ದೇವನಹಳ್ಳಿ: ಬೆಂಗಳೂರಿನಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಒತ್ತಡಕ್ಕೆ ಸಿಲುಕಿರುವ ಆರೋಗ್ಯ ಸೇವಾ ಮೂಲಸೌಕರ್ಯಕ್ಕೆ ಹೆಚ್ಚಿನ ನೆರವು ನೀಡುವುದಕ್ಕಾಗಿ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಗ್ರೂಪ್ ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 150 ಹಾಸಿಗೆಗಳ ಆಕ್ಸಿಜನ್ ಬೆಂಬಲ ಹೊಂದಿರುವ ಕೋವಿಡ್-19 ಚಿಕಿತ್ಸಾ ಕೇಂದ್ರ-ಕೋವ್-ಏಯ್ಡ ಬಿಎಲ್‌ಆರ್ ಸ್ಥಾಪಿಸಲು ನಿಧಿ ಪೂರೈಸಿದೆ.
ಈ ಕೇಂದ್ರ ಮೇ 18 ರಿಂದ ಕಾರ್ಯಾರಂಭ ಮಾಡಲಿದೆ. ಫೇರ್ ಫ್ಯಾಕ್ಸ್ ಚಾಲಿತ ಕೇಂದ್ರ ಇದಾಗಿದ್ದು, ಗಿವ್ ಇಂಡಿಯಾ ಜೊತೆಗೆ ಪಾಲುದಾರಿಕೆ ಹೊಂದಿ ರು ತ್ತದೆ. ಇದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಷನ್(ಕೆಐಎಎಫ್) ನಿಧಿ ನೆರವು ನೀಡಿದೆ. ಈ ಕೇಂದ್ರವನ್ನು ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಗ್ರೂಪ್ಸ್‌ನ ಹೂಡಿಕೆ ಕಂಪನಿಗಳಾದ ಕೆಐಎಎಫ್ ಮತ್ತು ಕ್ವೆಸ್‌ಕಾರ್ ಲಿಮಿಟೆಡ್ ನಿರ್ವಹಿಸಲಿವೆ.
ಈ ಚಿಕಿತ್ಸಾ ಕೇಂದ್ರ ಬೆಂಗಳೂರು ವಿಮಾನ ನಿಲ್ದಾಣದ ಸಾರಿಗೆ ಟರ್ಮಿನಲ್‌ಗಳ ಬಳಿ ಇದೆ. ಹಗುರ ವಾದ ಹೈಪಾಕ್ಷಿಯಾ (ಅಂಗಾಂಶಗಳ ಮಟ್ಟದಲ್ಲಿ ಸೂಕ್ತ ಅಕ್ಸಿಜನ್ ಪೂರೈಕೆಯಿಂದ ದೇಹದ ಅಥವಾ ದೇಹದ ಭಾಗ ವಂಚಿತವಾಗಿರುವ ಸ್ಥಿತಿ) ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಇದು ಸಜ್ಜಾಗಿದೆ. ಟ್ರಾÂನ್ಸಿಟ್ ಆಕ್ಸಿಜನ್ ಡೆಲಿವರಿ ಸೆಂಟರ್ ಆಗಿರುವಂತೆ ಈ ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದೆ. ಆಸ್ಪತ್ರೆಯೊಂದಕ್ಕೆ ಪ್ರವೇಶ ಲಭ್ಯವಾಗುವವರೆಗೆ ಆಮ್ಲಜನಕದ ಬೆಂಬಲ ಅಗತ್ಯವಿರುವ ರೋಗಿಗಳಿಗೆ ಬಹು ಅಗತ್ಯದ ಪರಿಹಾರ ಮತ್ತು ಚಿಕಿತ್ಸೆಯನ್ನು ಇದು ಪೂರೈಸಲಿದೆ. ಈ ಕೇಂದ್ರವು ಔಷಧಾಲಯ, ಪೆಥಾಲಜಿ ಘಟಕ, ನರ್ಸ್‌ಗಳ ಸ್ಟೇಷನ್, ವಿಶ್ರಾಂತಿ ಕೊಠಡಿಗಳು ಮತ್ತು ಭೋಜನ ಕೊಠಡಿಗಳೊಂದಿಗೆ ಸಜ್ಜಾಗಿದೆ. ಹಗಲು-ರಾತ್ರಿ ತುರ್ತು ಅಗತ್ಯಗಳನ್ನು ಪೂರೈಸಲು ಒಂದು ಆ್ಯಂಬುಲೆನ್ಸ್ ಇಲ್ಲಿ ಸಿದ್ಧವಾಗಿದೆ. ಡಾ| ನರೇಶ್ ಶೆಟ್ಟಿ, ಡಾ|ನಂದಕುಮಾರ್ ಜೈರಾಮ್ ಮತ್ತು ಡಾ| ಅಲೆಕ್ಸಾಂಡರ್ ಥಾಮಸ್ ಸೇರಿದಂತೆ ಪರಿಣತ ವೈದ್ಯರ ಸಮಿತಿಯು ಈ ಕೇಂದ್ರದ ಕಾರ್ಯನಿರ್ವಹಣೆಗೆ ತಾಂತ್ರಿಕ ನೆರವು ನೀಡಲಿದೆ.
ವೈದ್ಯರು, ದಾದಿಯರನ್ನು ಒಳಗೊಂಡಂತೆ ಸಿಬ್ಬಂದಿ ಬೆಂಬಲವನ್ನು ಕರ್ನಾಟಕ ಸರ್ಕಾರ ಪೂರೈಸಲಿದೆ. ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ ಲಿಮಿಟೆಡ್ ತನ್ನ ಅಂಗಸಂಸ್ಥೆಯಾದ ಫೇರ್ ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೋರೆಷನ್ ಮೂಲಕ ಈ ಕೇಂದ್ರಕ್ಕೆ ನಿಧಿ ನೆರವು ನೀಡಿದೆ. ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಚೇರ¾ನ್ ಪ್ರೇಮ್ ವತ್ಸಾ ಮಾತನಾಡಿ,ಕೋವಿಡ್-19 ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಉಂಟಾಗಿರುವ ಪ್ರಸ್ತುತ ಬಿಕ್ಕಟ್ಟಿನಿಂದ ನಮಗೆ ಬಹಳ ಬೇಸರವಾಗಿದೆ. ನಂಬಲಾಗದಷ್ಟು ಕಷ್ಟಕರ ವಾದ ಈ ಸಮಯವನ್ನು ದಾಟಿ ಸಾಗಲು ಭಾರತಕ್ಕೆ ಫೇರ್‌ಫ್ಯಾಕ್ಸ್ ನೆರವು ನೀಡಲು ಇಚ್ಛಿಸುತ್ತದೆ. ನಮ್ಮ ಈ ಬದ್ಧತೆ ಭಾರತಕ್ಕೆ ಮತ್ತು ಅದರ ಆರೋಗ್ಯ ಸೇವಾ ವ್ಯವಸ್ಥೆಗೆ ಸ್ವಲ್ಪಮಟ್ಟಿನ ಪರಿಹಾರ ಪೂರೈಸಲಿದೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.