Advertisement
ಕೋವಿಡ್ ಎಂಬುದು ಕಪೋಲಕಲ್ಪಿತ ಕಾಯಿಲೆ; ಹಳೆಯ ಫ್ಲ್ಯೂ ಜ್ವರಕ್ಕೆ ಹೊಸ ಹೆಸರನ್ನು ಕೊಟ್ಟು ಜನರನ್ನು ಹೆದರಿಸಲಾಗುತ್ತಿದೆ’ ಎಂಬ ವಾದವೊಂದಿದೆ. ಅದು ಸಂಪೂರ್ಣವಾಗಿ ತಪ್ಪು. ಕೋವಿಡ್ ಎಂಬುದೊಂದು ವಿಶಿಷ್ಟ ಕಾಯಿಲೆ. ಅದು ಹರಡುವ ರೀತಿ, ಅದರ ರೋಗಲಕ್ಷಣಗಳು, ಕಾಯಿಲೆಯ ಅವಧಿ ಇತ್ಯಾದಿ ಎಲ್ಲವೂ ಇತರ ಜ್ವರಗಳಿಗಿಂತ ಭಿನ್ನವಾದುವು. ಆದ್ದರಿಂದಲೇ ಬಹುಶಃ ಮೊದಲಿಗೆ ಈ ರೋಗದ ವೈರಾಣುವನ್ನು “ನೋವೆಲ್’ (ನವೀನ) ಕೋವಿಡ್ ವೈರಸ್ ಎಂದು ಕರೆಯಲಾಗಿತ್ತು. ಸತ್ಯ ಹೀಗಿರುವಾಗ
Related Articles
Advertisement
ನಿರ್ಲಕ್ಷಿಸದಿರಿ; ತಡೆಯಲು ಸಹಕರಿಸಿ : ಸೌಮ್ಯ ಕಾಯಿಲೆ ಇರುವವರು ಆಸ್ಪತ್ರೆಗೆ ದಾಖಲಾಗುವ ಆವಶ್ಯಕತೆ ಇಲ್ಲವೆಂದೆವಷ್ಟೆ. ದುರದೃಷ್ಟವಶಾತ್, “ಸೌಮ್ಯ ರೂಪದ ಜ್ವರ, ಮೈಕೈ ನೋವು ಕೆಮ್ಮು ಮಾತ್ರ ಇದ್ದಾಗ ಆಸ್ಪತ್ರೆಗೆ ಹೋಗದಿರುವುದೇ ಒಳ್ಳೆಯದಲ್ಲವೇ? ಸುಮ್ಮನೆ ಕೋವಿಡ್ ಎಂಬ ಹಣೆಪಟ್ಟಿ ಹಚ್ಚಿಸಿಕೊಳ್ಳುವುದು ಏಕೆ? ಇಲ್ಲೇ ಇದ್ದು ನಾವೇ ಆರೈಕೆ ಮಾಡಿಕೊಂಡರಾಯಿತು’ ಎಂಬ ವಿಶಿಷ್ಟ
ಮನಸ್ತತ್ವವೊಂದು ಇತ್ತೀಚೆಗೆ ಸಮಾಜದಲ್ಲಿ ಬೇರೂರುತ್ತಿರುವುದು ಖೇದಕರ ವಿಷಯ. ಕೋವಿಡ್ ಎಂದು ದೃಢಪಟ್ಟ ಕೂಡಲೇ ಆರೋಗ್ಯ ಕಾರ್ಯಕರ್ತರು ಬಂದು ಮನೆಯನ್ನು ಸೀಲ್ ಡೌನ್ ಮಾಡುತ್ತಾರೆ, ಓಡಾಡಲು ನಿರ್ಬಂಧ ಹಾಕುತ್ತಾರೆ ಮಾತ್ರವಲ್ಲ ಇತರರು ನಮ್ಮನ್ನು ಕಂಡರೆ ಹೆದರಿ ದೂರ ಹೋಗುತ್ತಾರೆ ಎಂಬ ರೀತಿಯ ಭಾವನೆಗಳು ಜನರು ಈ ರೀತಿ ನಡೆದುಕೊಳ್ಳಲು ಪ್ರೇರೇಪಿಸುತ್ತವೆ.
ಹೀಗಾಗಲು ಏನು ಕಾರಣ? ಕೋವಿಡ್ ಸೋಂಕುಪೀಡಿತರನ್ನು ತಪ್ಪಿತಸ್ಥರಂತೆ ನೋಡುವುದು ತರವೇ? ಹೆಚ್ಚಿನ ಸಲ ಸರಕಾರವನ್ನು ಅದಕ್ಷತೆಗಾಗಿ ದೂರುವ ಜನರೇ ತಿಳಿದೋ ತಿಳಿಯದೆಯೋ ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸ ಸಮರ್ಪಕವಾಗಿ ಮಾಡುವಲ್ಲಿ ಸಹಕರಿಸುವುದಿಲ್ಲ. ತಮಗೆ ಕೋವಿಡ್ ಇರಬಹುದಾದ ವಿಷಯವನ್ನು ತಾವು ಮುಚ್ಚಿಟ್ಟರೆ ಸರಕಾರ ಸಮಾಜವನ್ನು ಸಂರಕ್ಷಿಸುವುದು ಹೇಗೆ ಎಂಬ ಸರಳ ಸತ್ಯವೂ ಅವರಿಗೆ ತೋಚದು. ಜನರು ಸಹಕರಿಸದಿದ್ದರೂ ಸರಕಾರ ಬಲವಂತದಿಂದ ಸಮಾಜವನ್ನು ರಕ್ಷಿಸಬೇಕೆಂದು ಅಪೇಕ್ಷಿಸುವುದು ಸಾಧುವೇ?
ಆರೋಗ್ಯ ಕೆಟ್ಟಿದೆ ಎಂದು ಅನ್ನಿಸಿದ ಕೂಡಲೇ ಆಸ್ಪತ್ರೆಗೆ ಹೋಗಿ ಅಲ್ಲಿನ ಆರೋಗ್ಯ ಸಿಬಂದಿ ಹೇಳಿದಂತೆ ನಡೆದುಕೊಳ್ಳುವುದು ಕೋವಿಡ್ ನಿಯಂತ್ರಣಕ್ಕಿರುವ ಸುಲಭ ಮತ್ತು ಸರಳ ಉಪಾಯ. ಆಪ್ತಮಿತ್ರದಂತಹ ದೂರವಾಣಿಯ ಮುಖಾಂತರಸಂಪರ್ಕಿಸಿದರೂ ಆರೋಗ್ಯ ಕಾರ್ಯಕರ್ತರು ಮನೆಯ ಬಾಗಿಲಿಗೇ ಬಂದು ಅಗತ್ಯಮಾರ್ಗದರ್ಶನ ನೀಡುವಷ್ಟು ಸೌಲಭ್ಯವನ್ನು ಸರಕಾರವಿಂದು ಒದಗಿಸಿದೆ. ಆದರೆ ಅದರ ಸದುಪಯೋಗ ಪಡೆಯದೆ ಕೋವಿಡ್ ಕಾಯಿಲೆ ಬರುವುದು ಪೂರ್ವಜನ್ಮದ ಪಾಪವೇನೋ ಎಂದು ಅಂದುಕೊಳ್ಳುವಂತಹ ಸಾಮಾಜಿಕ ವಾತಾವರಣ ನಿರ್ಮಾಣ ಆಗಿರುವುದು ದುಃಖದ ವಿಷಯ. ಅದರಲ್ಲೂ ಸುಶಿಕ್ಷಿತರೆನ್ನಿಸಿಕೊಂಡವರೂ ಇಂತಹ ಮನೋಸ್ಥಿತಿ ಹೊಂದಿರುವುದನ್ನು ನಾನೇ ಕಂಡಿದ್ದೇನೆ.
ನಾವು ಕೋವಿಡ್ ತಪಾಸಣೆಗೆ ಏಕೆ ಒಳಗಾಗಬೇಕು ಎಂಬುದಕ್ಕೆ ಹಲವಾರು ಕಾರಣಗಳಿವೆ. ಮೊದಲಾಗಿ ನಮಗೆ ಅಗತ್ಯವಾಗಿರುವ ಆರೋಗ್ಯ ಮಾಹಿತಿ, ಮಾರ್ಗದರ್ಶನ ಮತ್ತು ಕಾಯಿಲೆ ಇರುವುದು ದೃಢಪಟ್ಟಲ್ಲಿ ನಮ್ಮಿಂದ ಕುಟುಂಬದ ಇತರ ಸದಸ್ಯರಿಗೆ ಮತ್ತು ಸಮಾಜಕ್ಕೆ ಹರಡುವುದನ್ನು ತಪ್ಪಿಸಿದ ಸಮಾಧಾನ ಸಿಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ದುರದೃಷ್ಟವಶಾತ್ ಎಲ್ಲಿಯಾದರೂ ಉಸಿರಾಟದ ತೊಂದರೆ ಕಂಡುಬಂದಲ್ಲಿ ತುರ್ತು ಚಿಕಿತ್ಸೆಗೆ ಹೋಗಲು ಅನುಕೂಲವಾಗುತ್ತದೆ.
ಯಾರು ಮನೆಯಲ್ಲಿದ್ದುಕೊಂಡೇ ಆರೈಕೆ ಮಾಡಿಕೊಳ್ಳಬಹುದು, ಯಾರು ಆಸ್ಪತ್ರೆಗೆ ದಾಖಲಾಗಬೇಕು ಎಂಬ ನಿರ್ಧಾರವನ್ನು ಆರೋಗ್ಯ ಸಿಬಂದಿಗೆ ಬಿಡುವುದು ಲೇಸು. ಮನೆಯಲ್ಲಿಯೇ ಉಳಿದು ಆರೈಕೆ ಮಾಡಿಕೊಳ್ಳಬೇಕಾದರೆ ಬೇಕಾಗುವಂತಹ ಸವಲತ್ತುಗಳು ಎಲ್ಲರ ಮನೆಯಲ್ಲಿಯೂ ಲಭ್ಯವಿರುವುದು ಅಸಾಧ್ಯ. ಹಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಒಳಿತು. ಆಸ್ಪತ್ರೆಗೆ ಸೇರಿದ ಅನಂತರ ಯಾರಿಗೆ ಯಾವಾಗ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂಬುದು ರೋಗಿಯ ಸ್ಥಿತಿಯನ್ನು ಗಮನಿಸಿ ವೈದ್ಯರು ನಿರ್ಧರಿಸುತ್ತಾರೆ. ಅಪರೂಪಕ್ಕೆ ಆಮ್ಲಜನಕ, ಕೃತಕ ಉಸಿರಾಟ ಇತ್ಯಾದಿಗಳ ಆವಶ್ಯಕತೆ ಉಂಟಾಗುವ ಸಾಧ್ಯತೆ ಇರುತ್ತದೆ. ಉಳಿದ ಚಿಕಿತ್ಸಾತ್ಮಕ ವಿವರಗಳು ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ತಾಳ್ಮೆ ಮುಖ್ಯ
ನಾವು ಕಲಿಯಬೇಕಾದ ಪಾಠ : ಈ ಮಹಾಮಾರಿ ನಮಗೆ ಕಲಿಸಿರುವ, ಕಲಿಸುತ್ತಿರುವ ಪಾಠ ಏನೆಂದರೆ, ಇಂದಿನ ಆಧುನಿಕ ಯುಗದಲ್ಲಿ ಹೊಸ ಕಾಯಿಲೆಯೊಂದು ಹುಟ್ಟಿಕೊಂಡು ಕೆಲವೇ ವಾರಗಳಲ್ಲಿ ವಿಶ್ವದಾದ್ಯಂತ ಹರಡಬಲ್ಲುದು ಎಂಬುದು. ಎರಡನೆಯದಾಗಿ, ಎಷ್ಟೇ ದಿಟ್ಟ ಸರಕಾರದಿಂದಲೂ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಜನರ ಸಹಕಾರ ಮುಖ್ಯ ಎಂಬ ಪಾಠ ನಾವಿಂದು ಕಲಿಯಬೇಕಾಗಿದೆ.
ಈ ಲೇಖನದ ಉದ್ದೇಶ ಇಷ್ಟೇ. ಕೋವಿಡ್ ಎಂಬುದು ಒಂದು ವಿಶಿಷ್ಟ ಕಾಯಿಲೆ ಹೌದಾದರೂ ಹೆಚ್ಚಿನವರಲ್ಲಿ ಪ್ರಾಣಾಂತಿಕ ಕಾಯಿಲೆ ಅಲ್ಲ ಎಂಬುದನ್ನು ಸ್ವತಃ ಅನುಭವಿಸಿ ಜನರಿಗೆ ತಿಳಿ ಹೇಳುವುದು. ಅನಾರೋಗ್ಯ ಕಂಡ ಕೂಡಲೇ ಸೂಕ್ತ ಆರೋಗ್ಯ ತಪಾಸಣೆ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ಸಮಾಜದ ಆರೋಗ್ಯಸಂರಕ್ಷಣೆಯನ್ನೂ ಸಾಧಿಸಿದಂತಾಗುತ್ತದೆ. ಕೊನೆಯಾದಾಗಿ “ನಾವು ರೋಗದ ವಿರುದ್ಧ ಹೋರಾಡಬೇಕೇ ವಿನಾ ರೋಗಿಯ ವಿರುದ್ಧ ಅಲ್ಲ’ ಎಂಬ ಧ್ಯೇಯವಾಕ್ಯವನ್ನು ನಾವೆಲ್ಲರೂ ಇಂದು ಅರಿತು ಅಳವಡಿಸಿಕೊಳ್ಳಬೇಕಾಗಿದೆ.
ಡಾ| ಶಿವಾನಂದ ಪ್ರಭು
ಸರ್ಜರಿ ವಿಭಾಗ, ಕೆಎಂಸಿ,
ಮಂಗಳೂರು