ಹೊಸದಿಲ್ಲಿ: ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ನಿಧಾನವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕೊವ್ಯಾಕ್ಸ್ ಸೌಲಭ್ಯದಡಿಯಲ್ಲಿ ಲಭ್ಯವಿರುವ 10 ಕೋಟಿ ಕೊವಿಶೀಲ್ಡ್ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕು ಎಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ಕೇಂದ್ರ ಸರಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.
ಸರಕಾರಿ- ಖಾಸಗಿ ಸಹಯೋಗದಡಿ ಅಸ್ತಿತ್ವಕ್ಕೆ ತರಲಾಗಿರುವ ಲಸಿಕಾ ಸಹಭಾಗಿತ್ವದಡಿ (ಜಿ.ಎ.ವಿ.ಐ) ಮೀಸಲಿಡಲಾಗಿರುವ 10 ಕೋಟಿ ಕೊವಿಶೀಲ್ಡ್ ಲಸಿಕೆಗಳು ಉಪಯೋಗವಾಗದೇ ಉಳಿದಿವೆ. ಹೀಗೆ ಬಿಟ್ಟರೆ ಅಮೂಲ್ಯವಾದ ಇವುಗಳ ಅವಧಿ ಮೀರಿ ಉಪಯೋಗಕ್ಕೆ ಬಾರದಂತಾಗುತ್ತವೆ. ಹೇಗಿದ್ದರೂ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಬೇಕು ಎಂದು ಎಸ್‌ಐಐ, ಕೇಂದ್ರ ಆರೋಗ್ಯ ಇಲಾಖೆಗೆ ಬರೆದಿರುವ ಪತ್ರದಲ್ಲಿ ಕೇಳಿಕೊಂಡಿದೆ.
ಎರಡು ಸಾವಿರ ಕೇಸ್: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಸರಣ ಮತ್ತೆ ವೇಗ ಪಡೆದಿದ್ದು, ಶನಿವಾರ ಬೆಳಗ್ಗೆಯಿಂದ ರವಿವಾರ ಬೆಳಗ್ಗೆ ನಡುವಿನ 24 ಗಂಟೆಗಳಲ್ಲಿ 2,593 ಮಂದಿಗೆ ಸೋಂಕು ತಗಲಿರುವ ಸಂಗತಿಯನ್ನು ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ. ಈ ಅವಧಿಯಲ್ಲಿ 44 ಮಂದಿ ಸಾವಿಗೀಡಾಗಿದ್ದು, ಒಟ್ಟು ಮರಣಕ್ಕೀಡಾದವರ ಸಂಖ್ಯೆ 5,22,193 ತಲುಪಿದೆ. ಪ್ರಸ್ತುತ ದೇಶದಲ್ಲಿ 15,873 ಸೋಂಕಿತರಿದ್ದು, ಸಕ್ರಿಯ ಕೇಸುಗಳ ಪ್ರಮಾಣ ಶೇ.0.04ರಷ್ಟಿದೆ.
ಮದ್ರಾಸ್ ಐಐಟಿಯಲ್ಲಿ ಸೋಂಕು ಹೆಚ್ಚಳ: ಮದ್ರಾಸ್ ಐಐಟಿಯಲ್ಲಿ ಸೋಂಕಿತರ ಸಂಖ್ಯೆ 60ಕ್ಕೇರಿದೆ. ಶನಿವಾರದಂದು ಅಲ್ಲಿ 55 ಪ್ರಕರಣ ಪತ್ತೆಯಾಗಿದ್ದವು. ಇದರ ಜತೆಗೆ ತಮಿಳುನಾಡಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಭೆ ನಡೆಸಿದ್ದಾರೆ.
ಶಾಂಘೈ ಅನಂತರ ಬೀಜಿಂಗ್‌ಗೆ ಸೋಂಕು: ಚೀನದ ಶಾಂಘೈಯಲ್ಲಿ ಎಲ್ಲೆಡೆ ವ್ಯಾಪಿಸಿರುವ ಕೊರೊನಾ ಕಾಟ, ಈಗ ಚೀನದ ರಾಜಧಾನಿ ಬೀಜಿಂಗ್‌ಗೂ ಕಾಲಿಟ್ಟಿದೆ. ಅಲ್ಲಿಯೂ ಎಲ್ಲೆಡೆ ಮಾಸ್ ಚೆಕ್‌ಅಪ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬೀಜಿಂಗ್‌ನ ದೊಡ್ಡ ಪ್ರಾಂತ್ಯವಾದ ಚವೊಯಂಗ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಹಾಗಾಗಿ ಅಲ್ಲಿರುವ ಸುಮಾರು 35 ಲಕ್ಷ ಜನರು ಮನೆಗಳಲ್ಲೇ ಇರುವಂತಾಗಿದೆ. ಶಾಂಘೈಯಲ್ಲಿ ಲಾಕ್‌ಡೌನ್ ಇದ್ದರೂ ಭದ್ರತಾಧಿಕಾರಿ ಗಳ ಕಣ್ಣುತಪ್ಪಿಸಿ ಯಾರೂ ಒಂದೆಡೆಯಿಂದ ಮತ್ತೂಂದೆಡೆಗೆ ಹೋಗಬಾರದೆಂದು ಅಲ್ಲಿನ ಎಲ್ಲ ಮನೆಗಳು ಹಾಗೂ ಇನ್ನಿತರ ಕಟ್ಟಡಗಳಿಗೆ ಕಬ್ಬಿಣದ ಸಲಾಕೆಗಳ ಬೇಲಿ ಹಾಕಲಾಗಿದೆ.
ಕೊವಿಶೀಲ್ಡ್ ಬೂಸ್ಟರ್ ಡೋಸ್ ಬೇಕು: ಎನ್‌ಐವಿ
ಒಮಿಕ್ರಾನ್‌ನ ಹೊಸ ತಳಿಯಾದ ಬಿಎ.1 ರೂಪಾಂತರಿಯನ್ನು ನಾಶಪಡಿಸುವ ಶಕ್ತಿ ಕೊವಿಶೀಲ್ಡ್ ಲಸಿಕೆಗೆ ಇಲ್ಲ. ಹಾಗಾಗಿ ಬೂಸ್ಟರ್ ಡೋಸ್ ಆವಶ್ಯಕ ಎಂದು ಐಸಿಎಂಆರ್
ಸಂಸ್ಥೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಐಸಿಎಂಆರ್- ಎನ್‌ಐವಿ) ಅಧ್ಯಯನ ವರದಿ ತಿಳಿಸಿದೆ. ಒಮಿಕ್ರಾನ್‌ನ ಹೊಸ ರೂಪಾಂತರಿಗಳಲ್ಲಿ ವೈರಾಣುವಿನ ಸ್ಪೈಕ್ ಭಾಗವು ಅತೀ ಹೆಚ್ಚು ಶಕ್ತಿಶಾಲಿಯಾಗಿ ಬದಲಾಗಿದೆ. ಹಾಗಾಗಿ, ಲಸಿಕೆಗಳಿಂದ ತಪ್ಪಿಸಿಕೊಳ್ಳುವ ಗುಣ ಹೊಸ ಮಾದರಿಯ ಒಮಿಕ್ರಾನ್‌ಗಳಲ್ಲಿ ಕಂಡುಬಂದಿದೆ. ಅದರಲ್ಲೂ ಬಿಎ.1 ರೂಪಾಂತರಿಯು ಈ ನಿಟ್ಟಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಶಕ್ತಿಗೆ ಹೋಲಿಸಿದರೆ ಕೊವಿಶೀಲ್ಡ್‌ನ ಶಕ್ತಿ ಕಡಿಮೆಯಾಗಿದೆ. ಹಾಗಾಗಿ ಕೊವಿಶೀಲ್ಡ್ ಪಡೆದವರು ಬೂಸ್ಟರ್ ಡೋಸ್‌ಗಳನ್ನು ಪಡೆದರೆ ಒಳಿತು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.