ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯ ತೀವ್ರತೆ ಇಳಿಮುಖವಾಗುವ ಹಂತದಲ್ಲಿದೆ. ಆರು ತಿಂಗಳುಗಳಲ್ಲಿ ಅದು ಸಾಮಾನ್ಯ ಸಮಸ್ಯೆ (ಎಂಡೆಮಿಕ್) ಹಂತಕ್ಕೆ ಬರಲಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಿರ್ದೇಶಕ ಸುಜೀತ್ ಸಿಂಗ್ ತಿಳಿಸಿದ್ದಾರೆ.
“ಎನ್‌ಡಿಟಿವಿ’ ಜತೆಗೆ ಮಾತನಾಡಿದ ಅವರು, ಕೊರೊನಾ ತೀವ್ರತೆ ತಗ್ಗಿ, ಅದನ್ನು ನಿಭಾಯಿಸಲು ಸಾಧ್ಯವಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಲಿರುವುದರಿಂದ ದೇಶದ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವೂ ತಗ್ಗಲಿದೆ ಎಂದು ಹೇಳಿದ್ದಾರೆ. ಕೊರೊನಾದ ಹೊಸ ಪೀಳಿಗೆಯ ವೈರಾಣು ಹುಟ್ಟಿಕೊಂಡರೂ 3ನೇ ಅಲೆ ಸೃಷ್ಟಿಸುವಷ್ಟು ಪ್ರಬಲವಾಗಿರುವುದಿಲ್ಲ ಎಂದಿದ್ದಾರೆ.
ಪ್ರಯೋಗಕ್ಕೆ ಅನುಮತಿ: ರಷ್ಯಾ ನಿರ್ಮಿತ ಸ್ಫುಟ್ನಿಕ್ ಲೈಟ್ ಸದ್ಯದಲ್ಲೇ ಭಾರತೀಯರಿಗೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿವೆ. ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು, ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಅನುಮತಿ ಪಡೆದಿರುವ ಪನೇಶಿಯಾ ಬಯೋಟೆಕ್ ಕಂಪನಿಗೆ ಅನುಮತಿ ನೀಡಲಾಗಿದೆ. ಮತ್ತೂಂದೆಡೆ, ಅಮೆರಿಕದ “ಜಾನ್ಸನ್ ಆ್ಯಂಡ್ ಜಾನ್ಸನ್’ ಕಂಪನಿಯ ಲಸಿಕೆಯ ಗುಣಮಟ್ಟ ಹಾಗೂ ಸುರಕ್ಷತೆಯ ಪರೀಕ್ಷೆಗಾಗಿ ಕಸೌಲಿಯಲ್ಲಿರುವ ಪ್ರಯೋಗಾಲಯಕ್ಕೆ ಲಸಿಕೆಯ 35 ಲಕ್ಷ ಡೋಸ್‌ಗಳನ್ನು ಕಳುಹಿಸಲಾಗಿದೆ.
27 ಸಾವಿರ ಹೊಸ ಕೇಸ್: ದೇಶದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8ರವರೆಗಿನ ಅವಧಿಯಲ್ಲಿ, ಹೊಸದಾಗಿ 27,176 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 284 ಸೋಂಕಿತರು ಸಾವನ್ನಪ್ಪಿದ್ದಾರೆ.
ಜಗತ್ತಿನಿಂದ ಕೊರೊನಾ ಮರೆಯಾಗಲಾರದು. ಹೆಚ್ಚು ಲಸಿಕೆ ನೀಡುತ್ತಿರುವುದರಿಂದ ನಾವು ಹರ್ಡ್ ಇಮ್ಯುನಿಟಿ ಸಾಧಿಸಿದ್ದೇವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೊರೊನಾ, ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿ ಮುಂದುವರಿಯುತ್ತದೆ.
–ಮೈಕ್ ರ್ಯಾನ್, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ವಾಹಕ