ಮುಂಬಯಿ, ಮೇ 20: ಕೋವಿಡ್ ಹಿನ್ನೆಲೆ ಮುಂಬಯಿ ನಗರದಲ್ಲಿ ಸಾವಿನ ಸಂಖ್ಯೆ 800 ಗಡಿ ದಾಟಿದ್ದು, ಮಂಗಳ ವಾರ ಒಂದೇ ದಿನ 43 ಸಾವುಗಳು ವರದಿಯಾಗಿವೆ.
ಈ 43 ಸಾವುಗಳಲ್ಲಿ ಹದಿನೈದು ಮೇ 6ರಿಂದ 15ರ ನಡುವೆ ನಡೆದಿದ್ದು ಆದರೆ ನಿನ್ನೆ ಎಣಿಕೆಗೆ ಇವನ್ನು ಸೇರಿಸಲಾಗಿದೆ. ಕಳೆದ ಏಳು ದಿನಗಳಲ್ಲಿ ಮುಂಬಯಿಯಲ್ಲಿ ರಾಜ್ಯದ ಒಟ್ಟು ಶೇ. 30ರಷ್ಟು ಸಾವುಗಳು ದಾಖಲಾಗಿದೆ. ಮುಂಬಯಿ ಯಲ್ಲಿ ಒಟ್ಟು ಪ್ರಕರಣಗಳು ಈಗ 22,000 ಗಡಿ ದಾಟಿದೆ. ಕೋವಿಡ್ -19ರ ಕಾರಣ ದಿಂದಾಗಿ ಸಾವುಗಳು 800ಕ್ಕೆ ತಲುಪಿದ್ದು ಅವುಗಳಲ್ಲಿ ಮೇ 13 ಮತ್ತು 19ರ ನಡುವೆ 244 ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶ ತಿಳಿಸಿದೆ.
ಸೋಂಕಿನಿಂದ ನಗರವು ಗಂಟೆಗೆ ಸರಾಸರಿ ಒಂದು ಸಾವಿಗೆ ಸಾಕ್ಷಿಯಾಗಿದೆ. ಇದೇ ರೀತಿ ರಾಜ್ಯವು ಗಂಟೆಗೆ ಸರಾಸರಿ ಎರಡು ಸಾವುಗಳು ವರದಿಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ, ಮೇ 10ರಿಂದ 18ರ ವರೆಗೆ ರಾಜ್ಯದಲ್ಲಿ 417 ಸಾವು ದಾಖಲಾಗಿದ್ದು, ಅದರಲ್ಲಿ 249 ಮಂದಿ ಮುಂಬಯಿಯವರಾಗಿದ್ದಾರೆ ಎನ್ನಲಾಗಿದೆ. ಮೇ 18ರಂದು ರಾಜ್ಯದ ಸೋಂಕಿತ ಸಂಖ್ಯೆ 35,058ಕ್ಕೆ ತಲುಪಿದ್ದು, ಒಂದೆ ದಿನದಲ್ಲಿ 12,887 ಹೊಸ ಪ್ರಕರಣಗಳು ವರದಿಯಾಗಿವೆ. ಮುಂಬಯಿಯಲ್ಲಿ ಅದೇ ದಿನ 1,411 ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಒಟ್ಟು 22,746 ಪ್ರಕರಣಗಳು ದಾಖಲಾಗಿವೆ.
ಹಾಸಿಗೆಗಳ ಹೆಚ್ಚಳಕ್ಕೆ ಯೋಜನೆ ಬಿಎಂಸಿ ಮಾಹಿತಿಯ ಪ್ರಕಾರ, ಮೀಸಲಾದ ಕೋವಿಡ್ ಆಸ್ಪತ್ರೆಗಳಲ್ಲಿ (ಡಿಸಿಎಚ್) 5,030 ಹಾಸಿಗೆಗಳಿದ್ದು, ಇದರಲ್ಲಿ 38 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳ (ಡಿಸಿಎಚ್‌ಸಿ) ಸಾಮರ್ಥ್ಯವು 19 ಆಸ್ಪತ್ರೆಗಳಲ್ಲಿ 1,100 ಹಾಸಿಗೆಗಳನ್ನು ಹೊಂದಲಾಗಿದೆ. ಮಂಗಳವಾರ ಬಿಎಂಸಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ನಾಗರಿಕ ಸಂಸ್ಥೆ ಡಿಸಿಎಚ್ ಮತ್ತು ಡಿಸಿಎಚ್‌ಸಿಯ 10,000 ಹಾಸಿಗೆಗಳನ್ನು ಸಾಧಿಸುವ ಗುರಿ ಹೊಂದಿದೆ. ಪ್ರಸ್ತುತ ಲಭ್ಯವಿರುವ ಐಸಿಯು 535 ಹಾಸಿಗೆಗಳಿದ್ದು, ಇದನ್ನು 1,000 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದೆ.