Advertisement

ಮದುವೆಗೆ ಕಣ್ಗಾವಲು : 2ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಸರಕಾರದಿಂದ ಕ್ರಮ

01:43 AM Feb 23, 2021 | Team Udayavani |

ಬೆಂಗಳೂರು: ನೆರೆಯ ಮಹಾರಾಷ್ಟ್ರ, ಕೇರಳಗಳಲ್ಲಿ ಕೊರೊನಾ ಹೆಚ್ಚುತ್ತಿರುವ ನಡುವೆ ರಾಜ್ಯದಲ್ಲೂ 2ನೇ ಅಲೆಯ ಆತಂಕ ಎದುರಾಗಿದೆ.

Advertisement

ಸದ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗದಿದ್ದರೂ ನೆರೆ ರಾಜ್ಯಗಳಲ್ಲಿ ಏರಿಕೆ ಆತಂಕ ತಂದಿದೆ. ಹೀಗಾಗಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳ ಜಾರಿಗೆ ಮುಂದಾಗಿದೆ. ಜನಸಂದಣಿ ತಪ್ಪಿಸಲು ಮತ್ತು ಸಾಮಾಜಿಕ ಅಂತರ ಪಾಲನೆ ಖಾತರಿಗಾಗಿ ಸರಕಾರವು ಮದುವೆ ಸಮಾರಂಭಗಳ ಮೇಲೆ ಕಣ್ಣಿರಿಸಲಿದೆ.

ಈ ಮಧ್ಯೆ ರಾಜ್ಯಕ್ಕೆ 2ನೇ ಅಲೆಯ ಆತಂಕ ಇಲ್ಲ ಎಂದು ಆರೋಗ್ಯ ವಲಯದ ತಜ್ಞರು ಅಭಯ ನೀಡಿದ್ದಾರೆ. ಅದರಿಂದ ಪಾರಾಗುವುದು ಜನರ ಕೈಯಲ್ಲೇ ಇದ್ದು, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ಸುಧಾಕರ್‌ ಸಭೆ
2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಆರೋಗ್ಯ ಸಚಿವ ಡಾ| ಸುಧಾಕರ್‌, ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಮದುವೆಗಳಲ್ಲಿ ಒಬ್ಬೊಬ್ಬ ಮಾರ್ಷಲ್‌ರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಸಮಾರಂಭದಲ್ಲಿ 500ಕ್ಕಿಂತ ಹೆಚ್ಚು ಜನ ಸೇರಬಾರದು. ಎಲ್ಲರೂ ಮಾಸ್ಕ್ ಧರಿಸಬೇಕು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದರು.

Advertisement

ಲಾಕ್ಡೌನ್‌ ಸ್ಥಿತಿ ಬೇಡ
ಸೋಂಕು ಹೆಚ್ಚಾದರೆ ಮತ್ತೆ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಆಗಿದ್ದು, ಅದೇ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಒಂದೇ ಸ್ಥಳದಲ್ಲಿ 5 ಮಂದಿಗೆ ಸೋಂಕು ತಗಲಿದರೆ ಅದನ್ನು ಮತ್ತೆ ಕಂಟೋನ್ಮೆಂಟ್‌ ವಲಯ ಎಂದು ಘೋಷಿಸಲಾಗುವುದು. ಜನತೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದು ಕೊಳ್ಳಬೇಕು. ಮಾರ್ಚ್‌ನಿಂದ ಸಾಮಾನ್ಯ ಜನರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರಕಾರ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದರು.

2ನೇ ಅಲೆ ಇಲ್ಲ: ತಜ್ಞರು
ಒಂದು ಪ್ರದೇಶದಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ನಿರಂತರವಾಗಿ 2 ವಾರಗಳ ಮಟ್ಟಿಗೆ ಹೆಚ್ಚಿ ಪರಿಸ್ಥಿತಿ ನಿಯಂತ್ರಣ ಮೀರಿದರೆ ಅದನ್ನು 2ನೇ ಅಲೆ ಎನ್ನುತ್ತಾರೆ. ಸದ್ಯ ಬೆಂಗಳೂರು ಮತ್ತು ಮಂಗಳೂರಿನ ನರ್ಸಿಂಗ್‌ ಎರಡು ಕಾಲೇಜು, ಅಪಾರ್ಟ್‌ಮೆಂಟ್‌ ಸಹಿತ ನಾಲ್ಕು ಕಡೆ ಮಾತ್ರ ಪ್ರಕರಣಗಳು ಕೆಲವು ದಿನಗಳ ಮಟ್ಟಿಗೆ ಹೆಚ್ಚಾಗಿ, ಸದ್ಯ ನಿಯಂತ್ರಣಕ್ಕೆ ಬಂದಿವೆ. ಇದು ಕೊರೊನಾ ಎರಡನೇ ಅಲೆ ಅಲ್ಲ. ಇನ್ನು ರಾಜ್ಯದಲ್ಲಿ ಸೋಂಕು ಪ್ರಕರಣಗಳು, ಸಾವು ನಿಯಂತ್ರಣ ಮಟ್ಟದಲ್ಲಿವೆ. ಜನರು ನಿಯಮ ಪಾಲನೆ ಮಾಡುವ ಜತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವೈರಾಣು ತಜ್ಞ, ಕೊರೊನಾ ನಿಯಂತ್ರಣ ಸಲಹಾ ಸಮಿತಿ ಸದಸ್ಯ ಡಾ| ವಿ. ರವಿ ಹೇಳಿದ್ದಾರೆ.

ಜನರಿಗೆ ತಜ್ಞರ ಸಲಹೆಗಳು
– ಕಾರ್ಯಕ್ರಮ, ಹಬ್ಬ, ಜಾತ್ರೆ, ಮದುವೆಗಳಲ್ಲಿ ಹೆಚ್ಚು ಜನ ಸೇರಬೇಡಿ.
– ಜ್ವರ, ಶೀತ, ಉಸಿರಾಟ ಸಮಸ್ಯೆ ಇದ್ದರೆ ನಿರ್ಲಕ್ಷ é ಮಾಡದೆ ತಪಾಸಣೆ ಮಾಡಿಸಿಕೊಳ್ಳಿ.
– ಕೊರೊನಾ ಪರೀಕ್ಷೆ ಉಚಿತ ವಾಗಿದ್ದು, ಪರೀಕ್ಷೆಗೆ ಒಳಗಾಗಿ ಖಚಿತಪಡಿಸಿಕೊಳ್ಳಿ.
– ಸೋಂಕು ಹೆಚ್ಚಿರುವ ಸ್ಥಳಗಳಿಂದ ಬರುವವರು ಸ್ವಯಂ ಪರೀಕ್ಷೆ, ನಿಯಂತ್ರಣಕ್ಕೆ ಮುಂದಾಗಿ.
– ಅನಗತ್ಯ ಗಾಬರಿ ಬದಲು ಮಾಸ್ಕ್, ಸಾಮಾಜಿಕ ಅಂತರ ಅಂಶಗಳನ್ನು ಶ್ರದ್ಧೆಯಿಂದ ಪಾಲಿಸಿ.

Advertisement

Udayavani is now on Telegram. Click here to join our channel and stay updated with the latest news.

Next