ಕೋವಿಡ್ 19 ವೈರಸ್ ಸೋಂಕಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮಾ.22ರಂದು ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ಬೆಂಬಲ ನೀಡುವಂತೆ ಸಮಾಜದ ವಿವಿಧ ವರ್ಗಗಳ ಮುಖಂಡರು ಕೋರಿದ್ದಾರೆ. ಇಂಥ ಸಂಕಷ್ಟಮಯ ಸನ್ನಿವೇಶಗಳಲ್ಲಿ ಸರಕಾರದ ನಿಲುವಿಗೆ ಬೆಂಬಲ ನೀಡಬೇಕು. ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ಬಾಲಿವುಡ್‌ನ ತಾರೆಯರಾದ ಮಾಧುರಿ ದೀಕ್ಷಿತ್, ಶಾರುಖ್ ಖಾನ್, ಬಹುಭಾಷಾ ನಟ ಕಮಲ್ ಹಾಸನ್ ಸೇರಿದಂತೆ ಪ್ರಮುಖರು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ಜನತಾ ಕರ್ಫ್ಯೂನ ಪ್ರಧಾನ ಉದ್ದೇಶವೇ ಸೋಂಕು ತಡೆಗಟ್ಟುವುದೇ ಆಗಿದೆ. ಹೀಗಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಅಂಶವನ್ನು ನಾವು ಮುಂದುವರಿಸಬೇಕು. ಸುರಕ್ಷಿತರಾಗಿರಿ ಮತ್ತು ಆರೋಗ್ಯ ವಂತರಾಗಿ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ನಾನು ಬೆಂಬಲ ನೀಡುತ್ತೇನೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸಲಹೆಯಂತೆ ವೈರಸ್ ನಿಯಂತ್ರಣಕ್ಕೆ ಎಲ್ಲರೂ ಸಹಕಾರ, ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಬಾಲಿವುಡ್‌ನ ಇನ್ನಿತರ ಪ್ರಮುಖರಾಗಿರುವ ಅಮಿತಾಭ್ ಬಚ್ಚನ್, ಕರಣ್ ಜೋಹರ್, ಅಕ್ಷಯ ಕುಮಾರ್, ಹೃತಿಕ್ ರೋಶನ್ ಸೇರಿದಂತೆ ಪ್ರಮುಖರು ಇದೇ ರೀತಿಯ ಮನವಿಯನ್ನು ದೇಶವಾಸಿಗಳಿಗೆ ಮಾಡಿದ್ದಾರೆ.
ದೇಶಾದ್ಯಂತ ಬಂದ್: ದೇಶಾದ್ಯಂತ ವರ್ತಕರು ಕೂಡ ಮಾ. 22ರಂದು ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿ ವಹಿವಾಟು ಬಂದ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಖಿಲ ಭಾರತ ವರ್ತಕರ ಒಕ್ಕೂಟ ಹೇಳಿದೆ. ಹೊಸದಿಲ್ಲಿಯಲ್ಲಿ 15 ಲಕ್ಷ ಮಂದಿ ವ್ಯಾಪಾರಸ್ಥರು ಮತ್ತು 35 ಲಕ್ಷ ಮಂದಿ ಉದ್ಯೋಗಿಗಳು ಭಾಗವಹಿಸಲಿದ್ದಾರೆ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಹೇಳಿದ್ದಾರೆ. ಇದರ ಜತೆಗೆ ರಾಷ್ಟ್ರ ರಾಜಧಾನಿ ಪ್ರದೇಶಾದ್ಯಂತ ಮೆಟ್ರೋ ರೈಲು ಸೇವೆ ರದ್ದಾಗಲಿದೆ.