ಕಲಬುರಗಿ: ದೇಶದಲ್ಲಿ ಮೊದಲು ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ವೃದ್ಧನಿಂದ ಸೋಂಕು ಪೀಡಿತಳಾಗಿದ್ದ ಆತನ ಮಗಳು ಸಂಪೂರ್ಣವಾಗಿ ಗುಣಮುಖಗಳಾಗಿದ್ದು, ಎರಡು ಮತ್ತು ಮೂರನೇ ಬಾರಿಯ ಪ್ರಯೋಗಾಲಯದ ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ದೃಢಪಟ್ಟಿದೆ.
76 ವರ್ಷದ ವೃದ್ಧ ಮಾ.10ರಂದು ಮೃತಪಟ್ಟಿದ್ದ. ಸಾವಿಗೆ ಮುನ್ನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದ ಆತನ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಮಾ.12ರಂದು ಬಂದಿತ್ತು. ಈ ವರದಿ ಕೊರೊನಾ ಸೋಂಕಿನಿಂದಲೇ ವೃದ್ಧ ಸಾವನ್ನಪ್ಪಿದ್ದಾನೆ ಎಂದು ಖಚಿತ ಪಡಿಸಿತ್ತು.
ವೃದ್ಧನೊಂದಿಗೆ ನೇರ ಸಂಪರ್ಕದಲ್ಲಿದ್ದ ಆತನ 45 ವರ್ಷದ ಪುತ್ರಿಯಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಈಕೆಯನ್ನು ಇಎಸ್ಐ ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾ.15ರಂದು ಬಂದಿದ್ದ ಈ ವರದಿ ಪಾಸಿಟಿವ್ ಎಂದು ಬಹಿರಂಗಪಡಿಸಿತ್ತು.
ನಂತರದಲ್ಲಿ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. 14 ದಿನ ಐಸೋಲೇಶನ್ ನಂತರ ಮತ್ತೆ ಈಕೆಯ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಈ ವರದಿಯಲ್ಲಿ ಸೋಂಕು ನೆಗೆಟಿವ್ ಎಂದು ಬಂದಿದೆ. ಅಲ್ಲದೇ, ಇದಾದ 24 ಗಂಟೆಯೊಳಗೆ ಮೂರನೇ ಬಾರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲೂ ಸೋಂಕು ನೆಗೆಟಿವ್ ಎಂದು ಬಂದಿದೆ ಅಂತಾ ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟ ಪಡಿಸಿದ್ದಾರೆ.
ವೈದ್ಯನೂ ಗುಣಮುಖ? ವೃದ್ದ ಸಾವಿಗೂ ಮುನ್ನ ಆತನಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯನಿಗೂ ಸೋಂಕು ಹರಡಿದ್ದು, ಈತನೂ ಗುಣಮುಖವಾಗಿದ್ದಾನೆ ಎಂದು ಹೇಳಲಾಗಿದೆ.
ಮತ್ತೊಮ್ಮೆ ವೈದ್ಯನ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿಯಾಗಿ ಕಾಯುತ್ತಿದ್ದು, ಮಂಗಳವಾರ ಪ್ರಯೋಗಾಲಯದ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.