ಮುಂಬಯಿ, ಡಿ. 15: ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕುಗಳ ಸಂಖ್ಯೆ ಕಡಿಮೆ ಯಾಗಿದ್ದರೂ ಒಂಬತ್ತು ಜಿಲ್ಲೆಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇತ್ತೀಚಿನ ಈ ಪ್ರವೃತ್ತಿಯಿಂದ ರಾಜ್ಯದಲ್ಲಿ ವೈರಸ್‌ನ ಅಪಾಯಗಳು ಇನ್ನೂ ತಗ್ಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಸೋಮವಾರ ಮಹಾರಾಷ್ಟ್ರವು 2,949 ಹೊಸ ಪ್ರಕರಣಗಳೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 18.83 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 477 ಮುಂಬಯಿಯಿಂದವರದಿಯಾಗಿವೆ. ಮತ್ತೆ 60 ಸಾವುಗಳೊಂದಿಗೆ ರಾಜ್ಯದ ಸಾವಿನ ಸಂಖ್ಯೆ 48,269 ಕ್ಕೆ ಏರಿದೆ. ಸೋಮವಾರ ಮುಂಬಯಿಯಲ್ಲಿ ಕೋವಿಡ್ ದಿಂದ 7 ಮಂದಿ ಸಾವನ್ನಪ್ಪಿದ್ದಾರೆ. ದೀಪಾವಳಿಯ ಬಳಿಕ ರತ್ನಗಿರಿ, ಸಿಂಧುದುರ್ಗ, ವಾಶಿಮ್, ಪುಣೆ, ಕೊಲ್ಲಾಪುರ, ನಾಸಿಕ್, ನಂದುರ್ಬಾರ್, ಅಕೋಲಾ ಮತ್ತು ನಾಗಪುರಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ.
ಶೇಕಡಾವಾರು ಪ್ರಕಾರ, ವಾಶಿಮ್, ಸಿಂಧುದುರ್ಗ, ಕೊಲ್ಲಾಪುರ, ಅಕೋಲಾ ಮತ್ತುನಾಗಪುರಗಳಲ್ಲಿ ಸಕ್ರಿಯ ಸೋಂಕುಗಳಲ್ಲಿ ಶೇ. 40 ಅಥವಾ ಅದಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ. ಪರಿಣಾಮ ರಾಜ್ಯ ಅಧಿಕಾರಿಗಳು ಈ ಜಿಲ್ಲೆಗಳನ್ನು ಸೂಕ್ಷ್ಮವಾಗಿ ಗಮನಹರಿಸುತ್ತಿದ್ದಾರೆ.
ಹಬ್ಬಗಳ ಸಮಯದಲ್ಲಿ ಹೆಚ್ಚಿದ ಚಲನವಲನವು ಈ ನಿರ್ದಿಷ್ಟ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿರಬಹುದು ಅಥವಾ ಈ ಜಿಲ್ಲೆಗಳಲ್ಲಿ ಕೆಲವು ಕೋವಿಡ್ – 19 ಪ್ರಕರಣಗಳನ್ನು ಇತರ ಜಿಲ್ಲೆಗಳಿಗಿಂತ ಬಹಳ ಹಿಂದೆಯೇ ದಾಖಲಿಸಲು ಪ್ರಾರಂಭಿಸಿರುವುದು ಇದಕ್ಕೆ ಕಾರಣ ವಾಗಿರಬಹುದು ಎಂದು ಅಧಿಕಾರಿಗಳುಅಭಿಪ್ರಾಯಪಟ್ಟಿದ್ದಾರೆ. ಮುಂಬಯಿಯಲ್ಲಿ ಒಂದು ತಿಂಗಳಿನಿಂದ ಕೋವಿಡ್ -19ಪ್ರಕರಣಗಳಲ್ಲಿ ಏರಿಳಿತಗಳನ್ನು ಕಾಣುತ್ತಿದೆ.
ಡಿಸೆಂಬರ್ ಅಥವಾ ಜನವರಿಯೊಳಗೆ ಕೋವಿಡ್ ವೈರಸ್‌ನ ಎರಡನೇ ಅಲೆಯ ಸಾಧ್ಯತೆಯಿದ್ದು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳನ್ನು ನಿರ್ವಹಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80ರಷ್ಟು ಹಾಸಿಗೆ ಕಾಯ್ದಿರಿಸುವಿಕೆಯನ್ನು ಮುಂದು ವರಿಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಒತ್ತಾಯಿಸಿದೆ.
ಸಕ್ರಿಯ ಪ್ರಕರಣಗಳಲ್ಲಿ ಕುಸಿತ : ಸಕ್ರಿಯ ಪ್ರಕರಣಗಳಲ್ಲಿ ಏರಿಕೆಗೆ ಸಾಕ್ಷಿಯಾದ ಒಂಬತ್ತು ಜಿಲ್ಲೆಗಳಿಗೆ ವ್ಯತಿರಿಕ್ತವಾಗಿ ಸಾಂಗ್ಲಿ,ಅಹ್ಮದ್‌ನಗರ, ಧುಳೆ, ಔರಂಗಾಬಾದ್, ಪರ್ಭಾಣಿ, ಹಿಂಗೋಲಿ, ನಾಂದೇಡ್,ಗೊಂಡಿಯಾ ಮತ್ತು ಚಂದ್ರಾಪುರಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಆದರೆ ಚಂದ್ರಾಪುರ, ಪರ್ಭಾಣಿ, ಹಿಂಗೋಲಿ ಮತ್ತು ಗೊಂಡಿಯಾದಲ್ಲಿ ಕಡಿಮೆ ಜನರು ಈವರೆಗೆ ವೈರಸ್‌ಗೆ ತುತ್ತಾಗಿರುವುದರಿಂದ ಈ ಜಿಲ್ಲೆಗಳು ಅಪಾಯದಲ್ಲಿವೆ ಎಂದು ರಾಜ್ಯ ಸರಕಾರದ ಕೋವಿಡ್-19 ತಾಂತ್ರಿಕ ಸಲಹೆಗಾರ ಡಾ| ಸುಭಾಷ್ ಸಾಳುಂಕೆ ತಿಳಿಸಿದ್ದಾರೆ.