ಚಾಮರಾಜನಗರ : ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 752 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 254 ಮಂದಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಇದು ಜಿಲ್ಲೆಯಲ್ಲಿ ಒಂದೇ ದಿನ ದೃಢಪಟ್ಟ ಎರಡನೇ ಅತಿ ಹೆಚ್ಚು ಪ್ರಕರಣಗಳಾಗಿವೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕು ವಡ್ಡಗೆರೆ ಗ್ರಾಮದ 46 ವರ್ಷದ ವ್ಯಕ್ತಿ ಮೃತಪಟ್ಟವರು. ಇವರು ಜ. 18ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.
ಒಟ್ಟು 3095 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ 2328 ಆರ್‌ಟಿಪಿಸಿಆರ್ ಹಾಗೂ 767 ರ್ಯಾಪಿಡ್ ಆಂಟಿಜೆನ್ ಟೆಸ್‌ಟ್ಗಳಾಗಿವೆ. ಒಟ್ಟು ಪ್ರಕರಣಗಳಲ್ಲಿ ಚಾಮರಾಜನಗರ ತಾಲೂಕಿನಲ್ಲೇ ಹೆಚ್ಚು ಅಂದರೆ 358 ಜನರಿಗೆ ಸೋಂಕು ತಗುಲಿದೆ. ಗುಂಡ್ಲುಪೇಟೆ ತಾಲೂಕಿನ 121 ಜನರಿಗೆ, ಕೊಳ್ಳೇಗಾಲ ತಾಲೂಕಿನ 141 ಜನರಿಗೆ, ಹನೂರು ತಾಲೂಕಿನ 54 ಮಂದಿಗೆ ಹಾಗೂ ಯಳಂದೂರು ತಾಲೂಕಿನ 78 ಮಂದಿಗೆ ಸೋಂಕು ತಗುಲಿದೆ. ಗ್ರಾಮೀಣ ಪ್ರದೇಶಕ್ಕಿಂತ ಪಟ್ಟಣ ಪ್ರದೇಶದ ಜನರಲ್ಲಿ ಹೆಚ್ಚು ಸೋಂಕು ತಗುಲಿದೆ. ಪಟ್ಟಣ ಪ್ರದೇಶಗಳಲ್ಲಿ ಒಟ್ಟು 520 ಜನರು, ಗ್ರಾಮೀಣ ಪ್ರದೇಶದಲ್ಲಿ 232 ಜನರು ಪಾಸಿಟಿವ್ ಆಗಿದ್ದಾರೆ.
2021ರ ಮೇ 9ರಂದು ಅತಿ ಹೆಚ್ಚು ಎಂದರೆ 910 ಪ್ರಕರಣಗಳು ದೃಢಪಟ್ಟಿದ್ದವು. ಅದಾದ ಬಳಿಕ ಭಾನುವಾರ ದೃಢಪಟ್ಟಿರುವ 752 ಪ್ರಕರಣಗಳು ಒಂದೇ ದಿನದ ಅತಿ ಹೆಚ್ಚು ಪ್ರಕರಣಗಳಾಗಿವೆ. ಸೋಂಕು ಹರಡುತ್ತಿರುವ ವೇಗ ನೋಡಿದರೆ ಇನ್ನೊಂದು ವಾರದೊಳಗೆ ದೈನಿಕ ಸೋಂಕಿನ ಪ್ರಮಾಣ ಒಂದು ಸಾವಿರ ದಾಟುವ ನಿರೀಕ್ಷೆ ಇದೆ. ಭಾನುವಾರ 83 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2579ಕ್ಕೇರಿದೆ. ಒಟ್ಟು 524 ಮಂದಿ ಮೃತಪಟ್ಟಿದ್ದಾರೆ. 36,062 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ 32,939 ಮಂದಿ ಗುಣಮುಖರಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಕೋವಿಡ್ ಅಂಕಿ ಅಂಶ
ಇಂದಿನ ಪ್ರಕರಣ : 752
ಇಂದು ಗುಣಮುಖ : 83
ಒಟ್ಟು ಗುಣಮುಖ : 32,939
ಇಂದಿನ ಸಾವು : 01
ಒಟ್ಟು ಸಾವು : 524
ಸಕ್ರಿಯ ಪ್ರಕರಣಗಳು : 2579
ಒಟ್ಟು ಪ್ರಕರಣಗಳು : 36,062