Advertisement

ಭಾರತದ ಬಾವಲಿಗಳ 2 ತಳಿಗಳಲ್ಲಿ ಕೋವಿಡ್ 19 ವೈರಸ್ ಪತ್ತೆ

06:39 PM Apr 15, 2020 | Hari Prasad |

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇದೇ ಮೊದಲ ಬಾರಿಗೆ ಭಾರತದ ಬಾವಲಿಗಳ ಎರಡು ತಳಿಗಳಲ್ಲಿ ಕೋವಿಡ್ ವೈರಸ್‌ ಇರುವುದು ದೃಢಪಟ್ಟಿದೆ. ಇಂಡಿಯನ್‌ ಫ್ಲೈಯಿಂಗ್‌ ಫಾಕ್ಸ್‌ ಮತ್ತು ರೋಸೆಟ್ಟಸ್‌ ಎಂಬ ತಳಿಗಳ ಬಾವಲಿಗಳಲ್ಲಿ ಕೋವಿಡ್ 19 ವೈರಸ್ ಇರುವ ಆಘಾತಕಾರಿ ಮಾಹಿತಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

Advertisement

ಕರ್ನಾಟಕ, ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಿಂದ ಈ ತಳಿಗಳ 25 ಬಾವಲಿಗಳ ಗಂಟಲು ದ್ರಾವಣವನ್ನು ಸಂಗ್ರಹಿಸಿ, ಅವುಗಳನ್ನು ರಿವರ್ಸ್‌ – ಟ್ರಾನ್ಸ್‌ಕ್ರಿಪ್ಶನ್‌ ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಬಾವಲಿ ಕೋವಿಡ್ 19 ವೈರಸ್ ನ (ಬಿಟಿ- ಕೋವ್‌) ಅಸ್ತಿತ್ವವು ಬೆಳಕಿಗೆ ಬಂದಿದೆ. ಆದರೆ, ಬಾವಲಿಗಳಲ್ಲಿರುವ ಈ ಕೋವಿಡ್ 19 ವೈರಸ್ ಮಾನವನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪುಣೆಯ ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್ ವೈರಾಲಜಿಯ (ಎನ್‌ ಐವಿ) ವಿಜ್ಞಾನಿಗಳ ತಂಡವೂ ಈ ಅಧ್ಯಯನದಲ್ಲಿ ಭಾಗಿಯಾಗಿತ್ತು. ಇನ್ನೂ ಎರಡು ತಳಿಗಳ ಬಾವಲಿಗಳನ್ನೂ ಪರೀಕ್ಷಿಸಲಾಗುತ್ತಿದ್ದು, ಅವುಗಳ ವರದಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ಹೇಳಿವೆ.

2018ರಲ್ಲಿ ಕೇರಳದಲ್ಲಿ ನಿಫಾ ವೈರಸ್‌ ಸುದ್ದಿ ಮಾಡಿದಾಗಲೇ, ಬೇರೆ ಬೇರೆ ರಾಜ್ಯಗಳಿಂದ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಆರಂಭಿಸಲಾಗಿತ್ತು. ಇದೀಗ ಕೋವಿಡ್ 19 ವೈರಸ್ ಕೂಡ ಜಗತ್ತಿನಾದ್ಯಂತ ಭಾರೀ ಸಾವು ನೋವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಈ ಅಧ್ಯಯನವು ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next