Advertisement

ಬೊಮ್ಮನಹಳ್ಳಿ ವಲಯ: ಪ್ರತಿ ವಾರ್ಡ್‍ಗಳಲ್ಲಿ ಕೋವಿಡ್ 19 ವಾರ್ ರೂಂ ಸ್ಥಾಪನೆ

08:00 PM Jul 24, 2020 | Hari Prasad |

ಬೆಂಗಳೂರು: ಕೋವಿಡ್ 19 ನಿಯಂತ್ರಣದ ಸಂಬಂಧದಲ್ಲಿ ಬೊಮ್ಮನಹಳ್ಳಿ ವಲಯದ ಎಲ್ಲ ವಾರ್ಡ್‍ಗಳಲ್ಲಿಯೂ ಕೊವಿಡ್ ವಾರ್ ರೂಂ ಆರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್‍ಕುಮಾರ್ ಸೂಚಿಸಿದ್ದಾರೆ.

Advertisement

ಶುಕ್ರವಾರ ಬೊಮ್ಮನಹಳ್ಳಿ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಬೊಮ್ಮನಹಳ್ಳಿ ವಲಯದ 3 ಲಕ್ಷ ಮನೆಗಳಿಗೆ ಸೋಮವಾರದ ಒಳಗೆ ಕೋವಿಡ್ ಜಾಗೃತಿ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವಾರ್ಡ್‍ನಲ್ಲಿ ಸ್ಥಾಪನೆಯಾಗುವ ಕೋವಿಡ್ ವಾರ್ ರೂಂನಲ್ಲಿ ಸಾರ್ವಜನಿಕರು ಕೋವಿಡ್ ಸಂಬಂಧದಲ್ಲಿ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು. ಹಾಗೆಯೇ ವಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೈಸ್ಪೀಡ್ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಲಯದ ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರಿಗೆ ಸಚಿವರು ಸೂಚಿಸಿದರು.

ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ, ಅರಕೆರೆ ಮತ್ತು ಕೋಣನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಸಂರಕ್ಷಣಾ ಕ್ರಮಗಳನ್ನು ಪರಿಶೀಲನೆ ನಡೆಸಿ ವೈದ್ಯರು ಹಾಗೂ ಸಿಬ್ಬಂದಿಗೆ ಕೆಲ ಸೂಚನೆ ನೀಡಿದ ಸುರೇಶ್ ಕುಮಾರ್, ಚಿಕಿತ್ಸೆಗಾಗಿ ಬಂದಿದ್ದ  ಸಾರ್ವಜನಿಕರೊಂದಿಗೆ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಚಿಕಿತ್ಸೆ ಕುರಿತಂತೆ ಸಂವಾದ ನಡೆಸಿದರು.

ವಲಯದ ಹೊಂಗಸಂದ್ರ ಮತ್ತು ಅಂಜನಾಪುರ ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ ನೀಡಿ ಅಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಕಂಟೈನ್‍ಮೆಂಟ್ ವಲಯದ ಜನರಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ಥಳದಲ್ಲಿದ್ದ  ಬಿಬಿಎಂಪಿ ಅಧಿಕಾರಿಗಳಿಗೆ  ಸಚಿವರು ಸೂಚಿಸಿದರು. ಇದೇ ವೇಳೆ ಟೊಯೋಟ ಕಂಪನಿಯ ವತಿಯಿಂದ ಉಚಿತವಾಗಿ ನೀಡಲಾದ ಆಂಬುಲೆನ್ಸ್ ಸೇವೆಗೆ ಸಚಿವರು ಚಾಲನೆ ನೀಡಿದರು.

Advertisement

ಕೆಲ ಬಿಬಿಎಂಪಿ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದಕ್ಕೆ ಸಿಡಿಮಿಡಿಗೊಂಡ ಸಚಿವರು, ಅಂತಹ ಅಧಿಕಾರಿಗಳಿಗೆ ನೊಟೀಸ್ ನೀಡಬೇಕೆಂದು ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣರಿಗೆ ಸೂಚಿಸಿದರು. ಸಚಿವರು ಬೊಮ್ಮನಹಳ್ಳಿ ವಲಯ ಉಸ್ತುವಾರಿ ವಹಿಸಿಕೊಂಡ 14 ದಿನಗಳಲ್ಲಿ ಈ ವಲಯಕ್ಕೆ ಇದು ಸಚಿವರ ಏಳನೇ ಭೇಟಿಯಾಗಿದೆ.

ಸಚಿವರೊಂದಿಗೆ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಉಸ್ತುವಾರಿ ಐಎಎಸ್ ಅಧಿಕಾರಿ ಮಣಿವಣ್ಣನ್, ಬಿಬಿಎಂಪಿ ಹಾಗೂ ಪೋಲೀಸ್ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next