Advertisement
ಬನಹಟ್ಟಿ: ಜಿಲ್ಲೆಯಲ್ಲಿಯೇ ವಿಶೇಷತೆ ಹೊಂದಿರುವ ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣ ಹಾಗೂ ಸಂಕಷ್ಟದಲ್ಲಿರುವ ಜನರಿಗಾಗಿ ಪಕ್ಷಾತೀತವಾಗಿ ಹಲವರು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಶಾಸಕ ಸಿದ್ದು ಸವದಿ ಕ್ಷೇತ್ರದಲ್ಲಿದ್ದರೇ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಪ್ರತಿಯೊಂದು ಗ್ರಾಮ, ಪಟ್ಟಣ ಸೇರಿದಂತೆ ಎಲ್ಲಡೆ ತೆರಳಿ ಕೋವಿಡ್ ಪರಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಜೊತೆಗೆ ನೂತನ ರಬಕವಿ-ಬನಹಟ್ಟಿ ತಾಲೂಕಿಗೆ ಬರಬೇಕಾದ ಎಲ್ಲ ಸೌಲಭ್ಯಕ್ಕಾಗಿ ಅಧಿಕಾರಿಗಳ ಜತೆ ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
Related Articles
Advertisement
ಪ್ರತಿಯೊಬ್ಬ ಆಶಾ ಮತ್ತು ಅಂಗನವಾಡಿ ಕಾರ್ಯರ್ತೆಯರು ಗ್ರಾಮ ಹಾಗೂ ಪಟ್ಟಣದ ಪ್ರತಿಯೊಂದು ಮನೆಗಳ ಸರ್ವೇ ಮಾಡಿಸಿ ಅಲ್ಲಿ ಯಾರಾದರೂ ಕೆಮ್ಮ, ಶೀತ, ಜ್ವರದಿಂದ ಬಳಲುತ್ತಿದ್ದರೆ ಅಂತಹವರನ್ನು ಗುರುತಿಸಿ ಅವರಿಗೆ ಮುಂಜಾಗ್ರತಾ ಕ್ರಮವಾಗಿ ಸರಕಾರದ ಕೋವಿಡ್ ಔಷಧಿ ಕಿಟ್ ನೀಡಿ ಕೋವಿಡ್ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದಾರೆ. ಈ ಪ್ರಯತ್ನ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಸದ್ಯ ತಾಲೂಕಿನಲ್ಲಿ ಕೋವಿಡ್ ಪ್ರಮಾಣ ಇಳಿಕೆಯತ್ತ ಸಾಗಿದೆ. ಒಟ್ಟಾರೆ ಶಾಸಕ ಸಿದ್ದು ಸವದಿ ಕ್ಷೇತ್ರದ ಜನತೆಯ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ.
ವ್ಯಾಕ್ಸಿನ್ ಬಗ್ಗೆ ಜಾಗೃತಿ: ಕೇಂದ್ರ ಸರಕಾರದ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸುವುದರ ಮೂಲಕ ಲಸಿಕಾ ಅಭಯಾನಕ್ಕೆ ಹೆಚ್ಚಿನ ಮಹತ್ವ ಬರುವಂತೆ ಮಾಡಿದ್ದು, ಜನರು ಜಾಗೃತರಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಉಚಿತ ಆಂಬ್ಯುಲೆನ್ಸ್ ಸೇವೆ: ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಿರಲೆಂದು ಇನ್ನೇರಡು ದಿನಗಳಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸುತ್ತಿದ್ದು, ಒಟ್ಟು ಮೂರು ಆಂಬ್ಯೂಲೆನ್ಸ್ ಸೇವೆ ಪ್ರಾರಂಭಗೊಳ್ಳಲಿದೆ. ಅದರಲ್ಲಿ ಎರಡು ಆಕ್ಸಿಜನ್ ಸಹಿತ ಇದ್ದು, ಒಂದು ವಾಹನ ಶವ ಸಂಸ್ಕಾರಕ್ಕೆ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಶಾಸಕ ಸವದಿ.
ಅಭಿಮಾನಿ ಬಳಗದಿಂದ ಹಸಿದವರಿಗೆ ಅನ್ನ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆ ಹಿನ್ನೆಲೆಯಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟುಗಳು, ಸಣ್ಣ ಪುಟ್ಟ ಕೆಲಸಗಳು, ಕೂಲಿಗಳು ನಿಂತು ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಸಿದವರಿಗೆ ಅನ್ನವಾಗಿರೋಣ ಸುರಕ್ಷಿತವಾಗಿರೋಣ ಎಂಬ ಘೋಷದೊಂದಿಗೆ ಬನಹಟ್ಟಿಯ ಸಿದ್ದು ಸವದಿ ಅಭಿಮಾನಿ ಬಳಗ ಪ್ರತಿ ದಿನ ಭಿಕ್ಷುಕರು, ವೃದ್ಧರು, ಅನಾಥರು, ನಿರಾಶ್ರಿತರು ಹಾಗೂ ರೋಗಿಗಳಿಗೆ ಅನ್ನ ನೀಡುತ್ತಾ ಸೇವಾ ಕಾರ್ಯ ಮಾಡುತ್ತಿದೆ.
ಕಳೆದ ಹದಿನೈದು ದಿನಗಳಿಂದ ಈ ಕಾರ್ಯ ಮಾಡುತ್ತಿದ್ದು ಕೋವಿಡ್‌ನಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರು ಇದ್ದಲ್ಲಿಗೆ ತೆರಳಿ ಸಿದ್ದು ಸವದಿ ಅಭಿಮಾನಿ ಬಳಗದ ಸದಸ್ಯರು ಆಹಾರದ ಪೊಟ್ಟಣ ನೀಡುತ್ತಾ ಅವರ ಬದುಕಿಗೆ ಆಶಾಕಿರಣವಾಗಿದ್ದಾರೆ. ಹಸಿವು ಎನ್ನುವ ಮನಸ್ಸುಗಳಿಗೆ ಆಹಾರ ನೀಡಿ ಅವರನ್ನು ಸಂತೈಸುವ ಕೆಲಸವನ್ನು ಅಭಿಮಾನಿ ಬಳಗದ ಯುವಕರು ಮಾಡುತ್ತಿರುವುದು ಶ್ಲಾಘನೀಯ. ಕೇವಲ ರಬಕವಿ- ಬನಹಟ್ಟಿ ನಗರಕ್ಕೆ ಸೀಮಿತವಾಗಿದ್ದ ಇದು ಕೇತ್ರದ ಪ್ರತಿ ನಗರಕ್ಕೂ ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಸಿದ್ದು ಸವದಿ ಅಭಿಮಾನಿ ಬಳಗದವರು ಪಕ್ಕದ ರಾಜ್ಯ ಮಹಾರಾಷ್ಟ್ರದ ಮೀರಜ್‌ನಲ್ಲಿ ಲಾಕ್‌ಡೌನ್ ಇರುವುದರಿಂದ ಈ ಭಾಗದಲ್ಲಿ ಅವಶ್ಯವಿರುವ ಔಷಧಿ ತರಿಸಿಕೊಡುವ ಕಾರ್ಯವನ್ನು ಮಾಡುತ್ತಿದೆ.