ಚಾಮರಾಜನಗರ : ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ನಗರದ ಜೆಎಸ್ ಎಸ್ ಪಬ್ಲಿಕ್ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ನಡೆಸಬೇಕೆಂದು ಒತ್ತಾಯಿಸಿ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದೆ. ಅಲ್ಲದೇ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಕೆಲ ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎಷ್ಟೇ ತಿಳಿ ಹೇಳಿದರೂ ಮಕ್ಕಳಿಗೆ ಭೌತಿಕ ಅಂತರ ಕಾಪಾಡಬೇಕೆಂಬ ಪರಿವೆ ಇರುವುದಿಲ್ಲ. ಆಟಕ್ಕೆ ಬಿಟ್ಟಾಗ ಜೊತೆಯಾಗುತ್ತಾರೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು ಹರಡಬಹುದು. ಆ ಮಗುವಿನಿಂದ ಮನೆಯ ಹಿರಿಯರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಪಾಸಿಟಿವಿಟಿ ದರ ಇಳಿಕೆ ಆಗುವವರೆಗೆ ಶಾಲೆಗೆ ರಜೆ
ನೀಡಬೇಕು ಎಂದು ಪೋಷಕರು ಒತ್ತಾಯಿಸಿದರು.
ಪರ್ಯಾಯವಾಗಿ ಹಿಂದೆ ರೂಢಿಸಿಕೊಂಡಿದ್ದ ಆನ್‌ಲೈನ್ ವ್ಯವಸ್ಥೆ ಮೂಲಕ ಬೋಧಿಸಬೇಕು ಎಂದು ಹಲವಾರು ಮಂದಿ ಪೋಷಕರು ಒತ್ತಾಯಿಸಿದರು. 3ನೇ ಅಲೆ ಬೇಗ ತಗ್ಗುವುದಾಗಿ ತಜ್ಞರು ತಿಳಿಸಿದ್ದಾರೆ. ಅಲ್ಲಿಯವರೆಗೆ ಆನ್‌ಲೈನ್ ತರಗತಿ ಸೂಕ್ತ ಎಂದು ಮನವಿ ಮಾಡಿದರು.
ಇದಕ್ಕೂ ಮುಂಚೆ ಬುಧವಾರ ಬೆಳಗ್ಗೆ ಶಾಲೆಗೆ ಮಕ್ಕಳನ್ನು ಕರೆತಂದಿದ್ದ ಹಲವಾರು ಪೋಷಕರಿಂದ ಸಹಿಯನ್ನು ಸಂಗ್ರಹಿಸಲಾಯಿತು. ಆ ಮನವಿಯನ್ನು ಪ್ರಾಂಶುಪಾಲ ಉಮೇಶ್ ಹಾಗೂ ಜೆಎಸ್‌ಎಸ್ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪೋಷಕರಾದ ನಿಜಗುಣರಾಜು, ದೊಡ್ಡರಾಯಪೇಟೆ ಗಿರೀಶ್,
ದಯಾನಿಧಿ, ಪಿ. ರಾಜು, ವೈ ಪಿ ರಾಜೇಂದ್ರಪ್ರಸಾದ್, ಎನ್. ಕುಮಾರಸ್ವಾಮಿ, ಗಿರೀಶ್, ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.