Advertisement

ಕೆಲವು ರಾಜ್ಯಗಳಲ್ಲಿ ಸೋಂಕು ಕ್ಷೀಣ : ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಏರಿಕೆ

03:19 AM May 12, 2021 | Team Udayavani |

ಹೊಸದಿಲ್ಲಿ: ಕೊರೊನಾ ಸೋಂಕಿನ ವಿನಾಶಕಾರಿ ಎರಡನೇ ಅಲೆಯು ಕ್ಷೀಣಿಸಲಾರಂಭಿಸಿದ್ದು, ದೇಶದ ದಿನವಹಿ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಇದರಿಂದಾಗಿ, ಸೋಂಕಿನ ಅಬ್ಬರಕ್ಕೆ ನಲುಗಿದ್ದ ದೇಶ ಸ್ವಲ್ಪಮಟ್ಟಿಗೆ ನಿರಾಳವಾದಂತಾಗಿದೆ.

Advertisement

ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಛತ್ತೀಸ್‌ಗಢ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ತಿಳಿಸಿದ್ದಾರೆ. 14 ದಿನಗಳ ಬಳಿಕ ದೇಶದ 24 ಗಂಟೆಗಳಲ್ಲಿನ ಸೋಂಕಿತರ ಸಂಖ್ಯೆ 3.29 ಲಕ್ಷಕ್ಕಿಳಿದಿದೆ ಎಂದೂ ಅವರು ಹೇಳಿದ್ದಾರೆ.

ಆದರೆ ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ, ಪಂಜಾಬ್‌ ಸೇರಿದಂತೆ 16 ರಾಜ್ಯಗಳಲ್ಲಿ ಸೋಂಕು ಏರುಗತಿಯಲ್ಲಿದೆ. 13 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ, 26 ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.15ರಷ್ಟಿದೆ ಎಂದೂ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

2ನೇ ಡೋಸ್‌ಗೆ ಆದ್ಯತೆ ನೀಡಿ: ಸದ್ಯಕ್ಕೆ ಲಸಿಕೆಯ 2ನೇ ಡೋಸ್‌ ಪಡೆಯುವವರಿಗೆ ಆದ್ಯತೆ ನೀಡಿ. ನಾವು ಹಂಚಿಕೆ ಮಾಡುವ ಲಸಿಕೆಯ ಪೈಕಿ ಶೇ.70ರಷ್ಟನ್ನು ಎರಡನೇ ಡೋಸ್‌ ಪಡೆಯುವವರಿಗೆಂದೇ ಮೀಸಲಿಡಿ. ಉಳಿದ ಶೇ.30ರಷ್ಟನ್ನು ಮೊದಲ ಡೋಸ್‌ಗೆ ಬಳಸಿ ಎಂದು ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಮಂಗಳವಾರ ಸೂಚನೆ ನೀಡಿದೆ. ಜತೆಗೆ, ಲಸಿಕೆ ಪೋಲಾಗುವುದನ್ನು ತಡೆಯುವಂತೆಯೂ ಆದೇಶಿಸಿದೆ. ಕೆಲವು ರಾಜ್ಯಗಳಲ್ಲಿ ಉತ್ತಮ ತರಬೇತಿ ಪಡೆದಿರುವ ಆರೋಗ್ಯ ಕಾರ್ಯಕರ್ತರು ಪ್ರತೀ ಬಾಟಲಿಯಿಂದಲೂ ಗರಿಷ್ಠ ಪ್ರಮಾಣದ ಲಸಿಕೆಯನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಈ ರೀತಿಯ ತರಬೇತಿ ಅಗತ್ಯವಿದೆ ಎಂದೂ ಕೇಂದ್ರ ಹೇಳಿದೆ.

ಗುಣಮುಖರ ಸಂಖ್ಯೆಯಲ್ಲಿ ಹೆಚ್ಚಳ
ದೇಶಾದ್ಯಂತ ಸೋಂಕು ಪ್ರಕರಣ ಕ್ರಮೇಣ ತಗ್ಗುತ್ತಿರುವಂತೆಯೇ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರದಿಂದ ಮಂಗಳವಾರಕ್ಕೆ 3.29 ಲಕ್ಷ ಮಂದಿಗೆ ಸೋಂಕು ದೃಢಪಟ್ಟು, 3,876 ಮಂದಿ ಸಾವಿಗೀಡಾಗಿದ್ದಾರೆ. ಇದೇ ಅವಧಿಯಲ್ಲಿ 3.56 ಲಕ್ಷ ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಗುಣಮುಖ ಪ್ರಮಾಣ ಶೇ.82.75ಕ್ಕೇರಿದ್ದು, ಈವರೆಗೆ 1,90,27,304 ಮಂದಿ ಚೇತರಿಸಿ ಕೊಂಡಂತಾಗಿದೆ. ಇದೇ ವೇಳೆ, ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 40,956 ಹೊಸ ಪ್ರಕರಣ ಪತ್ತೆಯಾಗಿದ್ದು, 793 ಮಂದಿ ಮೃತಪಟ್ಟಿದ್ದಾರೆ. 71,966 ಮಂದಿ ಡಿಸಾcರ್ಜ್‌ ಆಗಿದ್ದಾರೆ. ಮುಂಬಯಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, 24 ಗಂಟೆಗಳಲ್ಲಿ 7717 ಮಂದಿಗೆ ಸೋಂಕು ದೃಢಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next