಹಿಂಡಿ ಹಿಪ್ಪಿ ಮಾಡಿದ್ದ ಕೊರೊನಾ ಎರಡನೇ ಅಲೆಯು ಕೊನೆಗೂ ತನ್ನ ಆರ್ಭಟ ಕಡಿಮೆ ಮಾಡಿದೆ. ಮನೆ ಮನೆಯಲ್ಲೂ ಕೊರೊನಾ ಸದ್ದು ಈಗ ಕಡಿಮೆಯಾಗುತ್ತಿದೆ.
ಜಿಲ್ಲೆಯ ಜನತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೂ ಕೋವಿಡ್ ಕರಿ ನೆರಳು ಎಂದಿಗೂ ಮರೆಯದಂತಾಗಿದೆ. ಹೌದು. ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ ಕೊರೊನಾ ಅಷ್ಟೊಂದು ಆತಂಕ ಸೃಷ್ಟಿಸಿರಲಿಲ್ಲ. ಮೊದಲು ಹೊಸ ವೈರಸ್ ಬಂದಿದೆ ಎನ್ನುವ ಆತಂಕದಲ್ಲಿದ್ದ ಜನರು ಕ್ರಮೇಣ ಸೋಂಕಿನ ಭಯ ಕಡಿಮೆ ಮಾಡಿಕೊಂಡು ನಿತ್ಯದ ಜೀವನದಲ್ಲಿ ತೊಡಗಿದ್ದರು. ಆದರೆ ಎರಡನೇ ಅಲೆಯ ಆರ್ಭಟ ನಿಜಕ್ಕೂ ಭಯಾನಕತೆ ಸೃಷ್ಟಿಸಿ ಜನರ ಜೀವನವನ್ನೇ ತಲ್ಲಣಗೊಳಿಸಿತು.
ಕಳೆದ ಏಪ್ರಿಲ್ ತಿಂಗಳಿಂದ ಆರ್ಭಟವಾದ ಕೋವಿಡ್ ಮಹಾಮಾರಿಯ ಎರಡನೇ ಅಲೆ ಬೇಸಿಗೆಯ ಆ ಎರಡು ತಿಂಗಳು ನಿಜಕ್ಕೂ ಜನರಿಗೆ ಕರಾಳ ದಿನಗಳೇ ಎನ್ನುವಂತೆ ಭಾಸವಾಗಿದ್ದವು. ಎಲ್ಲಿ ನೋಡಿದರಲ್ಲಿ ಕೊರೊನಾದ್ದೇ ಮಾತಾಗಿತ್ತು. ಕೊರೊನಾ ವಿಚಾರವೇ ಎಲ್ಲೆಡೆ ಚರ್ಚೆಗೆ ಬರುತ್ತಿತ್ತು. ಅಲ್ಲಿ ಸಾವು, ಇಲ್ಲಿ ಸಾವು ನಮ್ಮ ಮನೆಯ ಪಕ್ಕ ಸಾವು, ಇಷ್ಟು ಜನರಿಗೆ ಸೋಂಕು, ಬಡವರಿಗೆ ಊಟವಿಲ್ಲ ಎನ್ನುವ ನೋವಿನ ಮಾತುಗಳೇ ಕೇಳಿ ಬರುತ್ತಿದ್ದವು. ಏಲ್ಲಿ ನೋಡಿದರೂ ಬರಿ ಸಾವಿನ ಮನೆ ಎನ್ನುವ ಮಾತುಗಳು ಜನರ ನೆಮ್ಮದಿಯನ್ನೇ ಕಸಿದ್ದಿದ್ದವು.
ಎರಡು ತಿಂಗಳ ಬಳಿಕ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಸಾವಿನ ಪ್ರಮಾಣವೂ ಕಡಿಮೆಯಾಗುತ್ತಿರುವುದು ಜನರಲ್ಲೂ ಸ್ವಲ್ಪ ನೆಮ್ಮದಿ ತರಿಸಿದೆ. ಮನೆ ಮನೆಯಲ್ಲೂ ಕೊರೊನಾ ಮಾತು ಸ್ವಲ್ಪ ಕಡಿಮೆಯಾಗುತ್ತಿವೆ. ಅಕ್ಕಪಕ್ಕದ ಮನೆಯವರು ಸ್ವಲ್ಪ ನೆಮ್ಮದಿಯಿಂದ ಹೊರಗಡೆ ಬಂದು ಕುಟುಂಬದ ಸದಸ್ಯರ ಯೋಗಕ್ಷೇಮ ಕೇಳುವಂತ ವಾತಾವರಣ ನಿರ್ಮಾಣವಾಗುತ್ತಿದೆ. ಜನರೀಗ ಬದುಕಿನ ಸಹಜ ಸ್ಥಿತಿಗೆ ಬರಲಾರಂಭಿಸಿದ್ದಾರೆ. ಆದರೆ ಜನರು ಮೈಮರೆತು ಎಲ್ಲೆಂದರಲ್ಲಿ ಸುತ್ತಾಟ ನಡೆಸಬಾರದು. ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಮಾತ್ರ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ. ಜಿಲ್ಲಾಡಳಿತವು ಈಗಷ್ಟೇ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಿದೆ.