Advertisement

ಕೋವಿಡ್: ಮಹಾರಾಷ್ಟ್ರಕ್ಕೆ ಮಾರಕವಾದ ಜುಲೈ

05:30 PM Aug 03, 2020 | Suhan S |

ಮುಂಬಯಿ, ಆ. 2: ಕೋವಿಡ್‌-19 ರಾಜ್ಯಕ್ಕೆ ಜುಲೈ ಕರಾಳ ತಿಂಗಳಾಗಿ ಮಾರ್ಪಟ್ಟಿದ್ದು, ಒಂದೇ ತಿಂಗಳಲ್ಲಿ 2,47,357 ಪ್ರಕರಣಗಳು ದಾಖಲಾಗಿದೆ. ಒಟ್ಟು ಪ್ರಕರಣಗಳ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 58.6ರಷ್ಟು ಹೆಚ್ಚಿನ ಪ್ರಕರಣಗಳು ಜುಲೈನಲ್ಲಿ ದಾಖಲಾದರೆ, 7,139 ಮಂದಿ ಸಾವನ್ನಪ್ಪಿರುವುದು ಆತಂಕದ ವಿಷಯವಾಗಿದೆ.

Advertisement

ಅತ್ಯಂತ ಕೆಟ್ಟ ತಿಂಗಳು :  ರಾಜ್ಯದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4,22,118 ದಾಟಿದ್ದು, ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾಗಿದೆ. ಕೋವಿಡ್ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಜುಲೈ ಮಹಾರಾಷ್ಟ್ರದ ಅತ್ಯಂತ ಕೆಟ್ಟ ತಿಂಗಳು ಎನ್ನಲಾಗಿದೆ. ಇನ್ನೊಂದೆಡೆ ರಾಜ್ಯವು 2.50 ಲಕ್ಷ ಚೇತರಿಕೆ ಪ್ರಮಾಣ ಹೊಂದಿದ್ದು, ಚೇತರಿಸಿಕೊಂಡ 7,543 ಸೋಂಕಿತರನ್ನು ಕಳೆದ 24 ಗಂಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬಯಿಯಲ್ಲಿ ಸಕ್ರಿಯ ಪ್ರಕರಣಗಳು 20,563 ಆಗಿದ್ದು, ಇಲ್ಲಿಯವರೆಗೆ 87,074 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಚೇತರಿಕೆಯ ಪ್ರಮಾಣವು ಶೇ. 76ರಷ್ಟಿದ್ದು, ಮುಂಬಯಿ ಮಹಾನಗರ ಪಾಲಿಕೆಯ ಅಂಕಿಅಂಶಗಳ ಪ್ರಕಾರ ಮುಂಬಯಿಯ ದ್ವಿಗುಣಗೊಳಿಸುವ ದರವು ಈಗ 76 ದಿನಗಳಲ್ಲಿದ್ದು, ಪ್ರಕರಣದ ಬೆಳವಣಿಗೆಯ ದರವು ಒಟ್ಟು ಶೇ. 0.92 ರಷ್ಟಿದೆ.

ಪರೀಕ್ಷೆಗಳ ಸಂಖ್ಯೆ ಹೆಚ್ಚಳ :  ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಜೂನ್‌ನಲ್ಲಿ ರಾಜ್ಯದಲ್ಲಿ 1,07,106 ಪ್ರಕರಣ ಮತ್ತು 5,569 ಸಾವು ದಾಖಲಾಗಿವೆ. ರಾಜ್ಯ ಸರಕಾರ ಜೂನ್‌ನಿಂದ ಜುಲೈವರೆಗೆ ಪರೀಕ್ಷಾ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, ಆದರೆ ಸಕಾರಾತ್ಮಕತೆಯ ಪ್ರಮಾಣವು ಒಂದೇ ಆಗಿರುತ್ತದೆ. ಜುಲೈನಲ್ಲಿ ಮಾತ್ರ ರಾಜ್ಯವು 11,63,375 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, ಶೇ. 21.26ರಷ್ಟು ಪಾಸಿಟಿವ್‌ ಪ್ರಮಾಣವನ್ನು ಹೊಂದಿದೆ. ಜೂನ್‌ನಲ್ಲಿ ರಾಜ್ಯವು 504,547 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, ಶೇ. 21.22ರಷ್ಟು ಪಾಸಿಟಿವ್‌ ಪ್ರಕರಣಗಳನ್ನು ಹೊಂದಿತ್ತು. ಆಗಸ್ಟ್‌ನಲ್ಲಿ ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೊಪೆ ಹೇಳಿದ್ದಾರೆ.

ಗ್ರಾಮೀಣ ಮಟ್ಟದಲ್ಲಿ ವೈದ್ಯರ ಟಾಸ್ಕ್ ಫೋರ್ಸ್‌ ರಚನೆ : ಕೋವಿಡ್ ಕುರಿತ ವಿವಿಧ ಸಮೀಕ್ಷೆಗಳು ಸೋಂಕು ಏರಿಕೆ ಪ್ರಮಾಣ ತೋರಿಸುತ್ತಿವೆ. ಇದರಲ್ಲಿ ದ್ವಿಗುಣಗೊಳಿಸುವ ದರ, ಚೇತರಿಕೆ ದರ, ಇತರವು ಸೇರಿವೆ. ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಟಾಸ್ಕ್ ಫೋರ್ಸ್‌ ಅನ್ನು ಸ್ಥಾಪಿಸಲಾಗಿದೆ, ಅದು ಜಿಲ್ಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿ ಟೆಲಿ-ಐಸಿಯುಗಳಿದ್ದು, ಗ್ರಾಮೀಣ ಪ್ರದೇಶದ ವೈದ್ಯರು ಟಾಸ್ಕ್ ಪೋರ್ಸ್ ನಲ್ಲಿ ವೈದ್ಯರೊಂದಿಗೆ ವೀಡಿಯೋ ಕರೆಗಳ ಮೂಲಕ ನಿರ್ಣಾಯಕ ರೋಗಿಯ ಬಗ್ಗೆ ಸಮಾಲೋಚಿಸಬಹುದು ಎಂದು ಟೋಪೆ ಹೇಳಿದ್ದಾರೆ. ನನ್ನ ಮೌಲ್ಯಮಾಪನದ ಪ್ರಕಾರ ಆಗಸ್ಟ್‌ನಲ್ಲೂ ಸಂಖ್ಯೆಗಳು ಹೆಚ್ಚಾಗುತ್ತವೆ, ಆದರೆ ಹಾಸಿಗೆಗಳು ಮತ್ತು ಇತರ ಸಲಕರಣೆಗಳ ಲಭ್ಯತೆಯ ವಿಷಯದಲ್ಲಿ ಪ್ರಕರಣಗಳನ್ನು ನಿಭಾಯಿಸಲು ನಾವು ಉತ್ತಮ ಸ್ಥಾನದಲ್ಲಿದ್ದೇವೆ ಎಂದು ಟೋಪೆ ಹೇಳಿದರು.

ವಿಭಾಗ ಮಟ್ಟದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ನೇಮಕ : ಈ ಮಧ್ಯೆ ಟೋಪೆ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ವಿಭಾಗ ಮಟ್ಟದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ನೇಮಕ ಮಾಡುವಂತೆ ಕೋರಿದ್ದಾರೆ. ಮಹಾತ್ಮಾ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆಯಡಿಯಲ್ಲಿ ನಗದು ರಹಿತ ಚಿಕಿತ್ಸೆ ಸೇರಿದಂತೆ ರಾಜ್ಯ ಸರಕಾರದ ಅ ಸೂಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ಎಮ್‌ಜೆಪಿಜೆ ಅಡಿಯಲ್ಲಿ ಕ್ಯಾಪಿಂಗ್‌ ಬಿಲ್‌ ಗಳು ಅಥವಾ ವಿಮೆಯ ನಿರ್ಧಾರವನ್ನು ಜನರನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ. ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆಯೆ ಎಂದು ನೋಡಲು ನಾನು ಸಿಎಂ ಮತ್ತು ಉಪ ಸಿಎಂಗೆ ಪತ್ರ ಬರೆದಿದ್ದೇನೆ. ಈ ಯೋಜನೆಗಳನ್ನು ಅನುಸರಿಸಲಾಗಿದೆಯೇ ಎಂದು ನೋಡಲು ವಿಭಾಗ ಮಟ್ಟದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ರಚಿಸುವಂತೆ ನಾನು ವಿನಂತಿಸಿದ್ದೇನೆ. ನಗರಗಳಲ್ಲಿನ ಜಿಲ್ಲಾಧಿಕಾರಿ ಮತ್ತು ಪುರಸಭೆ ಆಯುಕ್ತರು ಕನಿಷ್ಠ 5 ಕೋವಿಡ್‌ ಆಸ್ಪತ್ರೆಗಳಿಗೆ ಮತ್ತು ಎಂಜೆಪಿಜೆಎ ಅಡಿಯಲ್ಲಿ ಎಂಪನೇಲ್‌ ಮಾಡಿದ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಡಳಿತದ ಯೋಜನೆಗಳನ್ನು ನೋಡಬೇಕು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next