Advertisement
ಕೋವಿಡ್ ದೇಶ-ರಾಜ್ಯದಲ್ಲಿ ತಾಂಡವಾಡುವ ಮೊದಲೇ ರಾಜ್ಯದಲ್ಲಿನ ಕೊಳ್ಳೆಗಾಲ, ಬೈಲುಕುಪ್ಪೆ , ಹುಣಸೂರು ಹಾಗೂ ಮುಂಡಗೋಡನಲ್ಲಿರುವ ಟಿಬೆಟಿಯನ್ ಸಮುದಾಯ, ಬೆಂಗಳೂರಿನಲ್ಲಿ ವಾಸವಾಗಿರುವ ಟಿಬೆಟಿಯನ್ನರು ಮಹಾಮಾರಿ ವಿರುದ್ಧ ಜಾಗೃತಿ, ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ. ಚೀನಾದ ಪೂರ್ಣ ಚಿತ್ರಣ ಅರಿತಿರುವ ಟಿಬೆಟಿಯನ್ನರು ಸರಕಾರಗಳು ಲಾಕ್‌ಡೌನ್ ಘೋಷಣೆ ಮೊದಲೇ, ರಾಜ್ಯದಲ್ಲಿನ ಕ್ಯಾಂಪ್ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಗತ್ಯ ಜಾಗೃತಿ-ತಯಾರಿ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.
Related Articles
Advertisement
ಟಿಬೆಟಿಯನ್ನರ ಹೊಸ ವರ್ಷ ಆಚರಣೆಗೆಂದು ಫೆಬ್ರವರಿಯಲ್ಲಿ ಮುಂಡಗೋಡ ಪುನರ್ವಸತಿ ಕೇಂದ್ರಗಳಿಗೆ ಆಗಮಿಸಿದ್ದ ವಿವಿಧ ದೇಶಗಳ 76 ಜನರು ಲಾಕ್‌ಡೌನ್‌ನಿಂದ ಇಲ್ಲಿಯೇ ಉಳಿಯಬೇಕಾಗಿ ಬಂದಿದ್ದರಿಂದ ಅವರಿಗೆ ಪ್ರತ್ಯೇಕವಾಗಿ ವಾಸ್ತವ್ಯ ವ್ಯವಸ್ಥೆ ಮೂಲಕ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಪುನರ್ವಸತಿ ಕೇಂದ್ರಗಳಲ್ಲಿನ ಹಾಸ್ಟೆಲ್ ಇನ್ನಿತರ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಜತೆಗೆ ಒಂದು ವೇಳೆ ಅತಿಗಣ್ಯ ವ್ಯಕ್ತಿಗಳು ಕ್ವಾರಂಟೈನ್‌ಗೆ ಅವರು ಬಂದು ಉಳಿದುಕೊಳ್ಳುವುದಕ್ಕೂ ಎಲ್ಲ ಸೌಲಭ್ಯಗಳುಳ್ಳ ವಿಶೇಷ ವ್ಯವಸ್ಥೆಯ ಕೋಣೆಗಳನ್ನು ಸಿದ್ಧಪಡಿಸಲಾಗಿದೆ.
76 ವಿದೇಶಿಯರು ಸೇರಿದಂತೆ ಟಿಬೆಟಿಯನ್ ಪುನರ್ವಸತಿ ಕೇಂದ್ರಗಳಲ್ಲಿರುವ ಎಲ್ಲ ನಿರಾಶ್ರಿತರು, ಬೌದ್ಧ ಸನ್ಯಾಸಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿತ್ತು. ಮುಂಡಗೋಡದಲ್ಲಿನ 11 ಕ್ಯಾಂಪ್‌ಗ್ಳಿಗೂ ಜನರ ತಪಾಸಣೆಗೆ ಥರ್ಮಲ್ ಸ್ಕ್ರೀನಿಂಗ್ ಕಿಟ್‌ಗಳನ್ನು ನೀಡಲಾಗಿದೆ. ಸಂಕಷ್ಟ ಸಂದರ್ಭದಲ್ಲಿ ನಮಗೆ ರಕ್ಷಣೆ ನೀಡಿದ, ಆಶ್ರಯ ನೀಡಿದ ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ. ನಮಗೆ ರಕ್ಷಣೆ ನೀಡಿದ ದೇಶಕ್ಕೆ ಸಂಕಷ್ಟ ಎದುರಾದಾಗ ನಮ್ಮ ಶಕ್ತಿ ಮೀರಿ ಸಹಾಯ ಮಾಡುವುದು, ಸಾರ್ಥಕ ಸೇವೆಯಲ್ಲಿ ತೊಡಗುವುದು ನಮ್ಮೆಲ್ಲರ ಕರ್ತವ್ಯ. ಜತೆಗೆ ಭಗವಾನ ಬುದ್ಧ ಸಾರಿದ ಕರುಣೆಯ ಸಾರದ ಅಡಿಯಲ್ಲೇ ನಾವು ಸೇವಾ ಕಾರ್ಯದಲ್ಲಿ ತೊಡಗಿದ್ದೇವೆ ಎಂಬುದು ರಾಜ್ಯದಲ್ಲಿನ ಐದು ಟಿಬೆಟಿಯನ್ ಪುವರ್ನವಸತಿ ಕೇಂದ್ರಗಳಲ್ಲಿನ ಟಿಬೆಟಿಯನ್ನರ ಅನಿಸಿಕೆ.
ದೇಶದಲ್ಲಿನ ಟಿಬೆಟಿಯನ್ ಸಮುದಾಯ ಕೋವಿಡ್ ವಿರುದ್ಧ ಭಾರತೀಯರ ಹೋರಾಟದಲ್ಲಿ ತಮ್ಮದೇ ವಿಶಿಷ್ಟ ರೀತಿಯ ಸೇವೆಯೊಂದಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಕೇಂದ್ರಗಳಲ್ಲಿ ಶಿಸ್ತುಬದ್ಧ ಜಾಗೃತಿ, ಸಂರಕ್ಷಣೆ ಅಲ್ಲದೆ, ನೆರೆಹೊರೆಯ ಗ್ರಾಮಗಳ ಜನರಿಗೆ ಆಹಾರಧಾನ್ಯ ಕಿಟ್, ಔಷಧಿ ಇನ್ನಿತರ ನೆರವು ನೀಡಿದ್ದು, ಭಾರತದ ಬಗ್ಗೆ ಅವರಲ್ಲಿರುವ ಗುರುಭಕ್ತಿಯನ್ನು ಈ ರೂಪದಲ್ಲಿ ಸಮರ್ಪಿಸಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.-ಅಮೃತ ಜೋಶಿ, ಸಹ ಸಂಯೋಜಕ, ಕೋರ್ ಗ್ರುಪ್ ಫಾರ್ ಟಿಬೆಟಿಯನ್ ಕಾಸ್.
ಮುಂಡಗೋಡ ಟಿಬೆಟಿಯನ್ ಪುರ್ವಸತಿ ಕೇಂದ್ರಗಳಲ್ಲಿನ ಟಿಬೆಟಿಯನ್ನರು ಕೋವಿಡ್ ತಡೆ ಹಾಗೂ ನೆರವು ಕಾರ್ಯದಲ್ಲಿ ತೋರಿದ ಕಾರ್ಯ, ಸಹಕಾರ ಶ್ಲಾಘನೀಯ. ಮುಂಡಗೋಡ ತಾಲೂಕಿನಲ್ಲಿ ಸುಮಾರು 3,500ಕ್ಕೂ ಅಧಿಕ ಆಹಾರ ಕಿಟ್‌ಗಳನ್ನು ತಾಲೂಕು ಆಡಳಿತದ ಸಹಕಾರದೊಂದಿಗೆ ವಿತರಿಸಿದ್ದಾರೆ. ಕ್ಯಾಂಪ್‌ಗ್ಳಲ್ಲಿ ಕೊರೊನಾ ತಡೆ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮೂಲಕ ಅವರು ಸೇಫ್ ಆಗಿದ್ದಾರೆ. ಜತೆಗೆ ತಾಲೂಕು ಆಡಳಿತಕ್ಕೂ ನಿತ್ಯ ವರದಿ ನೀಡುತ್ತಿದ್ದಾರೆ. – ಶ್ರೀಧರ ಮುಂದಲಮನೆ, ತಹಶೀಲ್ದಾರ್, ಮುಂಡಗೋಡ.
-ಅಮರೇಗೌಡ ಗೋನವಾರ