ತೆಕ್ಕಟ್ಟೆ: ಕೋವಿಡ್ ಮಹಾಮಾರಿಯಿಂದ ವಿಶ್ವದ ಆರ್ಥಿಕ ಶಕ್ತಿ ಸಂಪೂರ್ಣ ಕುಸಿತವಾಗಿದ್ದರೂ ಸಹ ದೇಶದ ಬೆನ್ನೆಲುಬಾಗಿರುವ ರೈತ ಭೂಮಿತಾಯಿಯ ಆಸರೆಯಿಂದಾಗಿ ರಾಷ್ಟ್ರದಲ್ಲಿ ಆಹಾರ ಉತ್ಪನ್ನಗಳಲ್ಲಿ ಶೇ.23ರಷ್ಟು ಹೆಚ್ಚಳವಾಗಲು ಕಾರಣನಾಗಿದ್ದಾನೆ. ಈ ನಿಟ್ಟಿನಲ್ಲಿ ನಮ್ಮ ಶ್ರೇಷ್ಠ ಕೃಷಿ ಸಂಸ್ಕೃತಿ ಮುಂದುವರಿದ ನಾಗರಿಕ ಪ್ರಪಂಚಕ್ಕೆ ಕೋವಿಡ್ ಸಂದರ್ಭ ಸ್ಪಷ್ಟ ಉತ್ತರ ನೀಡಿದೆ ಎಂದು ಕೃಷಿ ಮಾರ್ಗದರ್ಶಕ ಹರ್ಷ ಭಾಸ್ಕರ್ ಕಾಮತ್ ಹೇಳಿದರು.
ಅವರು ಸೆ. 25ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಕುಂದಾಪುರ, ಬ್ರಹ್ಮಾವರ ತಾ|ನ ಕೃಷಿ ಯಂತ್ರೋಪಕರಣ ಗಳ ರೈತ ಮಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೋಟದ ರೈತಧ್ವನಿ ಸಂಘದ ಪ್ರಮುಖರಾದ ಹಿರಿಯ ಕೃಷಿಕ ಕೆ. ಶಿವಮೂರ್ತಿ ಉಪಾಧ್ಯಾಯ ಕೋಟತಟ್ಟು, ರೈತರು ಬೆಳೆದ ಭತ್ತದ ಬೆಳೆಗೆ ಕಟಾವು ಸಂದರ್ಭದಲ್ಲಿ ಸೂಕ್ತ ಬೆಂಬಲ ಬೆಲೆ ಸಿಗದೆ ಪರಿತಪಿಸುವ ಆತಂಕ ಎದುರಾಗಿದೆ. ಈ ನಡುವೆ ಭತ್ತದ ಕಟಾವು ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಅಂತಾರಾಜ್ಯದಿಂದ ಬರುವ ಕಟಾವು ಯಂತ್ರಗಳು ಪರಿಸರದ ರೈತರನ್ನು ಸಂಪರ್ಕಿಸದೆ ನೇರವಾಗಿ ಬಂದು ನಿಗದಿತ ಬಾಡಿಗೆ ದರ ನಿಗದಿಪಡಿಸದೆ ಗ್ರಾಮೀಣ ರೈತರನ್ನು ಸುಲಿಗೆ ಮಾಡಲು ಹೊರಟಿವೆ.
ಇದನ್ನೂ ಓದಿ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಸದನದಲ್ಲಿ ಉತ್ತರ ನೀಡಿದ್ದೇನೆ : ಸಿಎಂ
ಈ ಕುರಿತು ರೈತ ಸಂಘಗಳು ಸಂಘಟಿತರಾಗಿ ರೈತರಿಗೆ ಹೊರೆ ಆಗದಂತೆ ಸೂಕ್ತ ದರ ನಿಗದಿಪಡಿಸಬೇಕಾದ ಅನಿವಾರ್ಯತೆ ಇದೆ ಎಂದರು. ಹಿರಿಯ ಕೃಷಿಕ ತೆಕ್ಕಟ್ಟೆ ನಾಗರಾಜ್ ನಾಯಕ್, ಕೃಷಿಕ ಶಿವ ಪೂಜಾರಿ ಪಡುಕರೆ, ಪಿಎಲ್‌ಡಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ವಿಶ್ವನಾಥ್ ರಾವ್, ಸುಬ್ಬಣ್ಣ ಪೂಜಾರಿ ಮಧುವನ, ಪರಿಸರದ ರೈತರು ಉಪಸ್ಥಿತರಿದ್ದರು. ಕುಂದಾಪುರ, ಬ್ರಹ್ಮಾವರ ತಾಲೂಕಿನ ಕೃಷಿ ಯಂತ್ರೋಪಕರಣಗಳ ರೈತ ಮಾಲಕರ ಜತೆ ಸಂವಾದ ನಡೆಯಿತು. ಕೆ. ಶಿವಮೂರ್ತಿ ಉಪಾಧ್ಯಾಯ ಕೋಟತಟ್ಟು ಪಡುಕರೆ ಸ್ವಾಗತಿಸಿ, ವಂದಿಸಿದರು.