Advertisement
ಎಲ್ಲೆಡೆ ಕೋವಿಡ್ 2ನೇ ಅಲೆ ಆತಂಕ ಶುರುವಾಗಿದ್ದು, ದಿನೇ ದಿನೇ ಜಿಲ್ಲೆಯನ್ನೂ ಆವರಿಸುತ್ತಿದೆ. ಆದರೆ, ಬಹುತೇಕರು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಮಾರುಕಟ್ಟೆ ಪ್ರದೇಶಗಳಲ್ಲಿ ಸೇರುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 222ಕ್ಕೆ ತಲುಪಿದ್ದರೂ, ರವಿವಾರ ಗದಗ-ಬೆಟಗೇರಿ ಅವಳಿ ನಗರ ಹಾಗೂ ಶಿರಹಟ್ಟಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು. ಈ ಮಧ್ಯೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ನಗರ- ಪಟ್ಟಣಗಳಲ್ಲಿ ಜನ ಸುರಕ್ಷಿತ ಅಂತರ ಕಾಪಾಡಿಕೊಳ್ಳದೇ ಮಾಸ್ಕ್ ಧರಿಸುವುದನ್ನು ಮರೆತಿರುವುದು ಆತಂಕಕಾರಿ.
Related Articles
Advertisement
ದಿನಸಿ ಹಾಗೂ ತರಕಾರಿ ಮಾರುಕಟ್ಟೆ ಮಾತ್ರವಲ್ಲ ಜಾನುವಾರು ಸಂತೆಯಲ್ಲೂ ಕೊರೊನಾ ತಡೆ ಕುರಿತು ಜಾಗೃತಿ ಇಲ್ಲ. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ನಡೆದ ಸಂತೆಯಲ್ಲೂ ಬಹುತೇಕ ರೈತರ ಮುಖದಲ್ಲೂ ಮಾಸ್ಕ್ ಕಂಡು ಬರಲಿಲ್ಲ. ಜಾನುವಾರುಗಳ ಹಲ್ಲು ನೋಡುವಾಗಲೂ ಯಾರೊಬ್ಬರೂ ಕೈಗವಸು ಧರಿಸದೇ, ಒಬ್ಬರಾದ ನಂತರ ಮತ್ತೂಬ್ಬರು ಪರೀಕ್ಷಿಸುತ್ತಿದ್ದರು. ಇದರಿಂದ ಜಾನುವಾರುಗಳಿಗೂ ಸೋಂಕು ಹರಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಾರಿಗೆ, ಖಾಸಗಿ ವಾಹನಗಳಲ್ಲಿಲ್ಲ ಅಂತರ:
ಸಾರಿಗೆ ನೌಕರರ ಮುಷ್ಕರ ಮುಂದುವರಿಯುತ್ತಿದ್ದು, ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಸಂಚರಿಸುವಂತಾಗಿದೆ. ಖಾಸಗಿ ವಾಹನದಲ್ಲಿ ನಿಗದಿಗಿಂತ ದುಪ್ಪಟ್ಟು ಪ್ರಯಾಣಿಕರನ್ನು ಹೇರಿಕೊಳ್ಳಲಾಗುತ್ತಿದೆ. ಇನ್ನು ಮುಷ್ಕರ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಸಾರಿಗೆ ಬಸ್ ಗಳು ಸಂಚರಿಸುತ್ತಿದ್ದು, ಜನರು ಸಾಮಾಜಿಕ ಅಂತರವಿಲ್ಲದೇ ಪ್ರಯಾಣಿಸುತ್ತಿದ್ದಾರೆ ಎಂಬುದು ಗಮನಾರ್ಹ.
ಎಚ್ಚೆತ್ತುಕೊಳ್ಳಬೇಕಿದೆ ಜಿಲ್ಲಾಡಳಿತ:
ಕಳೆದ ವರ್ಷ ಕೊರೊನಾ ಆರಂಭಿಕ ದಿನಗಳಲ್ಲಿ ಮಾಸ್ಕ್ ಇಲ್ಲದೇ, ಹೊರ ಬರುವವರಿಗೆ ನಗರಸಭೆ, ಪೊಲೀಸ್ ಇಲಾಖೆಯಿಂದ 100 ರೂ. ದಂಡ ವಿಧಿ ಸಿ, ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕರಿಗೆ ಬಿಸಿ ಮುಟ್ಟಿಸುತ್ತಿತ್ತು. ಅದರಂತೆ ಕೋವಿಡ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ವಹಿಸಲು ಮಾ.28ರಂದು ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ಪಥ ಸಂಚಲನ ನಡೆಸಿ, ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ರವಿವಾರ ಸೋಂಕಿತರ ಸಂಖ್ಯೆ 222ಕ್ಕೆ ತಲುಪಿದೆ. ಇನ್ನಾದರೂ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.