Advertisement

ಕೋವಿಡ್ ಬಿಕ್ಕಟ್ಟು; ನಮ್ಮ ಕಷ್ಟದ ಬಗ್ಗೆ ಸರಕಾರ ಗಮನಹರಿಸಲಿ…ಇದು ಮಂಗಳಮುಖಿಯರ ಅಳಲು

02:01 PM Apr 29, 2021 | Team Udayavani |

ಬೆಂಗಳೂರು:ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೋವಿಡ್ ಎರಡನೇ ಅಲೆ ಮತ್ತೆ ಜನರಲ್ಲಿ ಭೀತಿಯನ್ನು ಮೂಡಿಸಿದೆ. ಕಳೆದ ವರ್ಷದ ಆಘಾತ, ಸಂಕಷ್ಟ ಮರೆಯುವ ಮುನ್ನವೇ ಈ ವರ್ಷವೂ ಕೋವಿಡ್ ಕ್ಷಿಪ್ರವಾಗಿ ಹರಡತೊಡಗಿದೆ. ಇದರ ಪರಿಣಾಮ ರಾತ್ರಿ ಕರ್ಫ್ಯೂ, ಲಾಕ್ ಡೌನ್ ಜಾರಿಯಾಗಿದೆ. ತುರ್ತು ಸೇವೆ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕ ಸಾರಿಗೆ, ಸಂಚಾರ ವ್ಯವಸ್ಥೆ ಬಂದ್ ಆಗಿದ್ದು, ಮಂಗಳಮುಖಿಯರು ಉದಯವಾಣಿ ಜತೆ ತಮ್ಮ ಬದುಕಿನ ಬವಣೆಯ ಬಗ್ಗೆ ಹೇಳಿಕೊಂಡಿದ್ದು, ಸರಕಾರ ತಮ್ಮ ಬಗ್ಗೆ ಗಮನಹರಿಸಲಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ.

Advertisement

ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ತೃತೀಯ ಲಿಂಗಿಗಳು ತರಕಾರಿ ವ್ಯಾಪಾರ, ಕುರಿ ಸಾಕಾಣೆ, ಹೈನುಗಾರಿಕೆ ಮಾಡಿದ್ದರು. ಆದರೂ ಹಲವರು ಕಷ್ಟ ಅನುಭವಿಸುವಂತಾಗಿತ್ತು. ಈ ಬಾರಿಯೂ ನಿರ್ಬಂಧ, ಲಾಕ್ ಡೌನ್ ನಿಂದ ಮಂಗಳಮುಖಿಯರು, ಕಲಾವಿದರ ಬದುಕಿನ ನಿರ್ವಹಣೆ ತುಂಬಾ ಕಷ್ಟವಾಗಿದೆ. ನಾನು ಜಾನಪದ ಅಕಾಡಮಿ ಅಧ್ಯಕ್ಷೆಯಾಗಿಯೂ ಯಾವುದೇ ನೃತ್ಯ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮ ರದ್ದಾಗಿದ್ದರಿಂದ ಊಟೋಪಚಾರದ ಸಮಸ್ಯೆ ಎದುರಾಗಿದೆ.

ಇತರ ಜೋಗತಿಯರು ಕೂಡಾ ಇಂತಹ ದಿನಗಳಲ್ಲಿ ಹೊರಗೆ ಹೋಗಲು ಭಯ ಪಡುತ್ತಿದ್ದಾರೆ. ಯಾಕೆಂದರೆ ಮಂಗಳಮುಖಿಯರು ಅಂದ ಕೂಡಲೇ ನೀವು ಎಲ್ಲೆಲ್ಲಾ ತಿರುಗಿ ಬರುತ್ತೀರಿ, ನಮಗೆ ಕೋವಿಡ್ ಹಬ್ಬಿಸಬೇಡಿ ಎಂದು ನೇರವಾಗಿ ಆರೋಪಿಸುತ್ತಾರೆ. ಸರಕಾರ ನಮ್ಮ ಬಗ್ಗೆಯೂ ಕಾಳಜಿ ವಹಿಸಲಿ ಎಂಬುದು ಮನವಿ…ಇದು ಜಾನಪದ ಅಕಾಡಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ಮನದಾಳದ ಮಾತು.

ಕೋವಿಡ್ ಸೋಂಕು ಹರಡುವಿಕೆ, ಲಾಕ್ ಡೌನ್ ನಿಂದಾಗಿ ತುಂಬಾ ಕಷ್ಟವಾಗಿದೆ. ಮನೆ ಹತ್ತಿರ ಬರಬೇಡಿ ಅಂತ ಹೇಳುತ್ತಾರೆ. ಊಟದ ವ್ಯವಸ್ಥೆಯೂ ಇಲ್ಲ. ಈಗ ಮಂಜಮ್ಮ ಜೋಗತಿ ಅವರ ಬಳಿ ಇದ್ದೇವೆ. ಸರಕಾರ ರೈತರ ಖಾತೆಗೆ, ಕೂಲಿ,ಕಾರ್ಮಿಕರ ಖಾತೆಗೆ ಹಣ ಹಾಕುತ್ತದೆ. ಆದರೆ ನಮ್ಮ ಕಷ್ಟ ಯಾರ ಬಳಿ ಹೇಳಿಕೊಳ್ಳುವುದು. ಸರಕಾರ ಮಂಗಳಮುಖಿಯರ ಬಗ್ಗೆಯೂ ಗಮನಹರಿಸಲಿ ಎಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಕೋಟೆ ರಾಮವ್ವ ಜೋಗತಿ ತಿಳಿಸಿದ್ದಾರೆ.

ಇದು ಕೇವಲ ಹೊಸಪೇಟೆ, ಬಳ್ಳಾರಿಯ ಮಂಗಳಮುಖಿಯರ ಗೋಳು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗತೊಡಗಿದೆ. ಒಂದು ವೇಳೆ ಮೇ ತಿಂಗಳಲ್ಲಿ ಮತ್ತೆ ಲಾಕ್ ಡೌನ್ ಮುಂದುವರಿದರೆ ಬದುಕು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದೆ. ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹಲವು ಕ್ಷೇತ್ರಗಳ ಜನರಿಗೆ ಮತ್ತಷ್ಟು ಬಿಸಿ ತಟ್ಟುವುದು ಖಚಿತ. ಈ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಮಂಜಮ್ಮ ಜೋಗತಿಯವರ ಮನವಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next